ಲುಧಿಯಾನ: ಖ್ಯಾತ ಪಂಜಾಬಿ ಗಾಯಕ ಸುರೀಂದರ್ ಶಿಂದಾ ದೀರ್ಘಕಾಲದ ಅನಾರೋಗ್ಯದಿಂದ ಲುಧಿಯಾನದ ಖಾಸಗಿ ಆಸ್ಪತ್ರೆಯಲ್ಲಿ ಇಂದು ನಿಧನರಾಗಿದ್ದಾರೆ. 60 ವರ್ಷದ ಸುರೀಂದರ್ ಶಿಂದಾ ದಯಾನಂದ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಇಂದು ಕೊನೆಯುಸಿರೆಳೆದರು.
ಅವರ ಗಾಯನ ವೃತ್ತಿಜೀವನದ ಅವಧಿಯಲ್ಲಿ, ಅವರು ಅನೇಕ ಪ್ರಸಿದ್ಧ ಹಾಡುಗಳನ್ನು ಹಾಡಿದ್ದಾರೆ ಮತ್ತು ಪಟ್ ಜತ್ತನ್ ದೇ, ಉಚಾ ದರ್ ಬಾಬೆ ನಾನಕ್ ದಾ ಮತ್ತು ಬದ್ಲಾ ಜಟ್ಟಿ ದಾ ಮುಂತಾದ ಹಲವಾರು ಪಂಜಾಬಿ ಚಲನಚಿತ್ರಗಳಲ್ಲಿ ಕಾಣಿಸಿಕೊಂಡಿದ್ದರು. ಶಿಂದಾ ಅವರ ನಿಧನಕ್ಕೆ ಗಾಯಕರು, ರಾಜಕಾರಣಿಗಳು ಸೇರಿದಂತೆ ಹಲವರು ಸಂತಾಪ ಸೂಚಿಸಿದ್ದಾರೆ.
‘ಪಂಜಾಬಿ ಸಂಗೀತಕ್ಕೆ ಗಾಯಕ ಸುರಿಂದರ್ ಶಿಂದಾ ಅವರ ಕುಡುಗೆ ಅಮೂಲ್ಯವಾದದ್ದು’ ಎಂದು ಶಿರೋಮಣಿ ಅಕಾಲಿದಳದ ಮುಖ್ಯಸ್ಥ ಸುಖ್ ಬೀರ್ ಸಿಂಗ್ ಬಾದಲ್ ಹೇಳಿದ್ದಾರೆ. ಟ್ವೀಟ್ ಮೂಲಕ ಸಂತಾಪ ಸೂಚಿಸಿರುವ ಅವರು, ‘ಅಭಿಮಾನಿಗಳಿಗೆ ಮತ್ತು ಪಂಜಾಬಿ ಗಾಯಕ ಸುರಿಂದರ್ ಶಿಂದಾ ಅವರ ಕುಟುಂಬಕ್ಕೆ ತೀವ್ರ ಸಂತಾಪಗಳು. ಪಂಜಾಬಿ ಸಂಗೀತಕ್ಕೆ ಅವರು ನೀಡಿರುವ ಕೊಡುಗೆ ಅಮೂಲ್ಯವಾದದ್ದು. ಅವರು ಶಕ್ತಿಯುತ ಧ್ವನಿಯನ್ನು ಹೊಂದಿದ್ದರು. ಶಿಂದಾ ಜಿ ಅವರನ್ನು ಜಗತ್ತಿನಾದ್ಯಂತ ಇರುವ ಲಕ್ಷಾಂತರ ಸಂಖ್ಯೆಯ ಅಭಿಮಾನಿಗಳು ಮಿಸ್ ಮಾಡಿಕೊಳ್ಳಲಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ’ ಎಂದು ಹೇಳಿದ್ದಾರೆ.