ಪುತ್ತೂರು: ಹಿಂದೂ ಸಂಸ್ಕೃತಿ, ಸಂಸ್ಕಾರ, ಪರಂಪರೆಗಳ ಮೇಲೆ ದಾಳಿಗಳಾಗುತ್ತಿವೆ. ಇಂತಹ ಸಂದರ್ಭದಲ್ಲಿ ನಾವು ನಮ್ಮತನವನ್ನು ಉಳಿಸಿಕೊಳ್ಳುವುದಕ್ಕೆ ಹೋರಾಡಬೇಕಾದ ಸ್ಥಿತಿಯಲ್ಲಿದ್ದೇವೆ. ದೇಶ, ಸಂಸ್ಕೃತಿಯನ್ನು ರಕ್ಷಿಸಿಕೊಳ್ಳುವುದಕ್ಕೆ ಹಾಗೂ ಧರ್ಮದ ಉಳಿವಿಗಾಗಿ ಪ್ರತಿಯೊಬ್ಬರೂ ತಾನು ಭಗವಾನ್ ಶ್ರೀಕೃಷ್ಣನ ಅಂಶವೆಂದು ಪರಿಭಾವಿಸಿ ಕಾರ್ಯಪ್ರವೃತ್ತರಾಗಬೇಕು ಎಂದು ನೆಲ್ಲಿಕಟ್ಟೆ ಅಂಬಿಕಾ ಪದವಿಪೂರ್ವ ವಿದ್ಯಾಲಯದ ದ್ವಿತೀಯ ವರ್ಷದ ವಾಣಿಜ್ಯ ವಿದ್ಯಾರ್ಥಿ, ವಾಗ್ಮಿ ಸಂಕೇತ್ ಶೆಟ್ಟಿ ವಿಟ್ಲ ಹೇಳಿದರು.
ಅವರು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯಲ್ಲಿನ ಅಂಬಿಕಾ ಮಹಾವಿದ್ಯಾಲಯದಲ್ಲಿ ಆಯೋಜಿಸಲಾದ ‘ದೀಪಾವಳಿ ಹಣತೆ ಬೆಳಗೋಣ’ ಕಾರ್ಯಕ್ರಮವನ್ನು ಉದ್ಘಾಟಿಸಿ ಬುಧವಾರ ಮಾತನಾಡಿದರು.
ತನ್ನ ಹದಿನಾಲ್ಕು ವರ್ಷದ ವನವಾಸವನ್ನು ಮುಗಿಸಿ, ರಾವಣನನ್ನು ವಧಿಸಿ, ಜಾನಕಿ, ಲಕ್ಷ್ಮಣ, ಹನುಮಂತಾದಿಗಳ ಸಹಿತವಾಗಿ ಪ್ರಭು ಶ್ರೀರಾಮಚಂದ್ರ ಅಯೋಧ್ಯೆಗೆ ಮರಳಿದ ಕಾಲದಲ್ಲಿ ಅಲ್ಲಿನ ಪುರಜನರೆಲ್ಲರೂ ದೀಪವನ್ನು ಬೆಳಗಿ ಸಂಭ್ರಮಿಸಿದ ಸಂದರ್ಭವನ್ನು ದೀಪಾವಳಿಯಾಗಿ ಆಚರಿಸುವ ಪದ್ಧತಿ ಬೆಳೆದು ಬಂತು. ನಮ್ಮ ಹಿಂದೂ ಸಂಸ್ಕೃತಿಯ ಪ್ರತಿಯೊಂದು ಆಚರಣೆಗಳ ಹಿಂದೆಯೂ ಮಹತ್ವಪೂರ್ಣವಾದ ಅರ್ಥಗಳು ಹುದುಗಿರುತ್ತವೆ ಎಂಬುದನ್ನು ಅರಿತುಕೊಳ್ಳಬೇಕು ಎಂದರು.
