ಬೆಂಗಳೂರು, ನವೆಂಬರ್ 13,2024 (www.justkannada.in): ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿದೆ ಎನ್ನಲಾದ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಹೊಣೆ ಸಿಬಿಐಗೆ ವಹಿಸಲು ಹೈಕೋರ್ಟ್ ನಿರಾಕರಿಸಿದೆ.
ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮ ಅಕ್ರಮ ಹಣ ವರ್ಗಾವಣೆ ಪ್ರಕರಣ. ತನಿಖೆಯನ್ನು ಸಿಬಿಐಗೆ ವಹಿಸಬೇಕು ಎಂದು ಯೂನಿಯನ್ ಬ್ಯಾಂಕ್ ರಿಟ್ ಅರ್ಜಿ ಸಲ್ಲಿಸಿತ್ತು. ಈ ಅರ್ಜಿ ವಿಚಾರಣೆ ನಡೆಸಿದ ನ್ಯಾ.ಎಂ.ನಾಗಪ್ರಸನ್ನ ಅವರಿದ್ದ ಹೈಕೋರ್ಟ್ ಪೀಠವು ರಿಟ್ ಅರ್ಜಿಯನ್ನು ವಜಾಗೊಳಿಸಿ ಪ್ರಕರಣವನ್ನ ಸಿಬಿಐಗೆ ವಹಿಸಲು ನಿರಾಕರಿಸಿದೆ.
ಬ್ಯಾಂಕಿಂಗ್ ನಿಯಂತ್ರಣ ಅಧಿನಿಯಮ ಸೆ.35 ಎ ಅಡಿಯ ವ್ಯಾಖ್ಯಾನ ಒಪ್ಪಲಾಗುವುದಿಲ್ಲ. ಸೆ. 35 ಎ ವ್ಯಾಖ್ಯಾನ ಪರಿಗಣಿಸಿ ಸಿಬಿಐ ತನಿಖೆಗೆ ವಹಿಸಲಾಗುವುದಿಲ್ಲ. ಅನುಮತಿ ನೀಡಿದರೆ ಎಲ್ಲ ಬ್ಯಾಂಕ್ ಗಳೂ ಇದನ್ನೇ ಕೇಳಬಹುದು. ಆಗ ದೆಹಲಿ ಸ್ಪೆಷಲ್ ಪೊಲೀಸ್ ಎಸ್ಟಾಬ್ಲಿಷ್ಮೆಂಟ್ ಆಯಕ್ಟ್ ನಿರರ್ಥಕವಾಗಬಹುದು ಎಂದು ನ್ಯಾ. ಎಂ. ನಾಗಪ್ರಸನ್ನ ಅವರಿದ್ದ ಹೈಕೋರ್ಟ್ ಪೀಠ ಅಭಿಪ್ರಾಯ ಪಟ್ಟಿದೆ.
ಪ್ರಕರಣ ಸಂಬಂಧ ಅಕ್ರಮದಲ್ಲಿ ಭಾಗಿಯಾದ ಆರೋಪ ಎದುರಿಸುತ್ತಿದ್ದ ಬಿ. ನಾಗೇಂದ್ರ ಅವರು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ನಂತರ ಅವರನ್ನು ಇಡಿ ಬಂಧಿಸಿತ್ತು. ಬಳಿಕ ಬಿ.ನಾಗೇಂದ್ರ ನ್ಯಾಯಾಂಗ ಬಂಧನಕ್ಕೊಳಗಾಗಿದ್ದರು. ಜಾಮೀನು ಪಡೆದು ಬಿ.ನಾಗೇಂದ್ರ ಹೊರಬಂದಿದ್ದಾರೆ.
Key words: High Court, refuses, CBI, probe, Valmiki Corporation scam