ಸುತ್ತೂರು: ಭಾರತ ಸರ್ಕಾರದ ಎನ್.ಎ.ಡಿ.ಸಿ.ಪಿ ಯೋಜನೆಯಡಿಯಲ್ಲಿ ದೇಶಾದ್ಯಂತ ರಾಸುಗಳಿಗೆ ಕಾಲು ಬಾಯಿ ಜ್ವರದ ವಿರುದ್ದದ ಲಸಿಕಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಪಶುಪಾಲನಾ ಇಲಾಖೆಯ ಅಪರ ನಿರ್ದೇಶಕರಾದ ಡಾ.ಶಿವರುದ್ರಪ್ಪ ತಿಳಿಸಿದರು.
ನಂಜನಗೂಡು ತಾಲ್ಲೂಕು ಹದಿನಾರು ಗ್ರಾಮದಲ್ಲ್ಲಿ ರಾಸುಗಳಿಗೆ ಕಾಲು ಬಾಯಿ ಜ್ವರದ ವಿರುದ್ದದ 6ನೇ ಸುತ್ತಿನ ಉಚಿತ ಲಸಿಕೆಯನ್ನು ನೀಡಿ ಮಾತನಾಡುತ್ತಾ ಕೇಂದ್ರ ಸರ್ಕಾರದ ಎನ್.ಎ.ಡಿ.ಸಿ.ಪಿ ಯೋಜನೆಯಡಿಯಲ್ಲಿ ದೇಶಾದ್ಯಂತ ರಾಸುಗಳಿಗೆ ಕಾಲುಬಾಯಿ ಜ್ವರದ ವಿರುದ್ದ ಲಸಿಕಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಈ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಈಗಾಗಲೇ 5 ಸುತ್ತುಗಳಲ್ಲಿ ಲಸಿಕೆಯನ್ನು ನೀಡಲಾಗಿದ್ದು, ಈಗ 6ನೇ ಸುತ್ತಿಗೆ ಈಗಾಗಲೇ ಚಾಲನೆ ನೀಡಲಾಗಿದ್ದು, ಈ ನವೆಂಬರ್ 20 ರವರೆಗೂ ಈ ಕಾರ್ಯಕ್ರಮ ಜಾರಿಯಲ್ಲಿದ್ದು, ನಮ್ಮ ಇಲಾಖೆಯ ಸಿಬ್ಬಂದಿಗಳು ಮನೆ ಮನೆಗಳಿಗೆ ತೆರಳಿ ರಾಸುಗಳಿಗೆ ಕಾಲುಬಾಯಿ ಜ್ವರದ ವಿರುದ್ದ ಉಚಿತ ಲಸಿಕೆಯನ್ನು ನೀಡಲಿದ್ದಾರೆ.
ಈ ವೇಳೆ ಯಾವುದಾದರೂ ಜಾನುವಾರುಗಳಿಗೆ ಲಸಿಕೆ ತಪ್ಪಿ ಹೋದರೆ ಮತ್ತೆ ಕೂಂಬಿಂಗ್ ಅವಧಿಯನ್ನು ನಿಗದಿಪಡಿಸಿ ಉಳಿದ ರಾಸುಗಳಿಗೆ ಲಸಿಕೆ ನೀಡಲಾಗುವುದು, ರೈತರು ಯಾವುದೇ ರೀತಿಯಲ್ಲಿ ಈ ಅವಕಾಶವನ್ನು ತಪ್ಪಿಸಿಕೊಳ್ಳದೇ ರಾಸುಗಳಿಗೆ ಲಸಿಕೆ ಕೊಡಿಸುವ ಮೂಲಕ ಸದುಪಯೋಗಪಡಿಸಿಕೊಂಡು ತಮ್ಮ ರಾಸುಗಳನ್ನು ಈ ರೋಗದಿಂದ ಮುಕ್ತವಾಗಿಸಲು ಪಣತೊಡಬೇಕಾಗಿದೆ ಎಂದರಲ್ಲದೇ ಯಾವುದೇ ರಾಸುಗಳಿಗೆ ಈ ರೋಗ ಬಂದ ನಂತರ ಗುಣವಾದರೂ ಹಸುಗಳಾದರೆ ಹಾಲು ನೀಡುವ ಸಾಮರ್ಥ್ಯ ಕ್ಷೀಣಿಸುತ್ತದೆ, ಹಾಗೂ ಫಲವಂತಿಕೆ ಸಹ ಕಡಿಮೆಯಾವುದು ಮತ್ತು ಎತ್ತುಗಳಾದರೆ ಅವು ಕೆಲಸ ಮಾಡುವ ಶಕ್ತಿ ಸಾಮರ್ಥ್ಯ ಕಡಿಮೆಯಾಗುತ್ತದೆ.
ಹಾಲು ಮತ್ತು ಅದರ ಉತ್ಪನ್ನಗಳನ್ನು ವಿದೇಶಗಳಿಗೆ ರಪ್ತು ಮಾಡುವುದರ ಮೇಲೂ ಪರಿಣಾಮ ಬೀರುವುದರಿಂದ ಈ ರೋಗವನ್ನು ನಿಯಂತ್ರಣ ಮಾಡಬೇಕೆಂದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪಣತೊಟ್ಟು ಈ ಲಸಿಕೆಯನ್ನು ಉಚಿತವಾಗಿ ನೀಡಲಾಗುತ್ತಿದೆ, ಆದ್ದರಿಂದ ಈ ರೋಗ ಜಾನುವಾರುಗಳಿಗೆ ಬಾರದಂತೆ ರಕ್ಷಣೆ ಮಾಡಿಕೊಂಡರೆ ಅನುಕೂಲವಾಗುತ್ತದೆ ಎಂದು ಡಾ||ಶಿವರುದ್ರಪ್ಪ ರಾಸುಗಳ ಮಾಲೀಕರುಗಳಿಗೆ ತಿಳಿಸಿದರಲ್ಲದೇ ಸುತ್ತಮುತ್ತಲ ಗ್ರಾಮಗಳಾದ ಸುತ್ತೂರು, ಹೊಸಕೋಟೆ, ಸೇರಿದಂತೆ ಮುಂತಾದ ಗ್ರಾಮಗಳಿಗೆ ಭೇಟಿ ನೀಡಿ ರಾಸುಗಳಿಗೆ ಲಸಿಕೆ ಕೊಡಿಸುವ ಬಗ್ಗೆ ರಾಸುಗಳ ಮಾಲೀಕರುಗಳಿಗೆ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಇಲಾಖೆಯ ಜಿಲ್ಲಾ ಉಪ ನಿರ್ದೇಶಕರಾದ ಡಾ.ನಾಗರಾಜು, ಡಾ||ಪೂರ್ಣಾನಂದ, ನಂಜನಗೂಡು ಸಹಾಯಕ ನಿರ್ದೇಶಕರಾದ ಡಾ||ಮಲ್ಲಿಕಾರ್ಜುನ್, ಡಾ.ಚೇತನ್, ಪಶುಪರೀಕ್ಷಕ ಶಿವಕುಮಾರ್, ಗ್ರಾ.ಪಂ ಸದಸ್ಯ ರವಿಕುಮಾರ್, ಸಿಬ್ಬಂದಿ ಬಸವಣ್ಣ, ರಾಸುಗಳ ಮಾಲೀಕರಾದ ಹೆಚ್.ಆರ್.ಮಹೇಶ್, ಸೇರಿದಂತೆ ಹಲವರು ಇದ್ದರು.