ಇಂದು ಚೀನಾ ನಿರ್ಮಿತ ವಸ್ತುಗಳು ದೀಪಾವಳಿಯಂದು ನಮ್ಮ ಮನೆಗಳಿಗೆ ಪ್ರವೇಶ ಪಡೆಯುತ್ತಿವೆ. ಹೀಗೆ ತನ್ನ ವಸ್ತುಗಳನ್ನು ನಮ್ಮ ದೇಶಕ್ಕೆ ಮಾರಾಟ ಮಾಡಿ ಅದರಿಂದ ಬಂದ ಹಣವನ್ನು ಚೀನಾ ನಮ್ಮ ವಿರುದ್ಧವೇ ಬಳಕೆ ಮಾಡುತ್ತಿದೆ. ನಮ್ಮ ವಿರೋಧಿ ರಾಷ್ಟ್ರವಾದ ಪಾಕಿಸ್ಥಾನವನ್ನು ಪೊರೆಯುವುದಕ್ಕೆ ನಮ್ಮದೇ ಹಣ ವಿನಿಯೋಗವಾಗುತ್ತಿದೆ. ನಾವು ಚೀನಾ ವಸ್ತುಗಳನ್ನು ಕೊಳ್ಳುವುದೆಂದರೆ ನಮ್ಮ ಸೈನಿಕರ ಸಾವಿಗೆ ಮುನ್ನುಡಿ ಬರೆದಂತೆ ಎಂಬ ಎಚ್ಚರಿಕೆ ನಮ್ಮಲ್ಲಿರಬೇಕು ಎಂದು ನುಡಿದರು.
ಅಧ್ಯಕ್ಷತೆ ವಹಿಸಿದ್ದ ಅಂಬಿಕಾ ಮಹಾವಿದ್ಯಾಲಯದ ಪ್ರಾಚಾರ್ಯ ರಾಕೇಶ ಕುಮಾರ್ ಕಮ್ಮಜೆ ಮಾತನಾಡಿ ಹಣತೆ ಎಂಬುದು ಕೇವಲ ಬೆಳಕಿನ ಸಂಕೇತವಷ್ಟೇ ಅಲ್ಲ. ಅದು ಯಶಸ್ಸಿನ ಸಂಕೇತವೂ ಹೌದು, ಗೆಲುವಿನ ದ್ಯೋತಕವೂ ಹೌದು, ಆತ್ಮವಿಶ್ವಾಸದ ಕುರುಹೂ ಹೌದು, ಸಾಮರ್ಥ್ಯದ ಪ್ರತೀಕವೂ ಹೌದು. ನಮ್ಮ ಜನ್ಮದಿನವನ್ನು ಆಚರಿಸಿಕೊಳ್ಳುವಾಗಲೂ ದೀಪ ಬೆಳಗಿ ಸಂಭ್ರಮಿಸುವುದು ನಮ್ಮ ಸಂಪ್ರದಾಯ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿ ಗಣೇಶ ಪ್ರಸಾದ್ ಎ, ಅಂಬಿಕಾ ಮಹಾವಿದ್ಯಾಲಯದ ಐಕ್ಯುಎಸಿ ಘಟಕದ ಸಂಯೋಜಕ ಚಂದ್ರಕಾಂತ ಗೋರೆ, ಸಂಸ್ಕೃತ ವಿಭಾಗ ಮುಖ್ಯಸ್ಥೆ ಶಶಿಕಲಾ ವರ್ಕಾಡಿ, ವಾಣಿಜ್ಯ ವಿಭಾಗ ಮುಖ್ಯಸ್ಥೆ ಅನನ್ಯಾ ವಿ, ವಾಣಿಜ್ಯ ಉಪನ್ಯಾಸಕಿ ಶ್ರೀಕೀರ್ತನಾ, ಪತ್ರಿಕೋದ್ಯಮ ಉಪನ್ಯಾಸಕ ಹರ್ಷಿತ್ ಪಿಂಡಿವನ, ಕನ್ನಡ ಉಪನ್ಯಾಸಕ ಗಿರೀಶ ಭಟ್, ಕೃಷಿಕ ತಿಲಕರಾಜ್ ಉಪಸ್ಥಿತರಿದ್ದರು.
ವಿದ್ಯಾರ್ಥಿನಿ ಶ್ರೀಲಕ್ಮೀ ಪ್ರಾರ್ಥಿಸಿದರು. ವಿದ್ಯಾರ್ಥಿನಿ ಸುಷ್ಮಿತಾ ಸ್ವಾಗತಿಸಿ, ವಿದ್ಯಾರ್ಥಿ ಶ್ರೀವಿತ್ ವಂದಿಸಿದರು. ವಿದ್ಯಾರ್ಥಿನಿ ಮಾನ್ಯ ಕಾರ್ಯಕ್ರಮ ನಿರ್ವಹಿಸಿದರು. ಸಭಾ ಕಾರ್ಯಕ್ರಮದ ಪೂರ್ವದಲ್ಲಿ ನೂರಾರು ಹಣತೆಗಳನ್ನು ಬೆಳಗುವ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.