ಬಿ.ಸಿ.ರೋಡ್ ನಲ್ಲಿ ನೇತ್ರಾವತಿ ನದಿಗೆ ಕಟ್ಟಲಾದ ಮೂರನೇ ಸೇತುವೆ ಸಂಪೂರ್ಣ: ವಾಹನ ಸಂಚಾರ ಆರಂಭ

ಬಂಟ್ವಾಳ: ಬಿ.ಸಿ.ರೋಡ್ ನಿಂದ ಅಡ್ಡಹೊಳೆವರೆಗೆ ಚತುಷ್ಪಥ ರಸ್ತೆ ಕಾಮಗಾರಿಗೆ ವೇಗ ದೊರಕುತ್ತಿದ್ದಂತೆಯೇ ಬಿ.ಸಿ.ರೋಡ್ ನಲ್ಲಿ ನೇತ್ರಾವತಿ ನದಿಗೆ ಕಟ್ಟಲಾದ ಮೂರನೇ ಸೇತುವೆ ಸಂಪೂರ್ಣಗೊಂಡು ವಾಹನ ಸಂಚಾರ ಆರಂಭಗೊಂಡಿದೆ.

ಶುಕ್ರವಾರ ಪ್ರಾಯೋಗಿಕ ಓಡಾಟ ನಡೆದಿದ್ದರೆ, ಶನಿವಾರದಿಂದ ಸರಾಗವಾಗಿ ವಾಹನಗಳು ಓಡಾಡಲಾರಂಭಿಸಿವೆ. ಈಗ ಅಕ್ಕಪಕ್ಕ ಎರಡೂ ಸೇತುವೆಗಳು ಹೋಗಲು ಮತ್ತು ಬರಲು ಉಪಯೋಗವಾಗುತ್ತಿದ್ದು, ಎದುರಿನಿಂದ ವಾಹನಗಳು ಸಿಗುವ ಸಾಧ್ಯತೆಗಳಿಲ್ಲ.

ಕೆ.ಎನ್.ಆರ್. ಕನ್ಸಸ್ಟ್ರಕ್ಷನ್ಸ್ ಗುತ್ತಿಗೆ ವಹಿಸಿಕೊಂಡಿರುವ ಬಿ.ಸಿ.ರೋಡ್ ಭಾಗದ ಕಾಮಗಾರಿಯಲ್ಲಿ ಸೇತುವೆ ಪೂರ್ಣಗೊಳಿಸಿ ಓಡಾಟ ಆರಂಭಗೊಂಡಿರುವುದು ಮಹತ್ವದ ಹೆಜ್ಜೆಯಾಗಿದ್ದು, ಬಿ.ಸಿ.ರೋಡ್ ಸರ್ಕಲ್ ಭಾಗದಿಂದ ಹಳೆ ಸೇತುವೆ ಕಡೆಗೆ ತಿರುಗುವ ಭಾಗವನ್ನು ಕಲ್ಲುಗಳಿಂದ ಮುಚ್ಚಿ ಡಿವೈಡರ್ ರೀತಿ ಮಾಡಲಾಗಿದೆ. ಆದಾಗ್ಯೂ ಸೇತುವೆ ಸಾಗರ್ ಹಾಲ್ ಗಿಂತ ಮೊದಲು ತಲುಪುವ ಭಾಗ ವಾಹನ ಸವಾರರು ಜಾಗರೂಕರಾಗಿರಬೇಕಾಗಿದ್ದು, ವೇಗಕ್ಕೆ ಕಡಿವಾಣ ಹಾಕುವ ಅಗತ್ಯವಿದೆ.

ಸೇತುವೆ ಎಷ್ಟು ಉದ್ದ, ಎತ್ತರ?

ಈಗ ಕೆಎನ್ ಆರ್ ಕನ್ಸ್ ಸ್ಟ್ರಕ್ಷನ್ಸ್ ಗುತ್ತಿಗೆ ವಹಿಸಿಕೊಂಡು ಕೆಲಸ ನಡೆಸಿದೆ. ಸುಮಾರು ಮೂರು ವರ್ಷಗಳ ಕೆಲಸದಲ್ಲಿ ಇದು ಪೂರ್ಣಗೊಂಡಿದೆ. ಹೆಚ್ಚು ಅಗಲವಾದ ೩೮೬ ಮೀ. ಉದ್ದದ ಸೇತುವೆ ನಿರ್ಮಾಣವಾಗಿದೆ. ನೂತನ ಸೇತುವೆ ೧೩.೫ ಮೀಟರ್ ಅಗಲ, ನದಿಯಿಂದ ಸುಮಾರು ೧೬ ಮೀ. ಎತ್ತರದಲ್ಲಿ ನಿರ್ಮಾಣವಾಗಿದೆ. ೩೮೬ ಮೀ. ಉದ್ದವನ್ನು ಹೊಂದಿದೆ. ಸೇತುವೆಯ ಎರಡೂ ಬದಿಗಳಲ್ಲಿ ಅಬಾರ್ಡ್ಮೆಂಟ್ಗಳಿವೆ, ಸರಾಸರಿ ೩೮ ಮೀ. ಅಂತರದಲ್ಲಿ ೧೧ ಪಿಲ್ಲರ್ಗಳು ನಿರ್ಮಾಣಗೊಂಡಿವೆ.

