ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ವಿರುದ್ಧ ಕಾಂಗ್ರೆಸ್ ದೂರು

ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಆರೋಪ ಮಾಡುತ್ತಿರುವ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ವಿರುದ್ಧ ಕಾಂಗ್ರೆಸ್ ದೂರು ಸಲ್ಲಿಸಿದೆ. ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ್ಯ ಡಾ.ಬಿ.ಜೆ. ವಿಜಯಕುಮಾರ್, ನಗರ ಕಾಂಗ್ರೆಸ್ ಅಧ್ಯಕ್ಷ್ಯ ಆರ್.ಮೂರ್ತಿ ನೇತೃತ್ವದ ಕಾಂಗ್ರೆಸ್ ಮುಖಂಡರ ನಿಯೋಗ ಮಂಗಳವಾರ ದೇವರಾಜ ಪೊಲೀಸ್ ಠಾಣೆಯ ಪೊಲೀಸ್ ಇನ್‌ಸ್ಪೆಕ್ಟರ್‌ಗೆ ದೂರು ಸಲ್ಲಿಸಿ, ಸಾಮಾಜಿಕ ಜಾಲತಾಣದಲ್ಲಿ ಆರೋಪ ಮಾಡುತ್ತಿರುವ ಸ್ನೇಹಮಯಿ ಕೃಷ್ಣ ವಿರುದ್ಧ ದೂರು ದಾಖಲಿಸುವಂತೆ ಆಗ್ರಹಿಸಿದ್ದಾರೆ.

ಸಾಮಾಜಿಕ ಜಾಲತಾಣ ಫೇಸ್‌ಬುಕ್ ಖಾತೆಯಲ್ಲಿ ಕ್ರಯಪತ್ರ ನೋಂದಣಿ ಮಾಡಿಸಿಕೊಳ್ಳುವವರು ನೋಂದಣಿಗೆ ಸಂಬಂಧಿಸಿದ ಶುಲ್ಕಗಳನ್ನು ಪಾವತಿ ಮಾಡಬೇಕು. ಅದೇ ರೀತಿ ಎನ್.ಮಂಜುನಾಥ್ ಶುಲ್ಕ ಪಾವತಿ ಮಾಡಿದ್ದಾರೆ. ಆದರೆ, ಸಿದ್ದರಾಮಯ್ಯನವರ ಪತ್ನಿ ಪಾರ್ವತಿ ಅವರು ಕ್ರಯಪತ್ರ ಗಮನಿಸಿ, ಮುಡಾದ ವಿಶೇಷ ತಹಸಿಲ್ದಾರ್ ಮುದ್ರಾಂಕ ಶುಲ್ಕ ಪಾವತಿ ಮಾಡಿದ್ದಾರೆ ಎಂಬುದು ಖಚಿತವಾಗಿ ತಿಳಿದು ಬಂದಿರುತ್ತದೆ. ನನ್ನ ಆರೋಪಕ್ಕೆ ಇದಕ್ಕಿಂತ ಸಾಕ್ಷಿ ಬೇಕಾ? ಸಿದ್ದರಾಮಯ್ಯ ರಾಜ್ಯದ ಜನತೆಗೆ ಉತ್ತರಿಸುವರೇ? ಎಂದು ಒತ್ತಾಯಿಸಿದ್ದಾರೆ.

ಈ ರೀತಿ ಸುಳ್ಳು ಆರೋಪಗಳನ್ನು ನಿರಂತರವಾಗಿ ಮಾಡುತ್ತ ಮುಖ್ಯಮಂತ್ರಿಗಳನ್ನು ತೇಜೋವಧೆ ಮಾಡುವುದಲ್ಲದೆ ಜನ ಸಾಮಾನ್ಯರಲ್ಲಿ ತಪ್ಪು ಕಲ್ಪನೆ ಮತ್ತು ತಪ್ಪಿತಸ್ಥರು ಎಂದು ಬಿಂಬಿಸುವ ಕೆಲಸವನ್ನು ಕಳೆದ ೨ ತಿಂಗಳುಗಳಿಂದ ಸ್ನೇಹಮಯಿ ಕೃಷ್ಣ ಮಾಡುತ್ತಿದ್ದಾರೆ. ಇದಲ್ಲದೆ ಇವರು ಮತ್ತು ಟಿ.ಜೆ.ಅಬ್ರಹಾಂ ನ್ಯಾಯಾಲಯದ ಮೊರೆ ಹೋಗಿ ಮುಡಾ ವಿಚಾರಕ್ಕೆ ಲೋಕಾಯುಕ್ತ ತನಿಖೆಗೆ ವಹಿಸಬೇಕೆಂದು ಕೋರಿದ್ದಾರೆ. ಲೋಕಾಯುಕ್ತ ತನಿಖೆ ನಡೆಸುತ್ತಿದೆ.

