ಬಂಟ್ವಾಳ: ತುಳುನಾಡಿನ ಕಾರಣಿಕ ಕ್ಷೇತ್ರ ಬಂಟ್ವಾಳ ತಾಲೂಕಿನ ಪಣೋಲಿಬೈಲು ತನ್ನ ಕೋಲ ಸೇವೆಗಳಿಗಾಗಿ ಭಾರೀ ಗಮನ ಸೆಳೆಯುವ ದೈವಸ್ಥಾನವಾಗಿದೆ. ಇಲ್ಲಿನ ಪ್ರತಿದಿನವೂ ನಡೆಯುತ್ತಿರುವ ಕೋಲ ಬುಕ್ಕಿಂಗ್ ಇದೀಗ 23 ಸಾವಿರ ದಾಟಿದೆ.
ಹೀಗಾಗಿ ದಿನನಿತ್ಯ ನಡೆಯುವ ಕೋಲಗಳ ಸಂಖ್ಯೆ ಹೆಚ್ಚಿಸಲು ಶ್ರೀಕಲ್ಲುರ್ಟಿ ದೈವಸ್ಥಾನ ಸಮಿತಿಯು ನಿರ್ಧರಿಸಿದೆ.ಈ ವರ್ಷದ ವಾರ್ಷಿಕ ಕೋಲ ಸೇವೆ ವಿಜೃಂಭಣೆಯಿಂದ ನಡೆದಿದೆ. ಭಾನುವಾರ ರಾತ್ರಿ ನಡೆದ ಕೋಲ ಸೇವೆಯನ್ನು ಸಹಸ್ರಾರು ಸಂಖ್ಯೆಯಲ್ಲಿ ಬಂದಿದ್ದ ಭಕ್ತರು ಶ್ರೀಕಲ್ಲುರ್ಟಿ ಕಲ್ಕುಡ ದೈವದ ಕೋಲವನ್ನು ಕಣ್ತುಂಬಿಕೊಂಡರು
35 ವರ್ಷಕ್ಕಾಗುವಷ್ಟು ಬುಕ್ಕಿಂಗ್! ಪಣೋಲಿಬೈಲ್ ಕ್ಷೇತ್ರದಲ್ಲಿ 23 ಸಾವಿರಕ್ಕೂ ಅಧಿಕ ಕೋಲ ಸೇವೆಗಳ ಬುಕ್ಕಿಂಗ್ ಇರುವುದರಿಂದ ಭಕ್ತರಿಗೆ ಶೀಘ್ರ ಸೇವೆ ಸಂದಾಯದ ಅವಕಾಶದ ಹಿನ್ನೆಲೆಯಲ್ಲಿ ಪ್ರತೀ ದಿನ ನಡೆಯುತ್ತಿದ್ದ ಕೋಲ ಸೇವೆಯಲ್ಲಿ ಬದಲಾವಣೆ ಮಾಡಲಾಗಿದೆ. ಈವರೆಗೆ ಪ್ರತಿ ದಿನ 4 ಮಂದಿಗೆ ಕೋಲ ಸೇವೆ ಮಾಡಲಾಗುತ್ತಿತ್ತು. ಈಗ ಅದನ್ನು ಬದಲಿಗೆ 8 ಮಂದಿಗೆ ಸೇವೆ ಸಂದಾಯಕ್ಕೆ ಅವಕಾಶ ನೀಡಲಾಗಿದೆ.
ಪಣೋಲಿಬೈಲು ಕ್ಷೇತ್ರದಲ್ಲಿ ಅಗೇಲು ಹಾಗೂ ಕೋಲ ಸೇವೆಗಳು ವಿಶೇಷವಾಗಿದ್ದು, ವಾರದ 3 ದಿನ ಅಗೇಲು ಹಾಗೂ ವಾರದ 5 ದಿನ ಕೋಲ ಸೇವೆ ಸಂದಾಯವಾಗುತ್ತದೆ. ಆದರೆ ಕೋಲ ಸೇವೆಗಳ ಬುಕ್ಕಿಂಗ್ ಹೆಚ್ಚಿದ್ದು,
ಲೆಕ್ಕಾಚಾರ ಹಾಕಿದರೆ ಅದು ಪೂರ್ಣಗೊಳುವುದಕ್ಕೆ ಕನಿಷ್ಠ 35 ವರ್ಷ ಬೇಕಾಗುತ್ತದೆ ಎಂದು ಅಂದಾಜಿಸಲಾಗಿದೆ. ರಾಜ್ಯದ ವಿವಿಧ ಭಾಗಗಳಿಂದ ಭಕ್ತರು ಬಂದು ದೈವದ ಮುಂದೆ ತನ್ನ ಕಷ್ಟ ಕಾರ್ಪಣ್ಯಗಳನ್ನು ಹೇಳಿಕೊಳ್ಳುತ್ತಾರೆ. ಪಣೋಲಿಬೈಲು ದೇವಸ್ಥಾನ ಕರ್ನಾಟಕ ರಾಜ್ಯದ ಸುಪ್ರಸಿದ್ಧ ಕ್ಷೇತ್ರ ಎಂದು ಹೆಸರು ಪಡೆಯುತ್ತಿದೆ.