ಪಾಣೆಮಂಗಳೂರು ಮೆಲ್ಕಾರ್ ಮೇಲ್ಸೇತುವೆ:

ಮೆಲ್ಕಾರ್ ಹಾಗೂ ಪಾಣೆಮಂಗಳೂರಿನ ಅಂಡರ್ ಪಾಸ್ ಹೊಂದಿರುವ ಮೇಲ್ಸೇತುವೆಯ ಪೈಕಿ ಈಗಾಗಲೇ ಪಾಣೆಮಂಗಳೂರು ಮೇಲ್ಸೇತುವೆಯಲ್ಲಿ ವಾಹನಗಳು ಓಡಾಡುತ್ತಿದ್ದು, ಈ ತಿಂಗಳಾಂತ್ಯದಲ್ಲೇ ಮೇಲ್ಕಾರ್ ಸಾರ್ವಜನಿಕ ಸಂಚಾರಕ್ಕೆ ಮುಕ್ತಗೊಳ್ಳಲಿದೆ. ಹೀಗಾದರೆ, ವಾಹನದಟ್ಟಣೆಗೆ ಬ್ರೇಕ್ ಬೀಳಬಹುದು. ಆದಾಗ್ಯೂ ಬಹುದೊಡ್ಡ ಸವಾಲಾಗಿರುವ ಮೆಲ್ಕಾರ್ ನಿಂದ ಕಲ್ಲಡ್ಕ ರಸ್ತೆ ಅಗಲಗೊಳ್ಳುವ ಕಾಮಗಾರಿ ಇನ್ನೂ ಜಾರಿಯಲ್ಲಿರುವ ಕಾರಣ, ವಾಹನ ಸವಾರರು ಬವಣೆಪಡುವುದು ತಪ್ಪಿದ್ದಲ್ಲ.

ಹೊಸತು ಬಂತೆಂದು ಹಳೆಯದನ್ನು ಮರೆಯಬೇಡಿ..!

ಗಂಡ ಹೊಸ ಸೀರೆ ತರುತ್ತಾಳೆಂದು, ಹೆಂಡತಿ ಇದ್ದ ಸೀರೆಯನ್ನು ಸುಟ್ಟು ಕಾದು ಕೂತಳಂತೆ… ಎಂಬ ಗಾದೆ ಮಾತಿನಂತೆ ಹೊಸ ಸೇತುವೆ ಬಂತೆಂದು ಸಂಬಂಧ ಪಟ್ಟ ಇಲಾಖೆ‌ಹಳೆ ಸೇತುವೆಯ‌ ನಿರ್ವಹಣೆಯಲ್ಲಿ ನಿರ್ಲಕ್ಷ್ಯ ಮಾಡಬಾರದು. ಈಗಿನ ಹೊಸ ಸೇತುವೆಯ ಪಕ್ಕದಲ್ಲೇ ಇರುವ ಸೇತುವೆಯಲ್ಲಿ ಡಾಮರು ಕಿತ್ತು ಹೋಗಿದ್ದು, ಅದನ್ನು ತಕ್ಷಣ ಸರಿಪಡಿಸುವ ಕಾರ್ಯ ಇಲಾಖೆಯಿಂದ ಆಗಬೇಕಿದೆ.

ಒಂದು ಊರು, ಸೇತುವೆ ಮೂರು

ಹಿಂದೆಲ್ಲ ಬ್ರಿಟಿಷರ ಕಾಲದ ಗಟ್ಟಿಮುಟ್ಟಿನ (೧೯೧೬ರಲ್ಲಿ ನಿರ್ಮಾಣ) ಪಾಣೆಮಂಗಳೂರಿನ ಸೇತುವೆ ಜನಸಾಮಾನ್ಯರ ಆಡುಭಾಷೆಯಲ್ಲಿ ಪಾಣೇರ್ ಸಂಕ ಮೈಲುದ್ದದ ಕ್ಯೂನಿಂದ ಪ್ರಸಿದ್ಧಿ ಪಡೆದಿತ್ತು. ಒಂದು ಘನ ವಾಹನ ಹೋದರೆ ಮತ್ತೊಂದು ವಾಹನ ಸಾಗಲು ಅನಾನುಕೂಲವಾಗುವಂಥ ಮೊದಲ ಸೇತುವೆ ಆ ಕಾಲದ ವಾಹನದಟ್ಟಣೆಯನ್ನು ಅನುಸರಿಸಿ ನಿರ್ಮಿಸಲಾಗಿತ್ತು. ಅದಾದ ಬಳಿಕ ದ್ವಿಪಥ ರಸ್ತೆ ನಿರ್ಮಾಣ ಸಂದರ್ಭ ೨೦೦೨-೦೩ರ ಸಂದರ್ಭ ಹೊಸ ಸೇತುವೆಯನ್ನು ನಿರ್ಮಿಸಲಾಯಿತು. ಇದೀಗ ಆ ಸೇತುವೆ ಬಿ.ಸಿ.ರೋಡಿಗೆ ಬರುವ ವಾಹನಗಳಿಗಾಗಿ ಮೀಸಲಾದರೆ, 2024ರ ನವೆಂಬರ್ 15ರಂದು ಸಂಚಾರಕ್ಕೆ ಮುಕ್ತಗೊಂಡ ಹೊಸ ಸೇತುವೆ ಬಿ.ಸಿ.ರೋಡಿನಿಂದ ಹೋಗುವ ವಾಹನಗಳಿಗಷ್ಟೇ ಮೀಸಲಾಗಿದೆ. ಒಟ್ಟು ಒಂದೇ ಊರಿನಲ್ಲಿ ಮೂರು ಸೇತುವೆಯನ್ನು ಕಾಣುವ ಯೋಗ ಬಿ.ಸಿ.ರೋಡ್ ಜನರದ್ದು.

Font Awesome Icons

Leave a Reply

Your email address will not be published. Required fields are marked *