ಉಡುಪಿ: ಜಿಲ್ಲೆಯಾದ್ಯಂತ ಭತ್ತದ ಬೆಳೆ ಕಟಾವಿಗೆ ಸಿದ್ದಗೊಂಡಿದ್ದು, ಎಂದಿನಂತೆ ಭತ್ತ ಕಟಾವು ಯಂತ್ರಗಳು ಪ್ರತಿ ಗ್ರಾಮದಲ್ಲಿ ಸಿದ್ದವಾಗಿ ನಿಂತಿವೆ. ಭತ್ತ ಕಟಾವು ಯಂತ್ರಗಳು ಪ್ರತಿ ಗಂಟೆಯೊಂದಕ್ಕೆ ಕಟಾವು ಮಾಡಲು 2400ಕ್ಕೂ ಮಿಕ್ಕಿ ದರ ನಿಗದಿಪಡಿಸಿರುವುದು ರೈತರ ಆತಂಕಕ್ಕೆ ಕಾರಣವಾಗಿದೆ.
ಕೆಲವು ಸಂದರ್ಭಗಳಲ್ಲಿ ಮನಸೋ ಇಚ್ಛೆ ವಸೂಲಿ ಮಾಡಲಾಗುತ್ತಿದೆ. ಬಿಕ್ಕಟ್ಟಿನಲ್ಲಿರುವ ಭತ್ತದ ಕೃಷಿಗೆ ಈ ದರ ಮಾರಕವಾಗಿದೆ. ಜಿಲ್ಲಾಡಳಿತ ಶೀಘ್ರವೇ ಮಧ್ಯ ಪ್ರವೇಶ ಮಾಡಿ ಒಂದು ಗರಿಷ್ಟ ದರ ನಿಗದಿಪಡಿಸಬೇಕಾಗಿ ಎಂದು ಕರ್ನಾಟಕ ಪ್ರಾಂತ ರೈತ ಸಂಘ ಒತ್ತಾಯಿಸಿದೆ.
ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಿದ ಸಂಘವು, ಹೆಚ್ಚಿನ ದರ ವಸೂಲಿ ಮಾಡಿದಲ್ಲಿ ಯಂತ್ರದ ಮಾಲಿಕರ ಮೇಲೆ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿತು.ಜೊತೆಗೆ ಕೃಷಿ ಕೇಂದ್ರಗಳ ಮುಖಾಂತರ ಭತ್ತ ಕಟಾವು ಮೆಷಿನ್ನ್ನು ಒದಗಿಸುವಂತೆಯೂ ಮುಖಂಡರು ಮನವಿ ಮಾಡಿದರು. ಈ ಸಂದರ್ಭ ಸಿಐಟಿಯುನ ಬಾಲಕೃಷ್ಣ ಶೆಟ್ಟಿ, ಸುರೇಶ್ ಕಲ್ಲಾಗಾರ್, ಶಶಿಧರ್ ಗೊಲ್ಲಾ ಮತ್ತಿತರರು ಮನವಿ ಪತ್ರ ಸಲ್ಲಿಸಿದರು.