ಲೇಖಕಿ, ಜನೋಪಕಾರಿಯೂ ಆಗಿರುವ ಇನ್ಫೋಸಿಸ್ ಮುಖ್ಯಸ್ಥೆ ಸುಧಾ ಮೂರ್ತಿ ಅವರು ಆಹಾರಪ್ರೇಮಿ. ಆದರೆ ಶುದ್ಧ ಸಸ್ಯಾಹಾರಿ. ಅವರು ಮೊಟ್ಟೆ, ಬೆಳ್ಳುಳ್ಳಿ ಕೂಡ ತಿನ್ನಲ್ಲ. ಈ ಬಗ್ಗೆ ಅವರೇ ಸ್ವತಃ ಹೇಳಿಕೊಂಡಿದ್ದಾರೆ.
ಖ್ಯಾತ ಫುಡ್ ಬ್ಲಾಗರ್ ಕುನಾಲ್ ವಿಜ್ಜಯಕರ್ ಸಾರಥ್ಯದ ‘ಖಾನೇ ಮೇ ಕ್ಯಾ ಹೈ?’ ಯೂಟ್ಯೂಬ್ ಸೀರೀಸ್ನಲ್ಲಿ ಇತ್ತೀಚೆಗೆ ಇನ್ಫೋಸಿಸ್ ಫೌಂಡೇಷನ್ ಮುಖ್ಯಸ್ಥೆ ಸುಧಾ ಮೂರ್ತಿ ಪಾಲ್ಗೊಂಡಿದ್ದರು. ಆಹಾರದ ಬಗ್ಗೆ ಅನೇಕ ವಿಷಯಗಳನ್ನು ಚರ್ಚಿಸುತ್ತ, ‘ನಾನು ಶುದ್ಧ ಸಸ್ಯಾಹಾರಿ, ಬೆಳ್ಳುಳ್ಳಿ ಮತ್ತು ಮೊಟ್ಟೆಯನ್ನು ಕೂಡ ತಿನ್ನುವುದಿಲ್ಲ. ಏಕೆಂದರೆ ಮಾಂಸಾಹಾರ ಮತ್ತು ಸಸ್ಯಾಹಾರಕ್ಕೆ ಒಂದೇ ಚಮಚವನ್ನು ಬಳಸುವ ಸಾಧ್ಯತೆ ಇರುತ್ತದೆ. ಆದ್ದರಿಂದ ವಿದೇಶಗಳಿಗೆ ಹೋಗುವಾಗ ಆಹಾರ ಪೊಟ್ಟಣಗಳನ್ನು ತೆಗೆದುಕೊಂಡು ಹೋಗುತ್ತೇನೆ. ಇಲ್ಲವೆ ಸಸ್ಯಾಹಾರಿ ರೆಸ್ಟೋರೆಂಟ್ಗಳಿಗೆ ಹೋಗುತ್ತೇನೆ. ಅದೂ ಸಾಧ್ಯವಾಗದಿದ್ದರೆ ನಾನೇ ಅಡುಗೆ ಮಾಡಿ ಉಣ್ಣುತ್ತೇನೆ’ ಎಂದಿದ್ದಾರೆ.
ನನ್ನ ಪತಿ ನಾರಾಯಣ ಮೂರ್ತಿ ಅವರು ಸಿಹಿತಿಂಡಿಗಳಿಂದ ದೂರ. ಆದರೆ ನಾನು ಎಲ್ಲಾ ರೀತಿಯ ಸಿಹಿತಿಂಡಿಗಳನ್ನು ಪ್ರೀತಿಸುತ್ತೇನೆ. ಅವರು ಆಹಾರಪ್ರಿಯನಲ್ಲ. ಆದರೆ ಅವರಿಗೆ ಮೈಸೂರು ಶೈಲಿಯ ಬೈಂಗನ್ ಇಷ್ಟ. ನಾನು ತಯಾರಿಸುವ ಬಿಸಿಬೆಳ್ಳೆ ಬಾತ್ ಕೂಡ ಅವರಿಗೆ ಇಷ್ಟ ಎಂದು ಇದೇ ವೇಳೆ ತಿಳಿಸಿದರು.
ಕೆಲವರು ಇವರ ಆಹಾರ ಕ್ರಮವನ್ನು ಬೆಂಬಲಿಸಿದ್ದಾರೆ. ವ್ಯಕ್ತಿಯ ಆಹಾರ ಕ್ರಮ, ಜಾತಿ ಮತ್ತು ವೈಯಕ್ತಿಕ ವಿಚಾರಗಳನ್ನು ಗಣನೆಗೆ ತೆಗೆದುಕೊಳ್ಳದೆ ವ್ಯಕ್ತಿಯನ್ನು ಗೌರವದಿಂದ ಕಾಣುವ ಬಗ್ಗೆ ಯೋಚಿಸಬೇಕು ಎಂದಿದ್ದಾರೆ. ಸುಧಾ ಮೂರ್ತಿಯ ‘ಸರಳತನ’ವು ಮಾರಾಟದ ಸರಕು ಎಂದು ಅನೇಕರು ವ್ಯಂಗ್ಯೋಕ್ತಿಯಾಡಿದ್ದಾರೆ. ನಿಜಕ್ಕೂ ನಿಮ್ಮ ಸರಳತನ ಹಂತಹಂತವಾಗಿ ಬೇಸರ ತರಿಸುತ್ತಿದೆ ಎಂದಿದ್ದಾರೆ ಒಬ್ಬರು