ಡ್ರೀಮ್ ಡೀಲ್ ಗ್ರೂಪ್‌ನಿಂದ ಇಬ್ಬರು ಸಿಬ್ಬಂದಿಗಳು ವಜಾ

ಮಂಗಳೂರು: ಡ್ರಾ ಸಂದರ್ಭ ಗ್ರಾಹಕರಿಗೆ ವಂಚನೆ ಮಾಡಿದ ಆರೋಪದ ಹಿನ್ನೆಲೆಯಲ್ಲಿ ಡ್ರೀಮ್ ಡೀಲ್ ಗ್ರೂಪ್ ಸಂಸ್ಥೆಯಿಂದ ಇಬ್ಬರು ಸಿಬ್ಬಂದಿಗಳ ಮೇಲೆ ಕೇಸು ದಾಖಲಿಸಲಾಗಿದ್ದು, ಸಂಸ್ಥೆಯಿಂದ ವಜಾಗೊಳಿಸಲಾಗಿದೆ.

ಈ ಬಗ್ಗೆ ನಿನ್ನೆ ಜಪ್ಪಿನಮೊಗರುವಿನಲ್ಲಿರುವ ಡ್ರೀಮ್ ಡೀಲ್ ಗ್ರೂಪ್ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾಗಿರುವ ಎಂ.ಡಿ. ಮಹಮ್ಮದ್ ಸುಹೈಲ್ ಮಾತನಾಡಿ, ಸಂಸ್ಥೆಗೆ ರಾಜ್ಯದಾದ್ಯಂತ ೧೫ಕ್ಕೂ ಅಧಿಕ ಕಚೇರಿಗಳಿವೆ. ದಾವಣೆಗೆರೆ ಶಾಖಾ ಕಚೇರಿ ಉದ್ಘಾಟನೆಗೆ ಹೋಗಿದ್ದರಿಂದ ಮಂಗಳೂರಿನಲ್ಲಿ ಸಂಸ್ಥೆಯ ಇಬ್ಬರು ಸಿಬಂದಿಗಳಾದ ಉಬೈದ್ ಮತ್ತು ಹರ್ಷಿತ್ ಡ್ರಾದ ಜವಾಬ್ದಾರಿ ವಹಿಸಿಕೊಂಡಿದ್ದರು. ಈ ಸಂದರ್ಭ ಅವರು ಸಂಸ್ಥೆಯ ಗಮನಕ್ಕೆ ಬಾರದ ರೀತಿಯಲ್ಲಿ ಮೋಸ ಮಾಡಿದ್ದು ಅದರ ವಿಡಿಯೋ ವೈರಲ್ ಆಗಿತ್ತು.

ಈ ಹಿನ್ನೆಲೆಯಲ್ಲಿ ಅವರ ಮೇಲೆ ಕಂಕನಾಡಿ ಠಾಣೆಗೆ ದೂರು ನೀಡಲಾಗಿದ್ದು, ಕೆಲಸದಿಂದ ತೆಗೆಯಲಾಗಿದೆ. ಎರಡನೇ ಬಾರಿ ಡ್ರಾ ಮಾಡಿ ಇಬ್ಬರಿಗೂ ಬಹುಮಾನವಾಗಿ ಥಾರ್ ಜೀಪ್ ನೀಡಲಾಗಿದೆ ಎಂದು ತಿಳಿಸಿದರು. ನಮ್ಮದು ಹಣ ಪಡೆದು ಸ್ಕೀಂ ರೂಪದಲ್ಲಿ ಡ್ರಾ ಮಾಡುವ ಸಂಸ್ಥೆಯಲ್ಲ. ಕಾನೂನು ಪ್ರಕಾರ ಇರುವಂಥ ಸಂಸ್ಥೆಯಾಗಿದ್ದು ೧೦ರಿಂದ ೧೫ ಸಾವಿರ ವಸ್ತುಗಳಿದ್ದು ಇವುಗಳನ್ನು ಖರೀದಿಸುವ ಗ್ರಾಹಕರಿಗೆ ಕೂಪನ್ ನೀಡಿ ಡ್ರಾ ಮೂಲಕ ವ್ಯಾಪಾರದಿಂದ ಬಂದ ಲಾಭದ ಶೇ.೫ನ್ನು ಬಹುಮಾನದ ರೂಪದಲ್ಲಿ ನೀಡುತ್ತಿದ್ದೇವೆ. ರಾಜ್ಯಾದ್ಯಂತ ೧೫ರಿಂದ ಸಾವಿರದಷ್ಟು ಗ್ರಾಹಕರಿದ್ದಾರೆ. ಭಾರತದಾದ್ಯಂತ ವಿಸ್ತರಿಸುವ ನಿಟ್ಟಿನಲ್ಲಿ ಪ್ರಯತ್ನಿಸಲಾಗಿದ್ದು ಬಳಿಕ ಅಮೇಝಾನ್‌ನಂಥ ಕಂಪೆನಿಯನ್ನಾಗಿಸುವ ಯೋಚನೆಯೂ ಇದೆ ಎಂದರು.

