ಮೈಸೂರು,ನವೆಂಬರ್,29,2024 (www.justkannada.in): ನಮ್ಮನ್ನು ಗೌರವಿಸುವ ಸಂವಿಧಾನ ಬೇಕು ಎಂದಿರುವ ಪೇಜಾವರ ಮಠದ ಶ್ರೀಗಳ ವಿರುದ್ಧ ರಾಜ್ಯಪಾಲರು ದೂರು ದಾಖಲಿಸಬೇಕು ಎಂದು ವಿಶ್ವಜ್ಞಾನಿ ಡಾ.ಬಿ.ಆರ್. ಅಂಬೇಡ್ಕರ್ ಜನಸೇನಾ ಪ್ರತಿಷ್ಠಾನದ ಅಧ್ಯಕ್ಷರಾದ ಕೆ. ಮಹೇಶ್ ಒತ್ತಾಯಿಸಿದ್ದಾರೆ.
ಈ ಕುರಿತು ಪ್ರಕಟಣೆಯಲ್ಲಿ ಪ್ರತಿಕ್ರಿಯಿಸಿರುವ ಕೆ.ಮಹೇಶ್ ಅವರು, ಸ್ವಾಮೀಜಿ ಬಯಸುವ ಸಂವಿಧಾನ ಮನುಸ್ಮತಿ. ಡಾ.ಬಿ.ಆರ್. ಅಂಬೇಡ್ಕರ್ ರಚಿಸಿದ್ದ ಸಂವಿಧಾನವನ್ನು ಮೊದಲ ಬಾರಿಗೆ ಆರ್‌ಎಸ್‌ಎಸ್ ವಿರೋಧಿಸಿತ್ತು. ಆರ್‌ಎಸ್‌ಎಸ್-ಬಿಜೆಪಿ ಸಂವಿಧಾನ ಬದಲಿಸುವ ಬಗ್ಗೆ ಮಾತನಾಡುತ್ತಿದ್ದವು. ಹಿಂದಿನ ಕೇಂದ್ರ ಸಚಿವರೊಬ್ಬರು ನಾವು ಬಂದಿರುವುದೇ ಸಂವಿಧಾನ ಬದಲಿಸಲೆಂದು ಬಹಿರಂಗ ಹೇಳಿಕೆ ಕೊಟ್ಟಿದ್ದರು.
ಸ್ವಾತಂತ್ರ‍್ಯ ಪೂರ್ವದಲ್ಲಿ ಭಾರತವು ಹಿಂದೂ ರಾಷ್ಟ್ರವಾಗಿತ್ತು. ಸ್ವಾತಂತ್ರ‍್ಯ ಬಂದ ನಂತರ ಜಾತ್ಯತೀತ ರಾಷ್ಟ್ರವಾಯಿತು. 1949ರ ನವೆಂಬರ್ 29ರಂದು ದೇಶಕ್ಕೆ ಸಂವಿಧಾನವನ್ನು ಬಾಬಾ ಸಾಹೇಬ ಅಂಬೇಡ್ಕರ್ ಅವರು ಸಮರ್ಪಿಸಿದರು. ಸಂವಿಧಾನ ಜಾರಿಗೊಂಡು 75 ವರ್ಷ ಪೂರ್ಣಗೊಂಡಿರುವಾಗ ಶ್ರೀಗಳ ಮಾತಿನ ಒಳಾರ್ಥ ಏನನ್ನೂ ಸೂಚಿಸುತ್ತದೆ? ಬಹಿರಂಗಪಡಿಸುವಂತೆ ಒತ್ತಾಯಿಸಿದ್ದಾರೆ.
ಸಂವಿಧಾನ ರಕ್ಷಕರಾದ ರಾಜ್ಯಪಾಲರು ಕೂಡಲೇ ಪೇಜಾವರ ಮಠದ ಶ್ರೀಗಳ ವಿರುದ್ಧ ಪ್ರಕರಣ ದಾಖಲಿಸಬೇಕು. ಮುಂಬರುವ ದಿನಗಳಲ್ಲಿ ಸಂವಿಧಾನದ ವಿರುದ್ಧ ಮಾತಾಡುವವರಿಗೆ ಎಚ್ಚರಿಕೆ ಕೊಡಬೇಕು ಎಂದು ಕೆ.ಮಹೇಶ್ ಮನವಿ ಮಾಡಿದ್ದಾರೆ.
Key words: K. Mahesh, Governor, complaint, against, Pejawar Sri.