ಸಮಾನತೆಗಾಗಿ ಪ್ರತಿಭಟನೆ ದಾಖಲಿಸಿದ ಕಲಿ ಕನಕದಾಸರು; ಗೋವಿಂದರಾಜು ಅಭಿಮತ » Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್


ಮೈಸೂರು, ನವೆಂಬರ್,18,2024 (www.justkannada.in):  ಸಮಾನತೆಗಾಗಿ ಪ್ರತಿಭಟನೆ ದಾಖಲಿಸಿದ ಕಲಿ ಕನಕದಾಸರು ಎಂದು ಅಧ್ಯಾಪಕ ಗೋವಿಂದರಾಜು ಅಭಿಮತ ವ್ಯಕ್ತಪಡಿಸಿದರು.

ಮೈಸೂರಿನ ಮಹಾರಾಣಿ ಮಹಿಳಾ ವಿಜ್ಞಾನ ಸ್ವಾಯತ್ತ ಕಾಲೇಜಿನಲ್ಲಿ ಇಂದು ಸಂತ ಕನಕದಾಸರ ಜಯಂತಿ ಆಚರಿಸಲಾಯಿತು. ಸಮಾರಂಭದಲ್ಲಿ ಮಾತನಾಡಿದ ಅಧ್ಯಾಪಕ ಗೋವಿಂದರಾಜು, ಕನಕದಾಸರಿಗೆ ಕೃಷ್ಣನ ದರ್ಶನಕ್ಕೆ ಅವಕಾಶ ನೀಡದಿದ್ದಾಗ ಅನುಯಾಯಿಗಳು,  ಕನಕದಾಸರ ಜತೆ ನಿಂತು ಪ್ರತಿಭಟಿಸಿದರು. ಹಾಗಾಗಿ, ಪರಿಹಾರವಾಗಿ ಕಿಂಡಿಯ ಮಾರ್ಗ ಬಂದಿತು. ಇದು ಕನಕರ ಹೋರಾಟಕ್ಕೆ ಸಂದ ಗೆಲುವು. ಅಷ್ಟೇ ಅಲ್ಲ, ಸಮಾನತೆಗಾಗಿ ಮಿಡಿಯುವ ಎಲ್ಲ ಮನಸ್ಸುಗಳ ಜಯ, ಎಂದರು.

ಶೈಕ್ಷಣಿಕವಾಗಿ ಮಾತ್ರವಲ್ಲದೇ, ಕ್ಷತ್ರಿಯ ವಿದ್ಯೆ ಗಳಲ್ಲಿಯೂ ಪಾಂಡಿತ್ಯ ಹೊಂದಿದ್ದ ಕನಕರು, ಸಮ ಸಮಾಜದ ಕನಸು ಹೊಂದಿದ್ದರು. ಅಲ್ಲದೇ, ಸ್ತ್ರೀ ಸ್ವಾತಂತ್ರ್ಯ ಅವರ ಆಶಯವಾಗಿತ್ತು. ಜತೆಗೆ, ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ಎಂಬ ಧ್ಯೇಯ ಅವರ ರಚನೆಗಳಲ್ಲಿ ಕಾಣುತ್ತೇವೆ, ಎಂದರು.

ಸಂಸಾರಿಯಾಗಿ ದೈವ ಕೃಪೆಗೆ ಪಾತ್ರರಾಗಿ ಎಂಬ ಸಂದೇಶ ಕನಕದಾಸರದ್ದು, “ಕುಲಕುಲವೆನ್ನುತಿಹರು, ಕುಲವ್ಯಾವುದು ಸತ್ಯಸುಖವುಳ್ಳ ಜನರಿಗೆ, ಎಂದು ಹೇಳುತ್ತಾ ಕುಲದ ನೆಲೆಯಲ್ಲಿ ಜನರನ್ನು ಅಳೆಯಬಾರದು ಎಂಬ ಎಚ್ಚರಿಕೆ ಸಂದೇಶ ನೀಡಿದ್ದಾರೆ ಎಂದರು.

ಪ್ರಾಂಶುಪಾಲ ಡಾ.ಅಬ್ದುಲ್ ರಹಿಮಾನ್ ಎಂ. ಮಾತನಾಡಿ, ಭಕ್ತಿ ಮಾರ್ಗದ ಮೂಲಕ ಜಾತಿರಹಿತ ಸಮಾಜ ನಿರ್ಮಾಣಕ್ಕೆ ದಾಸ ಶ್ರೇಷ್ಠ ಕನಕದಾಸರ ಕೊಡುಗೆ ಅಪಾರ ಎಂದು ಅಭಿಪ್ರಾಯಪಟ್ಟರು.

ಸಮಾರಂಭದಲ್ಲಿ ಸಾಂಸ್ಕೃತಿಕ ಸಮಿತಿ ಖಜಾಂಚಿ ಡಾ.ಬಸವರಾಜು ಜಿ.ಎಲ್, ರಾಷ್ಟ್ರೀಯ ಸೇವಾ ಯೋಜನೆ ಅಧಿಕಾರಿ ಡಾ‌.ಭೀಮೇಶ್ ಎಚ್.ಜೆ, ವಿವಿಧ ವಿಭಾಗಗಳ ಮುಖ್ಯಸ್ಥರು, ಅಧ್ಯಾಪಕರು, ಅಧ್ಯಾಪಕೇತರರು, ಕಛೇರಿ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.

Key words: Kanakadasa jayanthi, Celebration, equality, mysore

Font Awesome Icons

Leave a Reply

Your email address will not be published. Required fields are marked *