ಮುಂಬೈ: ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರ ನಿರ್ದೇಶಕ ವಿವೇಕ್ ರಂಜನ್ ಅಗ್ನಿಹೋತ್ರಿ ಅವರ ಮುಂಬರುವ ‘ದಿ ವ್ಯಾಕ್ಸಿನ್ ವಾರ್’ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದ್ದು, ಚಿತ್ರತಂಡ ದಿನಾಂಕ ನಿಗದಿಪಡಿಸಿದೆ. ಈ ಕುರಿತು ವಿವೇಕ್ ಅಗ್ನಿಹೋತ್ರಿ ಇಂದು ಟ್ವೀಟ್ ಮಾಡಿದ್ದು, ಚಿತ್ರವು ಸೆಪ್ಟೆಂಬರ್ 28ರಂದು ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ ಎಂದು ಘೋಷಿಸಿದ್ದಾರೆ ಜತೆಗೆ ಟೀಸರ್ ರಿಲೀಸ್ ಮಾಡಿದ್ದಾರೆ.
ನಾನಾ ಪಾಟೇಕರ್, ಅನುಪಮ್ ಖೇರ್ ಮತ್ತು ಪಲ್ಲವಿ ಜೋಶಿ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಕನ್ನಡದ ಕಾಂತಾರ ಖ್ಯಾತಿಯ ನಟಿ ಸಪ್ತಮಿ ಗೌಡ ಮತ್ತು ರೈಮಾ ಸೇನ್ ಕೂಡ ದಿ ವ್ಯಾಕ್ಸಿನ್ ವಾರ್ ಚಿತ್ರದಲ್ಲಿ ನಟಿಸಿದ್ದಾರೆ. ‘ದಿ ವ್ಯಾಕ್ಸಿನ್ ವಾರ್’ ಚಿತ್ರವು ಕೋವಿಡ್ ಲಸಿಕೆ ಕಂಡುಹಿಡಿಯಲು ಎರಡು ವರ್ಷಗಳ ಕಾಲ ಹಗಲು ರಾತ್ರಿ ದುಡಿದ ಭಾರತೀಯ ವಿಜ್ಞಾನಿಗಳು ಮತ್ತು ಸಿಬ್ಬಂದಿಯ ಕಥಾಹಂದರವನ್ನು ಒಳಗೊಂಡಿದೆ. ಕೋವಿಡ್-19 ಸಾಂಕ್ರಾಮಿಕದ ಅನಿಶ್ಚಿತ ಸಮಯದಲ್ಲಿ ವೈದ್ಯರು ಮತ್ತು ವಿಜ್ಞಾನಿಗಳ ಸಮರ್ಪಣೆಗೆ ಚಿತ್ರವು ಗೌರವ ಸಮರ್ಪಿಸಲಿದೆ.
‘ಬಿಗ್ ಅನೌನ್ಸ್ಮೆಂಟ್… ಆತ್ಮೀಯ ಸ್ನೇಹಿತರೇ, ನಿಮ್ಮ ದಿ ವ್ಯಾಕ್ಸಿನ್ ವಾರ್ ಚಿತ್ರವು 2023ರ ಸೆಪ್ಟೆಂಬರ್ 28ನೇ ಶುಭ ದಿನದಂದು ವಿಶ್ವದಾದ್ಯಂತ ಬಿಡುಗಡೆಯಾಗಲಿದೆ. ದಯವಿಟ್ಟು ನಮ್ಮನ್ನು ಆಶೀರ್ವದಿಸಿ’ ಎಂದು ಅವರು ಟ್ವಿಟರ್ನಲ್ಲಿ ಬರೆದಿದ್ದಾರೆ.
DATE ANNOUNCEMENT:
Dear friends, your film #TheVaccineWar #ATrueStory will release worldwide on the auspicious day of 28th September 2023.
Please bless us. pic.twitter.com/qThKxTjPiw— Vivek Ranjan Agnihotri (@vivekagnihotri) August 15, 2023