ಮೈಸೂರು: ಬೆಂಗಳೂರಿನ ಅರಮನೆ ಮೈದಾನದಲ್ಲಿ ತ್ರಿಪುರ ವಾಸಿನಿ ಆವರಣದಲ್ಲಿ ನವೆಂಬರ್ 24ರಂದು ರಾಮಾನುಜ ವಿಶ್ವವಿದ್ಯೋತ್ಸವ ನಮ್ಮ ನಡೆ ರಾಮಾನುಜರ ಕಡೆಗೆ ಎಂಬ 108 ಶಂಖನಾದ ಮೊಳಗಿಸುವ ಮೂಲಕ ಧಾರ್ಮಿಕ ವೇದಘೋಷ ನಡೆಯಲಿದೆ ಎಂದು ಸಮಿತಿಯ ಸಂಚಾಲಕರಾದ ಯೋಗನರಸಿಂಹ (ಮುರುಳಿ) ತಿಳಿಸಿದರು.
ಮೈಸೂರು ನಗರದ ಕಾಳಿದಾಸ ರಸ್ತೆಯಲ್ಲಿರುವ ಶ್ರೀ ಲಕ್ಷ್ಮಿನರಸಿಂಹ ಸ್ವಾಮಿ ದೇವಸ್ಥಾನದಲ್ಲಿ ಸಮಾವೇಶ ಯಶಸ್ವಿಗೊಳ್ಳಲಿ ಎಂದು ಪೂಜೆ ಸಲ್ಲಿಸಿ ಆ ನಂತರ ರಾಮಾನುಜರ ಧ್ವಜ ಹಿಡಿದು ಬ್ರಾಹ್ಮಣ ಸಮುದಾಯದ ಮುಖಂಡರನ್ನು ಆಹ್ವಾನಿಸಿ ಮಾತನಾಡಿದರು.
ಅಖಿಲ ಕರ್ನಾಟಕ ಶ್ರೀ ವೈಷ್ಣವ ಮಹಾಸಭಾದಿಂದ ಶ್ರೀ ಯದುಗಿರಿ ಯತಿರಾಜ ರಾಮಾನುಜಾ ಜಿಯರ್ ಶ್ರೀಗಳ ನೇತೃತ್ವದಲ್ಲಿ ಈ ಕಾರ್ಯಕ್ರಮ ನಡೆಯುತ್ತಿದ್ದು ಶ್ರೀವೈಷ್ಣವ ಸಮಾಜದ ಯಾವುದೇ ಒಳಪಂಗಡಗಳು ಇದ್ದರೂ ಅವೆಲ್ಲವನ್ನು ಒಂದೇ ವೇದಿಕೆಯಡಿಯಲ್ಲಿ ತಂದು ಅವರ ಶೈಕ್ಷಣಿಕ ಪ್ರಗತಿಗೆ ಈ ಮಹಾಸಭಾ ಮುಂದಾಗಿದ್ದು ಶ್ರೀವೈಷ್ಣವ ಜನಾಂಗದ ಯಾವುದೇ ಸಮಸ್ಯೆಗಳಿದ್ದರೂ ಸರ್ಕಾರದ ಗಮನಕ್ಕೆ ತರುವುದು ಸೂಕ್ತವಾದ ಪರಿಹಾರ ಕಂಡುಕೊಳ್ಳುವುದು ಇದರ ಉದ್ದೇಶವಾಗಿದೆ ಎಂದರು.
ಭಾನುವಾರಕ್ಕೂ ಮೊದಲು ಶುಕ್ರವಾರ ಹಾಗೂ ಶನಿವಾರ ಶ್ರೀ ವೈಷ್ಣವ ಸಂಪ್ರದಾಯದಂತೆ ಧಾರ್ಮಿಕ ಕೈಂಕರ್ಯಗಳು ನಡೆಯಲಿದ್ದು ಭಾನುವಾರ ಬೆಳಗ್ಗೆ ನಡೆಯುವ ಬೃಹತ್ ಧಾರ್ಮಿಕ ಸಮಾರಂಭದಲ್ಲಿ 108 ಶಂಖುಗಳಿಂದ ಏಕಕಾಲಕ್ಕೆ ಶಂಖನಾದದ ಮೂಲಕ ಕಾರ್ಯಕ್ರಮಉದ್ಘಾಟನೆಯಾಗಲಿದೆ ಎಂದರು.
ಈ ಕಾರ್ಯಕ್ರಮಕ್ಕೆ ಮೈಸೂರಿನಿಂದ 2000ಕ್ಕೂ ಹೆಚ್ಚು ಇಬ್ಬರು ಹಾಗೂ ರಾಜ್ಯದ ನಾನಾ ಮೂಲೆಗಳಿಂದ ಸುಮಾರು 80,000ಕ್ಕೂ ಅಧಿಕ ಭಕ್ತರು ಆಗಮಿಸಲಿದ್ದು ಅವರಿಗೆ ಸಂಘ ಸಂಸ್ಥೆಗಳ ಮೂಲಕ ಬಸ್ಸುಗಳ ವ್ಯವಸ್ಥೆ ಮತ್ತು ತಿಂಡಿ, ಊಟದ ವ್ಯವಸ್ಥೆ ಮಾಡಲಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಅರ್ಚಕ ಸಂಘದ ಅಧ್ಯಕ್ಷರಾದ ವಿದ್ವಾನ್ ಕೃಷ್ಣಮೂರ್ತಿ, ಮೈಸೂರು ಜಿಲ್ಲಾ ಬ್ರಾಹ್ಮಣ ಯುವ ವೇದಿಕೆ ಪ್ರಧಾನ ಕಾರ್ಯದರ್ಶಿ ವಿಕ್ರಮ ಅಯ್ಯಂಗಾರ್, ಚಕ್ರಪಾಣಿ, ಬಾಲಾಜಿ, ಆನಂದ್, ಶಾಂತಾರಾಮ್, ಪಾರ್ಥ ಸಾರಥಿ, ಮುರಳಿ, ಹಾಗೂ ಇನ್ನಿತರರು ಹಾಜರಿದ್ದರು.