ಮೈಸೂರು, ನ.06,2024: (www.justkannada.in news) ಲೋಕಾಯುಕ್ತ ಪೊಲೀಸರು ಮತ್ತು ಜಾರಿ ನಿರ್ದೇಶನಾಲಯ (ಇಡಿ) ವಿವಾದಿತ 5050 ಅನುಪಾತ ಯೋಜನೆಯಡಿ ಪರಿಹಾರ ನಿವೇಶನ ಹಂಚಿಕೆಯಲ್ಲಿ ನಡೆದಿರುವ ಅಕ್ರಮಗಳ ಕುರಿತು ತನಿಖೆ ನಡೆಸುತ್ತಿರುವ ಮಧ್ಯೆ, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಸಾಮಾನ್ಯ ಸಭೆ ನಾಳೆ ನಡೆಯಲಿದೆ.
ಮುಡಾ ಅಧ್ಯಕ್ಷರೂ ಆದ ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತರೆಡ್ಡಿ ಅವರ ಅಧ್ಯಕ್ಷತೆಯಲ್ಲಿ ಮುಡಾ ಸಾಮಾನ್ಯ ಸಭೆ ನಡೆಯಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಮುಡಾ ವ್ಯಾಪ್ತಿಗೆ ಒಳಪಡುವ ಕ್ಷೇತ್ರದ ಎಲ್ಲ ಶಾಸಕರು ಮತ್ತು ಎಂಎಲ್ಸಿಗಳಿಗೆ ಸಭೆಯ ನೋಟಿಸ್ ನೀಡಲಾಗಿದೆ.
ನಾಳೆ ಬೆಳಗ್ಗೆ ೧೧ ಗಂಟೆಗೆ ಮುಡಾ ಸಾಮಾನ್ಯ ಸಭೆ ಕರೆಯಲಾಗಿದೆ. ಈ ಸಭೆಯಲ್ಲಿ ಯಾವುದೇ ವಿಶೇಷತೆ ಇಲ್ಲ. ಕಳೆದ ಕೆಲ ತಿಂಗಳಿಂದ ಮುಡಾ ಸಭೆ ನಡೆಯದ ಹಿನ್ನೆಲೆಯಲ್ಲಿ ದೈನಂದಿನ ಕೆಲಸಗಳಿಗೆ ಅಡ್ಡಿಯಾಗಿದ್ದು, ಇದರ ನಿವಾರಣೆಗೆ ಸಭೆ ಕರೆಯಲಾಗಿದೆ. ಬಳಿಕ ಮಾದ್ಯಮಗಳಿಗೆ ಸಭೆಯಲ್ಲಿನ ನಡಾವಳಿ ಹಾಗೂ ತೀರ್ಮಾನಗಳ ಬಗ್ಗೆ ಮಾಹಿತಿ ನೀಡಲಾಗುವುದು ಎಂದು ಮುಡಾ ಅಧ್ಯಕ್ಷರೂ ಆದ ಜಿಲ್ಲಾಧಿಕಾರಿ ಲಕ್ಷ್ಮೀಕಾಂತ ರೆಡ್ಡಿ “ಜಸ್ಟ್ ಕನ್ನಡ” ಕ್ಕೆ ಮಾಹಿತಿ ನೀಡಿದರು.
ಹಸ್ತಾಂತರ :
ಕಳೆದ ವಾರವಷ್ಟೆ, ಮೈಸೂರಿನ 17 ಮುಡಾ ಲೇಔಟ್ಗಳು ಮತ್ತು 900 ಖಾಸಗಿ ಲೇಔಟ್ಗಳ ಪೈಕಿ ಮೊದಲ ಹಂತದಲ್ಲಿ ೨೦೦ ಖಾಸಗಿ ಲೇಔಟ್ ಗಳನ್ನು ಆಯಾ ಸ್ಥಳೀಯ ಸಂಸ್ಥೆಗಳಿಗೆ ಹಸ್ತಾಂತರಿಸಲು ಮುಡಾ ಮತ್ತು ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳ ಸಭೆಯಲ್ಲಿ ಜಿಲ್ಲಾಧಿಕಾರಿ ಲಕ್ಷ್ಮೀಕಾಂತ್ ರೆಡ್ಡಿ ನಿರ್ದೇಶನ ನೀಡಿದ ಮರುದಿನವೇ ನವೆಂಬರ್ 7 ರಂದು ಮುಡಾ ಸಭೆಯ ಘೋಷಣೆಯಾಗಿದೆ.
ಖಾಸಗಿ ಲೇಔಟ್ಗಳಿಗೆ ಖಾತಾ ನೀಡುವ ಪದ್ಧತಿಯನ್ನು ಸ್ಥಗಿತಗೊಳಿಸಲು ಮುಡಾ ನಿರ್ಧರಿಸಿದೆ ಮತ್ತು ಜವಾಬ್ದಾರಿಯನ್ನು ಸ್ಥಳೀಯ ಸಂಸ್ಥೆಗಳಿಗೆ ವರ್ಗಾಯಿಸಿದೆ.
ಮುಡಾ ಆಯುಕ್ತ ರಘುನಂದನ್ ಮಾತನಾಡಿ, ನವೆಂಬರ್ 7 ರಂದು ನಡೆಯಲಿರುವ ಮುಡಾ ಸಾಮಾನ್ಯ ಸಭೆಯಲ್ಲಿ ಪ್ರಾಧಿಕಾರದ ಮುಂದೆ ಬಾಕಿ ಉಳಿದಿರುವ ವಿವಿಧ ಸಮಸ್ಯೆಗಳ ಕುರಿತು ಚರ್ಚಿಸಲಾಗುವುದು ಎಂದರು.
ಕ್ರೆಡೈ ದೂರು :
ಅನುಮೋದನೆಗೆ ಕಾಯುತ್ತಿರುವ ಖಾಸಗಿ ಡೆವಲಪರ್ಗಳ ಯೋಜನೆಗಳು ಸೇರಿದಂತೆ ಬಾಕಿ ಉಳಿದಿರುವ ಸಮಸ್ಯೆಗಳನ್ನು ಸಾಮಾನ್ಯ ಸಭೆಯು ಕೈಗೆತ್ತಿಕೊಳ್ಳುವ ನಿರೀಕ್ಷೆಯಿದೆ. ರಿಯಲ್ ಎಸ್ಟೇಟ್ ಡೆವಲಪರ್ಸ್ ಅಸೋಸಿಯೇಷನ್ ಆಫ್ ಇಂಡಿಯಾ (ಕ್ರೆಡೈ) ಮೈಸೂರು ವಿಭಾಗ ಪ್ರತಿನಿಧಿಸುವ ಮೈಸೂರಿನ ರಿಯಲ್ ಎಸ್ಟೇಟ್ ಡೆವಲಪರ್ಗಳು ಮುಡಾ ಒಂದು ವರ್ಷದಿಂದ ಸಾಮಾನ್ಯ ಸಭೆ ನಡೆಸದ ಕಾರಣ ತಮ್ಮ ಯೋಜನೆಗಳನ್ನು ಸ್ಥಗಿತಗೊಳಿಸಿದ್ದು, ಆರ್ಥಿಕ ನಷ್ಟಕ್ಕೆ ಕಾರಣವಾಯಿತು ಎಂದು ದೂರಿದ್ದಾರೆ.
key words: MUDA meeting, kathas to private layouts, stopped, an important decision, will be made tomorrow.
SUMMARY:
MUDA meeting: The system of giving kathas to private layouts is stopped, an important decision will be made tomorrow…!