ಉಡುಪಿ: ಉಡುಪಿ ಕೃಷ್ಣಮಠ ಪರ್ಯಾಯ ಪುತ್ತಿಗೆ ಮಠ ಹಾಗೂ ಬುಡೋಕಾನ್ ಕರಾಟೆ ಆ್ಯಂಡ್ ಸ್ಪೋರ್ಟ್ಸ್ ಅಸೋಸಿಯೇಷನ್ ಕರ್ನಾಟಕ ಇದರ ಜಂಟಿ ಆಶ್ರಯದಲ್ಲಿ ಶ್ರೀಕೃಷ್ಣಮಠದ ಮಧ್ವಾಂಗಣದಲ್ಲಿ ಎರಡು ದಿನಗಳ ‘4ನೇ ರಾಷ್ಟ್ರೀಯ ಮಟ್ಟದ ಓಪನ್ ಕರಾಟೆ ಚಾಂಪಿಯನ್ ಶಿಪ್’ ಅನ್ನು ಆಯೋಜಿಸಲಾಯಿತು.
ಕರಾಟೆ ಸ್ಪರ್ಧಾಕೂಟವನ್ನು ಉದ್ಘಾಟಿಸಿ ಮಾತನಾಡಿದ ಪರ್ಯಾಯ ಪುತ್ತಿಗೆ ಮಠಾಧೀಶರಾದ ಸುಗುಣೇಂದ್ರತೀರ್ಥ ಶ್ರೀಪಾದರು, ನಮ್ಮನ್ನು ನಾವೇ ಆತ್ಮರಕ್ಷಣೆ ಮಾಡಿಕೊಳ್ಳುವ ಕಲೆ ಕರಾಟೆ. ಇದನ್ನು ಕಲಿಯುವುದು ಇಂದಿನ ಅಗತ್ಯ. ಹೀಗಾಗಿ ಈ ಕಲೆಯನ್ನು ಎಲ್ಲರೂ ನಿರಂತರವಾಗಿ ಅಭ್ಯಾಸ ಮಾಡಬೇಕು ಎಂದರು.
ಶ್ರೀಕೃಷ್ಣ ಮಲ್ಲ ಯುದ್ಧದಲ್ಲಿ ನಿಪುಣ. ಮಲ್ಲನ ಅಧಿಪತಿ ಕೃಷ್ಣನ ನಾಡಿನಲ್ಲಿ ಕರಾಟೆ ಸ್ಪರ್ಧೆ ನಡೆಯುತ್ತಿರುವುದು ಕೃಷ್ಣನಿಗೂ ಅತ್ಯಂತ ಸಂತೋಷದಾಯಕ ವಿಷಯವಾಗಿದೆ ಎಂದು ಹೇಳಿದರು.
ಅಂಬಲಪಾಡಿ ಜನಾರ್ಧನ ಮತ್ತು ಮಹಾಕಾಳಿ ದೇವಸ್ಥಾನದ ಧರ್ಮದರ್ಶಿ ಡಾ. ನಿ. ಬೀ. ವಿಜಯ ಬಲ್ಲಾಳ್ ಅಧ್ಯಕ್ಷತೆ ವಹಿಸಿದ್ದರು. ಪುತ್ತಿಗೆ ಕಿರಿಯ ಮಠಾಧೀಶರಾದ ಸುಶೀಂದ್ರತೀರ್ಥ ಶ್ರೀಪಾದರು, ನಗರಸಭೆ ಅಧ್ಯಕ್ಷ ಪ್ರಭಾಕರ ಪೂಜಾರಿ, ಸಮಾಜ ಸೇವಕ ಈಶ್ವರ್ ಮಲ್ಪೆ, ಮಲ್ಪೆ ಬಿಲ್ಲವ ಸೇವಾ ಸಂಘದ ಅಧ್ಯಕ್ಷ ಗೋಪಾಲ್ ಸಿ. ಬಂಗೇರ, ಅಂಬಲಪಾಡಿ ಬಿಲ್ಲವ ಸೇವಾ ಸಂಘದ ಅಧ್ಯಕ್ಷ ಶಿವಕುಮಾರ್ ಅಂಬಲಪಾಡಿ, ಬಿಕೆಎಸ್ ಐ ಗೌರವ ಸಲಹೆಗಾರ ಪ್ರಕಾಶ್ ಮಲ್ಪೆ, ರಾಷ್ಟ್ರೀಯ ಮುಖ್ಯ ಶಿಕ್ಷಕ ವಾಮನ್ ಪಾಲನ್ ಮೊದಲಾದವರು ಉಪಸ್ಥಿತರಿದ್ದರು.