ಆದರೆ, ಕೃಷ್ಣ ಅವರು ಲೋಕಾಯುಕ್ತ ತನಿಖೆ ಸರಿಯಾಗಿ ನಡೆಸುತ್ತಿಲ್ಲವೆಂದು ಮತ್ತು ತನಿಖಾಧಿಕಾರಿಯ ವಿರುದ್ಧ ಲೋಕಾಯುಕ್ತ ಎಡಿಜಿಪಿಗೆ ದೂರು ನೀಡುವುದಲ್ಲದೆ ತನಿಖಾಧಿಕಾರಿಗೆ ದಿನನಿತ್ಯ ಬ್ಲಾಕ್‌ಮೇಲ್ ಮತ್ತು ಒತ್ತಡ ತರುತ್ತಿರುವುದು ಮಾಧ್ಯಮಗಳಲ್ಲಿ ಗಮನಿಸಿರುತ್ತೇವೆ. ತನಿಖೆಯ ವರದಿಯನ್ನು ನ್ಯಾಯಾಲಯಕ್ಕೆ ಲೋಕಾಯುಕ್ತ ಅಧಿಕಾರಿಗಳು ಇನ್ನೂ ಸಲ್ಲಿಸಿಲ್ಲ. ತನಿಖೆ ವಿಚಾರಣೆ ಹಂತದಲ್ಲಿರುವಾಗ ತನಿಖೆ ಸರಿಯಿಲ್ಲವೆಂದು ಹೇಳುತ್ತಿರುವುದು ಹೇಗೆ ಎಂಬುದು ಗೊತ್ತಾಗಬೇಕೆಂದು ದೂರಿನಲ್ಲಿ ಒತ್ತಾಯಿಸಲಾಗಿದೆ.

ಮುಖ್ಯಮಂತ್ರಿ ಅವರ ಪತ್ನಿ ಪಾವರ್ತಿ ಅವರ ನಿವೇಶನ ನೋಂದಣಿಗೆ ವಿಶೇಷ ತಹಸೀಲ್ದಾರ್‌ ಮುದ್ರಾಂಕ ಶುಲ್ಕ ಪಾವತಿ ಮಾಡಿದ್ದಾರೆ ಎಂದು ಅಪಪ್ರಚಾರ ಮಾಡಿರುತ್ತಾರೆ. ಇವರ ಫೇಸ್‌ಬುಕ್‌ನಲ್ಲಿ ಹಾಕಿರುವ ನೋಂದಣಿ ಹಾಗೂ ಮುದ್ರಾಂಕ ಪ್ರಮಾಣ ಪತ್ರದಲ್ಲಿ 550 ರೂ. ನಿಗದಿತ ಮುದ್ರಾಂಕ ಶುಲ್ಕವಾಗಿ ಪಾವತಿಸಿರುವುದನ್ನು ಅಧಿಕಾರ ದುರುಪಯೋಗ ಎಂದು ಹೇಳಿಕೊಳ್ಳುತ್ತಿರುವುದು ಜನರ ದಿಕ್ಕನ್ನು ತಪ್ಪಿಸುವುದು ಮತ್ತು ಮುಖ್ಯಮಂತ್ರಿಗಳನ್ನು ಖಳನಾಯಕರನ್ನಾಗಿ ಬಿಂಬಿಸುವ ದುರುದ್ದೇಶವಾಗಿರುತ್ತದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಸ್ನೇಹಮಯಿ ಕೃಷ್ಣರವರ ಮಾಡುತ್ತಿರುವ ಆರೋಪ ಸತ್ಯಕ್ಕೆ ದೂರವಾದದ್ದು ಮತ್ತು ದುರುದ್ದೇಶದಿಂದ ಕೂಡಿರುತ್ತದೆ. ಸತ್ಯಾಸತ್ಯತೆಗಳನ್ನು ಪರಿಶೀಲಿಸಿ, ಸುಳ್ಳು ಸುದ್ದಿ ಹರಡುವುದನ್ನು ಮತ್ತು ಬ್ಲಾಕ್‌ಮೇಲ್ ಮಾಡುತ್ತಿರುವ ಸ್ನೇಹಮಯಿ ಕೃಷ್ಣ ವಿರುದ್ಧ ಸೂಕ್ತ ಕಾನೂನು ರೀತಿ ಕ್ರಮ ಕೈಗೊಳ್ಳಬೇಕೆಂದು ಕೋರಿದ್ದಾರೆ. ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ್ಯ ಬಿ.ಎಂ. ರಾಮು, ಸೇವಾದಳದ ಗಿರೀಶ್, ಜಿಲ್ಲಾ ಮಾಧ್ಯಮ ವಕ್ತಾರ ಕೆ.ಮಹೇಶ್ ಇದ್ದರು.

Font Awesome Icons

Leave a Reply

Your email address will not be published. Required fields are marked *