ಮಂಗಳೂರು: ಜಿಲ್ಲೆಯಲ್ಲಿ ತೀವ್ರ ಮಳೆ ಹಿನ್ನೆಲೆಯಲ್ಲಿ ಸ್ಪೀಕರ್ ಯು.ಟಿ. ಖಾದರ್ ಅವರು ಸೋಮವಾರ ರೋಮ್ ನಿಂದ ನೇರವಾಗಿ ಕಲ್ಲಿಕೋಟೆ ಮೂಲಕ ಮಂಗಳೂರಿಗೆ ಬಂದು ಜಿಲ್ಲೆಯ ಪ್ರಾಕೃತಿಕ ಸ್ಥಿತಿಗತಿ ಪರಿಶೀಲನೆ ನಡೆಸಿದರು.
ಜಿಲ್ಲಾ ಪಂಚಾಯತ್ ನಲ್ಲಿ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು ಜಿಲ್ಲೆಯ ವಿವಿಧ ತಾಲೂಕು ಅಧಿಕಾರಿಗಳಿಂದ ವೀಡಿಯೋ ಸಂವಾದ ಮೂಲಕ ಪ್ರಾಕೃತಿಕ ವಿಕೋಪದ ಮಾಹಿತಿ ಪಡೆದರು. ಗುಡ್ಡ ಸಮೀಪ ಮನೆಯಲ್ಲಿ ವಾಸ್ತವ್ಯದಲ್ಲಿರುವವರಿಗೆ ಮುಂದಿನ ಎರಡು ದಿನಗಳವರೆಗೆ ತಂಗದಂತೆ ತಿಳಿಸಬೇಕು. ರಸ್ತೆ, ವಿದ್ಯುತ್ ತೊಂದರೆಗಳನ್ನು ಎದುರಿಸಲು ಅಗತ್ಯ ಯಂತ್ರೋಪಕರಣಗಳೊಂದಿಗೆ ಸನ್ನದ್ಧರಾಗಬೇಕು ಎಂದು ಅವರು ಅಧಿಕಾರಿಗಳಿಗೆ ಸೂಚಿಸಿದರು.
ಪ್ರಕೃತಿ ವಿಕೋಪ ತೀವ್ರವಾಗಿರುವುದರಿಂದ ರೆಸಾಟ್೯ ಗಳಿಗೆ ಬರುವ ಪ್ರವಾಸಿಗರಿಗೆ ವಾಸ್ತವ್ಯ ಹೂಡದಂತೆ ಮನವರಿಕೆ ಮಾಡಬೇಕು. ಒಂದು ವೇಳೆ ರೆಸಾಟ್೯ನಲ್ಲಿ ತಂಗಿ, ಪ್ರವಾಸಿಗರಿಗೆ ಯಾವುದೇ ಜೀವಹಾನಿಯಾದರೆ ಸಂಬಂಧಪಟ್ಟ ರೆಸಾಟ್೯ ಮಾಲೀಕರ ವಿರುಧ್ಧ ನಿದಾ೯ಕ್ಷಿಣ್ಯವಾಗಿ ಕ್ರಮ ಜರುಗಿಸಲಾಗುವುದು ಎಂದು ಅವರು ಎಚ್ಚರಿಸಿದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್, ಪೊಲೀಸ್ ಕಮೀಷನರ್ ಅನುಪಮ್ ಅಗ್ರವಾಲ್, ಜಿ.ಪಂ. ಸಿಇಓ ಡಾ. ಆನಂದ್, ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ಮತ್ತಿತರರು ಇದ್ದರು. ಫೆಂಗಲ್ ಚಂಡಮಾರುತದ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮಗಳನ್ನ ಕೈಗೊಳ್ಳುವಂತೆ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರು ಜಿಲ್ಲಾಡಳಿತಕ್ಕೆ ಸೂಚನೆ ನೀಡಿದ್ದಾರೆ.
ಹವಾಮಾನ ಇಲಾಖೆಯ ಮುನ್ಸೂಚನೆಯಂತೆ, ಬಂಗಾಳ ಕೊಲ್ಲಿಯಲ್ಲಿ ಫೆಂಗಲ್ ಚಂಡಮಾರುತ ಉಂಟಾಗಿರುವ ಪರಿಣಾಮ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಸಾಧಾರಣದಿಂದ ಭಾರೀ ಮಳೆಯಾಗುವ ಸಾಧ್ಯತೆಗಳಿವೆ. ಭಾರೀ ಮಳೆಯಿಂದ ಎದುರಾಗಬಹುದಾದ ಪರಿಸ್ಥಿತಿಗಳನ್ನ ನಿರ್ವಹಿಸಲು ಎಲ್ಲ ರೀತಿಯಲ್ಲಿ ಸಜ್ಜಾಗಿರುವಂತೆ ದೂರವಾಣಿ ಮೂಲಕ ಸಚಿವ ದಿನೇಶ್ ಗುಂಡೂರಾವ್ ಜಿಲ್ಲಾಧಿಕಾರಿಯವರಿಗೆ ಸೂಚನೆ ನೀಡಿದರು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದ್ದು, ಮೀನುಗಾರಿಕೆಗೆ ತೆರಳದಂತೆ ಸೂಚನೆ ನೀಡಲಾಗಿದೆ ಎಂದು ಈ ವೇಳೆ ಜಿಲ್ಲಾಧಿಕಾರಿ ಮುನ್ನೈ ಮುಗಿಲನ್ ಸಚಿವರಿಗೆ ಮಾಹಿತಿ ನೀಡಿದರು. ಮುನ್ನೆಚ್ಚರಿಕಾ ಕ್ರಮವಾಗಿ ಇಂದು ಜಿಲ್ಲೆಯ ಎಲ್ಲಾ ಅಂಗನವಾಡಿ, ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಪ್ರಾಥಮಿಕ, ಪ್ರೌಢಶಾಲೆ, ಪದವಿ ಪೂರ್ವ ಕಾಲೇಜುಗಳಿಗೆ (12ನೇ ತರಗತಿವರೆಗೆ) ರಜೆ ಘೋಷಿಸಲಾಗಿದೆ ಎಂದು ತಿಳಿಸಿದರು. ನೀರು ಇರುವ ತಗ್ಗು ಪ್ರದೇಶ, ಕೆರೆ, ನದಿ ತೀರ ಸಮುದ್ರ ತೀರಕ್ಕೆ ಸಾರ್ವಜನಿಕರು, ಪ್ರವಾಸಿಗರು ತೆರಳದಂತೆ ಜಾಗ್ರತೆ ವಹಿಸಿ ಅಗತ್ಯ ಕ್ರಮಗಳನ್ನ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಸಚಿವರು ಸೂಚಿಸಿದರು.