ಕಲಬುರಗಿಯಲ್ಲಿ ಅ. 7, 8ರಂದು ಸಿನಿಮೋತ್ಸವ

ಕಲಬುರಗಿ: ಮನುಜಮತ ಸಿನಿಯಾನ, ಜನರಂಗ ಕಲಬುರಗಿ ಹಾಗೂ ಗುಲಬರ್ಗಾ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯ ಸಹಯೋಗದಲ್ಲಿ ಇದೇ 7, 8ರಂದು ಸೇಡಂ ರಸ್ತೆಯ ಹೋಟೆಲ್‌ ಆರಾಧ್ಯದಲ್ಲಿ ಎರಡನೇ ವರ್ಷದ ಕಲಬುರಗಿ ಸಿನಿಮೋತ್ಸವ ಆಯೋಜಿಸಲಾಗಿದೆ.

ನಗರದ ಪತ್ರಿಕಾ ಭವನದಲ್ಲಿ ಭಾನುವಾರ ಜಂಟಿ ಸುದ್ದಿಗೋಷ್ಠಿಯಲ್ಲಿ ಈ ಮಾಹಿತಿ ನೀಡಿದ ಸಿನಿಮೋತ್ಸವದ ಸಂಘಟಕರಾದ ಪ್ರೊ.ಅಪ್ಪಗೆರೆ ಸೋಮಶೇಖರ್, ಕಿರಣ್ ಎಂ. ಗಾಜನೂರು, ಶಂಕ್ರಯ್ಯ ಘಂಟಿ, ‘ಕಳೆದ ವರ್ಷ ಬುಡಕಟ್ಟು ಜನರ ಸಂಸ್ಕೃತಿ ಕುರಿತು ಸಿನಿಮೋತ್ಸವ ನಡೆದಿತ್ತು. ಈ ಬಾರಿ ರಾಷ್ಟ್ರೀಯತೆಯ ಚರ್ಚೆಯನ್ನು ಕೇಂದ್ರವಾಗಿ ಇಟ್ಟುಕೊಂಡು ‘ಜನಗಣ ಮನದ ಬಣ್ಣಗಳು’ ಎಂಬ ಶೀರ್ಷಿಕೆಯ ಅಡಿಯಲ್ಲಿ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಸಿನಿಮಾಗಳ ಪ್ರದರ್ಶನ ಹಾಗೂ ಸಂವಾದವನ್ನು ಆಯೋಜಿಸಲಾಗಿದೆ. ಈ ಸಿನಿಮಾ ಹಬ್ಬದಲ್ಲಿ ನಾಡಿನ ಬೇರೆ ಬೇರೆ ಭಾಗಗಳಿಂದ ಚಿಂತಕರು, ಸಿನಿಮಾ ವಿಮರ್ಶಕರು ಭಾಗವಹಿಸಲಿದ್ದಾರೆ. ಯಾವ ಸಿನಿಮಾ ಪ್ರದರ್ಶನ ಮಾಡಬೇಕು ಎಂಬ ಬಗ್ಗೆ ಆಯ್ಕೆ ಸಮಿತಿ ಶೀಘ್ರ ತೀರ್ಮಾನ ಕೈಗೊಳ್ಳಲಿದೆ’ ಎಂದರು.

ಕಿರಣ್ ಗಾಜನೂರು ಮಾತನಾಡಿ, ‘ಸಿನಿಮೋತ್ಸವದಲ್ಲಿ ಮೂರು ಸಿನಿಮಾಗಳು, ಎರಡು ಕಿರುಚಿತ್ರಗಳು ಪ್ರದರ್ಶನಗೊಳ್ಳಲಿವೆ. ಅ 7ರಂದು ಬೆಳಿಗ್ಗೆ 9ಕ್ಕೆ ಸಾಂಕೇತಿಕ ಉದ್ಘಾಟನೆಯ ಬಳಿಕ ಸಿನಿಮಾ ಪ್ರದರ್ಶನ ಆರಂಭಗೊಳ್ಳಲಿದೆ. ಉತ್ಸವದಲ್ಲಿ ಸುಮಾರು 75ರಿಂದ 100 ಸಿನಿಮಾಸಕ್ತರು ಭಾಗವಹಿಸುವ ನಿರೀಕ್ಷೆ ಇದೆ.ಚಿತ್ರನಿರ್ದೇಶಕ ಕೇರಳದ ಚೆರಿಯನ್ ಸೇರಿದಂತೆ ರಾಜ್ಯದ ಹಲವು ಸಿನಿಮಾ ತಂತ್ರಜ್ಞರು ಭಾಗವಹಿಸಲಿದ್ದಾರೆ.

ಬೆಂಗಳೂರು, ಮೈಸೂರು, ಶಿವಮೊಗ್ಗ, ಹಾಸನ ಸೇರಿದಂತೆ ವಿವಿಧ ಜಿಲ್ಲೆಗಳಿಂದ ಸಿನಿಮಾಸಕ್ತರು ಬರಲಿದ್ದಾರೆ. ಎರಡು ದಿನಗಳ ಸಿನಿಮೋತ್ಸವದಲ್ಲಿ ಭಾಗವಹಿಸುವವರಿಗೆ ಊಟ, ಉಪಾಹಾರದ ವ್ಯವಸ್ಥೆ, ವಸತಿ ವ್ಯವಸ್ಥೆ ಮಾಡಲಾಗಿದೆ’ ಎಂದು ಹೇಳಿದರು.

‘ವಿದ್ಯಾರ್ಥಿಗಳಿಗೆ ₹ 500 ಹಾಗೂ ಹಿರಿಯರಿಗೆ ₹ 750 ಶುಲ್ಕ ನಿಗದಿಪಡಿಸಲಾಗಿದೆ. ಶುಲ್ಕ ಪಾವತಿಸಲು ಅಸಾಧ್ಯವಾದ ವಿದ್ಯಾರ್ಥಿಗಳಿದ್ದರೆ ಅವರ ಶುಲ್ಕವನ್ನು ನಾವೇ ಭರಿಸುತ್ತೇವೆ’ ಎಂದರು.

Font Awesome Icons

Leave a Reply

Your email address will not be published. Required fields are marked *