ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ ಏಕಾಏಕಿ ಇಂಟರ್ನೆಟ್ ಸ್ಥಗಿತಗೊಳಿಸಲಾಗಿದ್ದು, ಶಿಪ್ಪಿಂಗ್ ಕಂಟೈನರ್ ಗಳನ್ನು ನಿಲ್ಲಿಸುವ ಮೂಲಕ ನಗರದ ಬಹುತೇಕ ಪ್ರಮುಖ ರಸ್ತೆಗಳನ್ನು ಬಂದ್ ಮಾಡಲಾಗಿದೆ.
ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರನ್ನು ಜೈಲಿನಿಂದ ಬಿಡುಗಡೆ ಮಾಡುವಂತೆ ಪಾಕಿಸ್ತಾನದಲ್ಲಿ ತೀವ್ರ ರೂಪದ ಪ್ರತಿಭಟನೆಗಳು ನಡೆಯುತ್ತಿವೆ. ಇಂದು ಬೆಳಗ್ಗೆಯಿಂದಲೇ ಇಮ್ರಾನ್ ಖಾನ್ ಅವರ ಬೆಂಬಲಿಗರು ಅವರನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಿ ಬೀದಿಗಿಳಿದಿದ್ದಾರೆ. ಎಲ್ಲೆಡೆ ಜನರು ಪ್ರತಿಭಟನೆ ನಡೆಸುತ್ತಿದ್ದು, ಭದ್ರತೆಯ ದೃಷ್ಟಿಯಿಂದ ಸ್ಥಳೀಯ ಆಡಳಿತ ಕರ್ಫ್ಯೂ ವಿಧಿಸಿದೆ.
ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ (ಪಿಟಿಐ) ಪಕ್ಷದ ಹೆಚ್ಚಿನ ಸಂಖ್ಯೆಯ ಕಾರ್ಯಕರ್ತರು ಇಸ್ಲಾಮಾಬಾದ್ಗೆ ಹೋಗುವ ಹೆದ್ದಾರಿಗಳಿಂದ ಪ್ರವೇಶಿಸಲು ಪ್ರಯತ್ನಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಪೊಲೀಸ್ ಮತ್ತು ಅರೆಸೈನಿಕ ಪಡೆಗಳನ್ನು ಬೀದಿಗಳಲ್ಲಿ ನಿಯೋಜಿಸಲಾಗಿದೆ.
ಮುಂಜಾಗ್ರತಾ ಕ್ರಮವಾಗಿ ಮೊಬೈಲ್ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ. ರಾಜಧಾನಿಯಲ್ಲಿ ಯಾವುದೇ ರೀತಿಯ ಸಭೆಗಳನ್ನು ನಿಷೇಧಿಸಲಾಗಿದೆ. ಸಾರ್ವಜನಿಕರು ಭದ್ರತಾ ಏಜೆನ್ಸಿಗಳೊಂದಿಗೆ ಸಹಕರಿಸಿ ತಮ್ಮ ಮನೆಗಳಲ್ಲಿಯೇ ಇರುವಂತೆ ಇಂದು ಬೆಳಗ್ಗೆ ಇಸ್ಲಾಮಾಬಾದ್ ಪೊಲೀಸರು ಮನವಿ ಮಾಡಿದ್ದಾರೆ.
ಘಟನೆಯಿಂದಾಗಿ ಇಸ್ಲಾಮಾಬಾದ್ನಲ್ಲಿರುವ ಸಂಸತ್ ಭವನ, ಎಲ್ಲಾ ಸರ್ಕಾರಿ ಸಂಸ್ಥೆಗಳು, ರಾಯಭಾರ ಕಚೇರಿಗಳು ಮತ್ತು ವಿದೇಶಿ ಸಂಸ್ಥೆಗಳ ಕಚೇರಿಗಳ ಸುತ್ತಲೂ ಭದ್ರತೆಯನ್ನು ಹೆಚ್ಚಿಸಲಾಗಿದೆ.