ರಾಜ್ಯದಲ್ಲಿ ಬಂಡವಾಳ ಹೂಡಿಕೆಗೆ ಎಲ್ಲಾ ರೀತಿಯ ನೆರವು- ಸಿಎಂ ಸಿದ್ದರಾಮಯ್ಯ ಭರವಸೆ » Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್


ಬೆಂಗಳೂರು,ನವೆಂಬರ್,20,2024 (www.justkannada.in): ಕರ್ನಾಟಕ ದೇಶದಲ್ಲೇ ಅತ್ಯಂತ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ರಾಜ್ಯವಾಗಿದ್ದು,  ಇಲ್ಲಿನ ಉದ್ಯಮಸ್ನೇಹಿ ವಾತಾವರಣ, ಪ್ರತಿಭೆಗಳನ್ನು ಬಳಸಿಕೊಂಡು ಬಂಡವಾಳ ಹೂಡಿಕೆ ಮಾಡಲು ಎಲ್ಲಾ ರೀತಿಯ ನೆರವು ಒದಗಿಸಲಾಗುವುದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದರು.

ಸಿಎಂ ಸಿದ್ದರಾಮಯ್ಯ ಇಂದು ಕೃಷ್ಣಾದಲ್ಲಿ ತಮ್ಮನ್ನು ಭೇಟಿಯಾದ ಭಾರತದಲ್ಲಿನ ಬ್ರಿಟಿಷ್‌ ಹೈಕಮಿಷನರ್‌ ಲಿಂಡೆ ಕ್ಯಾಮರೂನ್‌ ಅವರೊಂದಿಗೆ ವಿವಿಧ ವಿಷಯಗಳ ಕುರಿತು ಸಮಾಲೋಚನೆ ನಡೆಸಿದರು.

ಉದ್ಯಮಗಳಿಗೆ ಬೆಂಗಳೂರಿನಲ್ಲಿ ವಿಪುಲ ಅವಕಾಶಗಳಿದ್ದು, ಮುಂದಿನ ಫೆಬ್ರವರಿ ತಿಂಗಳಲ್ಲಿ ವಿಶ್ವ ಬಂಡವಾಳ ಹೂಡಿಕೆದಾರರ ಸಮಾವೇಶ ಇಲ್ಲಿ ನಡೆಯಲಿದೆ. ಸರ್ಕಾರದ ಮಹತ್ವಾಕಾಂಕ್ಷೆಯ ಕ್ವಿನ್‌ ಸಿಟಿ ಯೋಜನೆಯಡಿ ಸಹ ಅವಕಾಶಗಳನ್ನು ಬಳಸಿಕೊಳ್ಳಬಹುದಾಗಿದೆ. ನಮ್ಮ ರಾಜ್ಯದ ಕೈಗಾರಿಕಾ ನೀತಿಯು ಅತ್ಯಂತ ಪ್ರಗತಿಶೀಲವಾಗಿದೆ. ರಾಜ್ಯದ ಬಹುತೇಕ ನಗರಗಳಿಗೆ ಉತ್ತಮ ವಿಮಾನಯಾನ ಸಂಪರ್ಕವಿದ್ದು, ಇಂತಹ ಎರಡನೇ ಹಂತದ ನಗರಗಳಲ್ಲಿ ಬಂಡವಾಳ ತೊಡಗಿಸಲು ಸರ್ಕಾರ ಎಲ್ಲಾ ನೆರವು ಒದಗಿಸಲಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

ಹೈಕಮಿಷನರ್‌ ಲಿಂಡೆ ಕ್ಯಾಮರೂನ್‌ ಅವರು ಮಾತನಾಡಿ, ಬೆಂಗಳೂರಿನಲ್ಲಿ ಹಲವು ಬ್ರಿಟಿಷ್‌ ಕಂಪೆನಿಗಳು ಕಾರ್ಯನಿರ್ವಹಿಸುತ್ತಿವೆ. ಬೆಂಗಳೂರಿನಲ್ಲಿ ನಡೆಯುತ್ತಿರುವ ಬೆಂಗಳೂರು ತಂತ್ರಜ್ಞಾನ ಶೃಂಗದಲ್ಲಿ 15 ಬ್ರಿಟಿಷ್‌ ಕಂಪೆನಿಗಳು ಭಾಗವಹಿಸುತ್ತಿವೆ. ಫೆಬ್ರವರಿಯಲ್ಲಿ ನಡೆಯಲಿರುವ ವಿಶ್ವ ಬಂಡವಾಳ ಹೂಡಿಕೆದಾರರ ಸಮಾವೇಶ ಮತ್ತು ಏರೋ ಇಂಡಿಯಾ ಕಾರ್ಯಕ್ರಮದಲ್ಲಿ ಬ್ರಿಟನ್‌ ನ ಹಲವು ನಿಯೋಗಗಳು ಭಾಗವಹಿಸಲಿವೆ ಎಂದರು.

ಪ್ರಸ್ತುತ ಕರ್ನಾಟಕದ ಸರ್ಕಾರಿ ಕಾಲೇಜುಗಳ 30 ವಿದ್ಯಾರ್ಥಿಗಳು 15 ದಿನಗಳ ಅಕಾಡೆಮಿಕ್‌ ಅಧ್ಯಯನದ ಮೇಲೆ ಲಂಡನ್‌ ನಲ್ಲಿ ತರಬೇತಿ ಪಡೆಯುತ್ತಿದ್ದಾರೆ ಎಂದರು.

ಶೈಕ್ಷಣಿಕ ಕ್ಷೇತ್ರದಲ್ಲಿ ಹೆಣ್ಣು ಮಕ್ಕಳಿಗೆ ಬ್ರಿಟಿಷ್‌ ಹೈ ಕಮಿಷನ್ ಮತ್ತು ಕರ್ನಾಟಕ ಜಂಟಿ ಸಹಭಾಗಿತ್ವದಲ್ಲಿ ಸ್ಕಾಲರ್‌ ಶಿಪ್‌ ಒದಗಿಸುವ ಪರಸ್ಪರ ಒಡಂಬಡಿಕೆ ರೂಪಿಸಲಾಗಿದೆ. ಇದರನ್ವಯ ಕರ್ನಾಟಕದಲ್ಲಿ ಅದರಲ್ಲೂ ಮುಖ್ಯವಾಗಿ ರಾಜ್ಯದ ಸರ್ಕಾರಿ ಕಾಲೇಜುಗಳಲ್ಲಿ ಪದವಿ ಪಡೆದ ಹೆಣ್ಣು ಮಕ್ಕಳಿಗೆ ಯುಕೆಯಲ್ಲಿ ಸ್ನಾತಕೋತ್ತರ ಪದವಿ ಪಡೆಯಲು ಸ್ಕಾಲರ್‌ಶಿಪ್‌ ಒದಗಿಸಲಾಗುವುದು. ಮೂರು ವರ್ಷಗಳ ಒಡಂಬಡಿಕೆ ಇದಾಗಿದ್ದು, ಈ ವರ್ಷ 15 ಮಂದಿಗೆ ಸ್ಕಾಲರ್‌ಶಿಪ್‌ ಒದಗಿಸಲಾಗುವುದು ಎಂದರು.

Key words: CM Siddaramaiah, British, High Commissioner, Lynde Cameron, investment

Font Awesome Icons

Leave a Reply

Your email address will not be published. Required fields are marked *