‘ಲೋಕಾ’ದಿಂದ ಮುಡಾ ಹಗರಣದ ಆರೋಪಿಗಳ ರಕ್ಷಣೆ: ಸ್ನೇಹಮಯಿ ಕೃಷ್ಣ

ಮೈಸೂರು: ಲೋಕಾಯುಕ್ತ ಸಂಸ್ಥೆಯವರೇ ಮುಡಾ ಹಗರಣದ ಆರೋಪಿಗಳೊಂದಿಗೆ ಶಾಮೀಲಾಗಿ ಆರೋಪಿಗಳನ್ನು ರಕ್ಷಣೆ ಮಾಡುವ ಕೆಲಸ ಮಾಡಿದ್ದಾರೆ. ಹೀಗಾಗಿ ಎಲ್ಲ ಮಾಹಿತಿ, ದಾಖಲಾತಿಗಳನ್ನು ನ್ಯಾಯಾಲಯದ ಗಮನಕ್ಕೆ ತಂದು ದಾಖಲೆ ಸಲ್ಲಿಸಿ, ಮುಡಾ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸುವಂತೆ ಮನವಿ ಮಾಡುತ್ತೇನೆ ಎಂದು ಸಾಮಾಜಿಕ ಹೋರಾಟಗಾರ ಸ್ನೇಹಮಯಿ ಕೃಷ್ಣ ತಿಳಿಸಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೂ.28ರಂದು ಮುಡಾ ಕಚೇರಿ ಮೇಲೆ ದಾಳಿ ನಡೆಸಲು ಲೋಕಾಯುಕ್ತದವರು ಸರ್ಚ್ ವಾರಂಟ್ ಕೊಟ್ಟಿದ್ದರು. ಅದು ಮೈಸೂರಿಗೆ 29ರಂದು ತಲುಪಿದೆ. ಈ ವಿಚಾರವನ್ನು ಹಿಂದಿನ ಎಸ್‌ಪಿ ಸಚಿವ ಬೈರತಿ ಸುರೇಶ್ ಅವರಿಗೆ ತಿಳಿಸಿದ್ದರಿಂದ ಅವರು ಜು.೧ರಂದು ದಿಢೀರ್ ಎಂದು ಮೈಸೂರಿಗೆ ಭೇಟಿ ನೀಡಿ, ಮುಡಾ ಕಡತಗಳನ್ನು ತೆಗೆದುಕೊಂಡು ಹೋಗಿದ್ದಾರೆ.

ನಂತರ ಈ ಬಗ್ಗೆ ಪತ್ರಿಕಾಗೋಷ್ಠಿ ನಡೆಸಿದ್ದರಿಂದ ಲೋಕಾಯುಕ್ತದವರು ಇದೇ ಕಾರಣಕ್ಕೆ ತನಿಖೆ ನಡೆಸದೆ ಪ್ರಕರಣ ಮುಚ್ಚಿ ಹಾಕಿದ್ದಾರೆ. ಇದೆಲ್ಲಾ ಗಮನಿಸಿದಾಗ ಲೋಕಾಯುಕ್ತ ಸಂಸ್ಥೆಯೇ ಆರೋಪಿಗಳೊಂದಿಗೆ ಶಾಮೀಲಾಗಿ ಪ್ರಕರಣ ಮುಚ್ಚಿಹಾಕಿರುವುದು ಕಂಡು ಬರುತ್ತದೆ ಎಂದು ಆರೋಪಿಸಿದರು.

ತನಿಖೆಯ ಬಗ್ಗೆ ಕೆಲವು ಮಾಹಿತಿ ಮತ್ತು ದಾಖಲಾತಿಗಳನ್ನು ಉಚ್ಚ ನ್ಯಾಯಾಲಯದ ಗಮನಕ್ಕೆ ತಂದು, ಈ ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಕೋರುತ್ತೇನೆ. ಇದೆಲ್ಲವನ್ನು ಗಮನಿಸಿದ ನ್ಯಾಯಾಲಯ ಪ್ರಕರಣವನ್ನು ಸಿಬಿಐಗೆ ವಹಿಸಿ ಆದೇಶಿಸಲಿದೆ ಎಂಬ ನಂಬಿಕೆ ನಮಗಿದೆ ಎಂದು ಹೇಳಿದರು.

ಜಿಲ್ಲಾ ಉಸ್ತುವಾರಿ ಸಚಿವ ಡಾ..ಹೆಚ್.ಸಿ.ಮಹದೇವಪ್ಪ ಮುಡಾದಲ್ಲಿ ನಡೆದಿರುವುದು ಒಂದು ಹಗರಣವೇ ಅಲ್ಲ, ಉಪ ಚುನಾವಣೆಗೋಸ್ಕರ ಸುಮ್ಮನೆ ಆರೋಪ ಮಾಡಿದ್ದಾರೆ ಎಂಬ ಕೇಳಿಕೆಗೆ ಪ್ರತಿಕ್ರಿಯಿಸಿ, ನಾವು ಸುಳ್ಳು ಆರೋಪ ಮಾಡಿದರೆ ಸಿದ್ದರಾಮಯ್ಯ ಏಕೆ ತಮ್ಮ ಪತ್ನಿ ಹೆಸರಿನ ನಿವೇಶನಗಳನ್ನು ವಾಪಸ್ ಕೊಡುತ್ತಿದ್ದರು. ಇದರ ಬಗ್ಗೆ ಅವರು ಸ್ಪಷ್ಟೀಕರಣ ಕೊಡಬೇಕು. ಅವರು ಮಾಡಿರುವುದು ಅಕ್ರಮ ಎಂದು ನಿವೇಶನ ವಾಪಾಸ್ ಕೊಟ್ಟಿದ್ದಾರೆ. ಇದೆಲ್ಲವನ್ನು ಗಮನಿಸಿ ಅವರು ಯಾವ ಆಧಾರದ ಮೇಲೆ ಹೇಳಿದ್ದಾರೋ ಗೊತ್ತಿಲ್ಲ ಎಂದರು.

Font Awesome Icons

Leave a Reply

Your email address will not be published. Required fields are marked *