ಪ್ರತಿ ತಿಂಗಳು ಐದು ಗಂಟೆಗೆ ಡ್ರಾ ಆಗುವುದರಿಂದ ಕೆಲವೊಮ್ಮೆ ಗ್ರಾಹಕರು ಕಡಿಮೆ ಇರುತ್ತಾರೆ. ಈ ಹಿನ್ನೆಲೆಯಲ್ಲಿ ಯೂಟ್ಯೂಬ್ ಚಾನೆಲ್ ಮೂಲಕ ಡ್ರಾ ನೇರ ಪ್ರಸಾರ ಮಾಡಲಾಗುತ್ತಿದೆ. ಮೊನ್ನೆಯೂ ನೇರ ಪ್ರಸಾರ ಆಗಿದ್ದು ಇಬ್ಬರು ಸಿಬಂದಿ ಮೋಸ ಮಾಡಿರುವುದು ಗಮನಕ್ಕೆ ಬಂದಿದೆ. ಅವರು ಬೇರೆ ಕಂಪೆನಿಯ ಅಮಿಷಕ್ಕೆ ಬಲಿಯಾಗಿರುವ ಶಂಕೆ ಇದೆ.

ಈ ಬಗ್ಗೆ ಪೊಲೀಸರು ವಿಚಾರಣೆ ನಡೆಸಿದಾಗ ಮಾಡಿರುವ ತಪ್ಪನ್ನು ಒಪ್ಪಿಕೊಂಡಿದ್ದಾರೆ. ಇಲ್ಲಿ ಸಿಬ್ಬಂದಿ ಮೋಸ ಮಾಡಿದ್ದಾರೆಯೇ ಹೊರತು ಕಂಪೆನಿಯಿಂದ ಮೋಸ ಆಗಿಲ್ಲ. ಸಿಬಂದಿ ಮಾಡಿದ ತಪ್ಪಿನಿಂದ ನಮಗೆ ಒಂದು ವಾಹನದ ಹಣ ನಷ್ಟವಾಗಿದೆ. ಮುಂದಕ್ಕೆ ಹೀಗಾಗದಂತೆ ನೋಡಿಕೊಳ್ಳಲಾಗುವುದು ಎಂದು ಸುಹೈಲ್ ಹೇಳಿದರು.

೨೦೨೧ರಿಂದ ಕಂಪೆನಿ ನಡೆಸುತ್ತಿದ್ದು ಜನರ ಆಕರ್ಷಣೆಗಾಗಿ ಕಳೆದೊಂದು ವರ್ಷದಿಂದ ಈ ಕಾಮರ್ಸ್ ಫ್ಲಾಟ್‌ಫಾರ್ಮ್ ಮೂಲಕ ಕೂಪನ್ ವ್ಯವಹಾರ ಆರಂಭಿಸಲಾಗಿದ್ದು ಒಂದೂವರೆ ಸಾವಿರ ಜನರಿಗೆ ಉದ್ಯೋಗ ನೀಡಲಾಗಿದೆ. ಈ ವ್ಯಾಪಾರ ತಪ್ಪು ಎಂದು ಆರ್‌ಬಿಐ ಹೇಳಿಲ್ಲ. ಆದರೆ ಕೆಲವು ಅವಿದ್ಯಾವಂತರು ಈ ಬಗ್ಗೆ ಮಾಹಿತಿ ಇಲ್ಲದೆ ವ್ಯವಹಾರ ಮಾಡುತ್ತಿದ್ದು ಈ ಬಗ್ಗೆ ತನಿಖೆಯಾಗಬೇಕು.

ಮುಂದೆ ನೂರು ಜನ ಇಲ್ಲದೆ ಡ್ರಾ ಮಾಡುವುದಿಲ್ಲ. ಅಲ್ಲದೆ ಭಾರತಾದ್ಯಂತ ವಿಸ್ತಾರ ಮಾಡುತ್ತಿದ್ದು, ಯೋಚನೆಯಂತೆ ನಡೆದರೆ ೧೮೦ ಕೋಟಿ ಜಿಎಸ್‌ಟಿ ಸರಕಾರಕ್ಕೆ ಹೋಗುತ್ತದೆ ಎಂದು ಸುಹೈಲ್ ತಿಳಿಸಿದರು. ಕಂಪೆನಿಯ ನಿರ್ದೇಶಕರಾದ ಕಿಶನ್ ಭಟ್ ಮತ್ತು ಸಾಜಿದ್ ಸುದ್ದಿಗೋಷ್ಠಿಯಲ್ಲಿದ್ದರು.

 

Font Awesome Icons

Leave a Reply

Your email address will not be published. Required fields are marked *