ಉಡುಪಿ: ಕಾಂಗ್ರೆಸ್ ಸರಕಾರ ಮಾಡಿದ್ದ ಒಂದು ತಪ್ಪಿನಿಂದ ಪ್ರಸ್ತುತ ವಿಜಯಪುರ ಜಿಲ್ಲೆಯ ರೈತರು 11,500 ಎಕರೆ ಜಮೀನು ಕಳೆದುಕೊಳ್ಳುವ ಪರಿಸ್ಥಿತಿ ಬಂದಿದೆ. ರೈತರ ಹೆಸರಿನಲ್ಲಿದ್ದ ಪಹಣಿಯನ್ನು ಏಕಾಏಕಿ ವಕ್ಫ್ ಮಂಡಳಿ ಹೆಸರಿಗೆ ಮಾಡಲಾಗಿದೆ.
ಇದು ವಿಜಯಪುರ ಜಿಲ್ಲೆ ಮಾತ್ರಲ್ಲದೇ ಉಡುಪಿ, ದ.ಕ. ಸಹಿತ ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಆಗಿರುವ ಸಾಧ್ಯತೆಯಿದೆ. ಸರಕಾರ ಈ ಕೂಡಲೇ ರೈತರ ಹೆಸರಿಗೆ ಪಹಣಿ ವಾಪಸ್ ಮಾಡಬೇಕು, ಇದರ ಬಗ್ಗೆ ಸಮಗ್ರ ತನಿಖೆ ನಡೆಸಬೇಕು ಮತ್ತು ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಆಗ್ರಹಿಸಿದ್ದಾರೆ.
ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದ ತಮ್ಮ ಕಚೇರಿಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ವಿಜಯಪುರ ಜಿಲ್ಲೆಯ ರೈತಾಪಿ ವರ್ಗಕ್ಕೆ ಸಂಕಷ್ಟ ಎದುರಾಗಿದೆ. 11,500 ಎಕರೆ ರೈತರ ಭೂಮಿ ವಕ್ಫ್ ಬೋರ್ಡ್ ಸ್ವಾಧೀನಪಡಿಸಿಕೊಂಡಿದೆ. 1988ರಿಂದ 2018ರ ವರೆಗೂ ಪಹಣಿಯಲ್ಲಿ ರೈತರ ಹೆಸರು ಇತ್ತು. ಪಹಣಿ ವಕ್ಫ್ ಬೋರ್ಡ್ ಪಾಲಾಗಿದೆ.
ಈ ಹಿಂದೆ ಕಾಂಗ್ರೆಸ್ ಸರಕಾರ ರೂಪಿಸಿದ್ದ ಕಾನೂನಿನಿಂದ ಇದೆಲ್ಲ ಸಾಧ್ಯವಾಗಿದೆ. ಒಮ್ಮೆ ವಕ್ಫ್ ಬೋರ್ಡ್ ಇದು ನಮ್ಮ ಆಸ್ತಿ ಎಂದು ಗೊತ್ತುಪಡಿಸಿದರೆ ಜಿಲ್ಲಾಧಿಕಾರಿ, ತಹಶೀಲ್ದಾರ್ ಮೂಲಕ ಆ ಆಸ್ತಿಯನ್ನು ವಕ್ಫ್ ಬೋರ್ಡ್‌ಗೆ ನೀಡುವಂತೆ ಮಾಡಿದೆ. ಒಂದು ಸಮುದಾಯವನ್ನು ಓಲೈಸಲು ರಾಜ್ಯ ಸರಕಾರ ಹೀಗೆ ಮಾಡುತ್ತಿದೆ. ಜನರು ದಂಗೆ ಏಳುವುದೊಂದು ಬಾಕಿಯಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಂದಾಯ ಸಚಿವರು ಮಾತನಾಡಿ 124 ರೈತರಿಗೆ ಕಣ್ತಪ್ಪಿನಿಂದ ನೋಟಿಸ್ ಹೋಗಿದೆ ಎಂದಿದ್ದಾರೆ. ಇದು ಗಂಭೀರ ತಪ್ಪು ಅಲ್ಲ ಎಂದಾದರೆ ಜನರು ಬದುಕುವುದು ಹೇಗೆ ಎಂದು ಪ್ರಶ್ನಿಸಿದರು. ಸರ್ವ ಜನಾಂಗದವರು ನಮ್ಮ ಸರಕಾರಕ್ಕೆ ಒಂದೇ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳುತ್ತಾರೆ. ಆದರೆ ಬಡವರು, ರೈತರ ಭೂಮಿಯನ್ನು ವಕ್ಫ್ ಆಸ್ತಿ ಎನ್ನುತ್ತಿದ್ದರೂ ಕಣ್ಮುಚ್ಚಿ ಕುಳಿತಿದ್ದಾರೆ.
ಹೀಗಾಗಿಯೇ ವಕ್ಫ್ ವಿಚಾರದಲ್ಲಿ ಪಾರದರ್ಶಕತೆಗೆ ಕೇಂದ್ರ ಸರಕಾರ ಕಾನೂನು ರೂಪಿಸಿದೆ. ಮುಂದಿನ ಅಧಿವೇಶನದಲ್ಲಿ ಮಸೂದೆ ಮಂಡನೆಯಾಗಲಿದೆ. ಕಾಯ್ದೆ ಜಾರಿಯಾದ ಅನಂತರದಲ್ಲಿ ಪಾರದರ್ಶಕತೆ ಬರಲಿದೆ. ವಕ್ಫ್ ಬೋರ್ಡ್ ಅಕ್ರಮವಾಗಿ ಭೂಮಿ ವಶಪಡಿಸಲು ಸಾಧ್ಯವಿಲ್ಲ ಎಂದರು.