ಮೈಸೂರು,ಜುಲೈ,28,2024 (www.justkannada.in): ಮೈಸೂರು ಅಖಿಲ ಭಾರತ ವಾಕ್ ಶ್ರವಣ ಸಂಸ್ಥೆಯಲ್ಲಿ ಭ್ರಷ್ಟಾಚಾರ ಸಂಬಂಧ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಅವರಿಗೆ ಬಿಜೆಪಿ ದೂರು ನೀಡಿದೆ.
ಇಂದು ಮೈಸೂರು ಪ್ರವಾಸ ಕೈಗೊಂಡಿದ್ದ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಅವರನ್ನ ಭೇಟಿ ಮಾಡಿದ ಐಶ್(AIISH) ಕಾರ್ಯನಿರ್ವಾಹಕ ಮಂಡಳಿ ಸದಸ್ಯ ಹಾಗೂ ಬಿಜೆಪಿ ಮುಖಂಡ ಟಿ.ಗಿರೀಶ್ ಪ್ರಸಾದ್ ದೂರು ಸಲ್ಲಿಸಿದ್ದಾರೆ.
ಈ ಸಂಬಂಧ ಇತ್ತೀಚೆಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಜಗತ್ ಪ್ರಕಾಶ್ ನಡ್ಡಾ ಅವರಿಗೆ ಖುದ್ದು ಪತ್ರ ಬರೆದಿದ್ದ ‘ಐಶ್ ‘ ಕಾರ್ಯನಿರ್ವಾಹಕ ಮಂಡಳಿ ಸದಸ್ಯರಾದ ಟಿ.ಗಿರೀಶ್ ಪ್ರಸಾದ್, ಡಾ.ಜಿ.ಆರ್.ಚಂದ್ರಶೇಖರ್, ಡಾ.ಎ.ಆರ್.ಬಾಬು ಅವರು, 2024ರ ಮಾರ್ಚ್ 25 ಮತ್ತು 26ರಂದು ಆಯಿಷ್ ಸಂಸ್ಥೆಯಲ್ಲಿ ನಡೆಯುತ್ತಿರುವ ಕಾಮಗಾರಿಗಳು, ತಾಂತ್ರಿಕ ಚಟುವಟಿಕೆಗಳಲ್ಲಿ ವ್ಯತ್ಯಾಸಗಳು ಆಗಿರುವ ದೂರುಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಸಿಬಿಐಯಿಂದ ದಾಳಿ ನಡೆದಿದೆ. ಆದರೆ ಸಂಸ್ಥೆ ನಿರ್ದೇಶಕರು ಸಿಬಿಐನ ಸಾಮಾನ್ಯ ಭೇಟಿ ಹಾಗೂ ಪರಿಶೀಲನೆ ಎಂಬಂತೆ ಉತ್ತರ ನೀಡಿದ್ದಾರೆ. ಸಿಬಿಐ ಸುಖಾ ಸುಮ್ಮನೇ ದಾಳಿ ಮಾಡುವುದಿಲ್ಲ. ಜವಾಬ್ದಾರಿಯುತ ವ್ಯಕ್ತಿಗಳು ಸಂಸ್ಥೆಯಲ್ಲಿ ನಡೆದಿರುವ ಅವ್ಯವಹಾರ, ದುರುಪಯೋಗಕ್ಕೆ ಸಂಬಂಧಿಸಿ ನೀಡುವ ನಿಗದಿತ ದೂರು ಆಧರಿಸಿ ದಾಳಿ ಮಾಡಲಾಗುತ್ತದೆ. ಆಯಿಷ್ ನಿರ್ದೇಶಕಿ ಹಾಗೂ ಕೆಲವು ಅವರ ಪರವಾಗಿರುವ ವಿಭಾಗಗಳ ಮುಖ್ಯಸ್ಥರು ಸಿಬಿಐ ದಾಳಿ ವಿಚಾರವಾಗಿ ವಿಶೇಷ ಲೆಕ್ಕ ಪರಿಶೋಧನೆ ಎನ್ನುವ ತಪ್ಪು ಮಾಹಿತಿ ನೀಡಿದ್ದಾರೆ ಎಂದು ದೂರಿನಲ್ಲಿ ವಿವರಿಸಿದ್ದರು.
ಆಯಿಷ್ ನ ಚಟುವಟಿಕೆಗಳು, ಸಿಬಿಐ ದಾಳಿ, ಕೋಟ್ಯಂತರ ರೂ. ಖರ್ಚಿನ ವಿಚಾರವಾಗಿ ಇರುವ ಅನುಮಾನಗಳ ಹಿನ್ನೆಲೆಯಲ್ಲಿ ಕೂಡಲೇ ಡಾ.ಪುಷ್ಪಾವತಿ ಅವರನ್ನು ಆಯಿಷ್ ನಿರ್ದೇಶಕರ ಹುದ್ದೆಯಿಂದ ವರ್ಗ ಮಾಡಬೇಕು. ಸಿಬಿಐ ತನಿಖೆ ಮುಗಿಯುವರೆಗೂ ಅವರನ್ನು ಕಡ್ಡಾಯ ರಜೆ ಮೇಲೆ ಕಳುಹಿಸಬೇಕು. ಇಲ್ಲಿಗೆ ಪ್ರಾಮಾಣಿಕ ಹಾಗೂ ದಕ್ಷ ನಿರ್ದೇಶಕರನ್ನು ಕೂಡಲೇ ನೇಮಿಸಬೇಕು ಎಂದು ಟಿ.ಗಿರೀಶ್ ಪ್ರಸಾದ್, ಡಾ.ಜಿ.ಆರ್.ಚಂದ್ರಶೇಖರ್, ಡಾ.ಎ.ಆರ್.ಬಾಬು ಅವರು ಪತ್ರದಲ್ಲಿ ಒತ್ತಾಯಿಸಿದ್ದರು.
ಇದೀಗ ಇಂದು ಮೈಸೂರಿಗೆ ಆಗಮಿಸಿದ್ದ ಕೇಂದ್ರ ಕೈಗಾರಿಕಾ ಸಚಿವ ಹೆಚ್.ಡಿ ಕುಮಾರಸ್ವಾಮಿ ಅವರಿಗೂ AIISH ಭ್ರಷ್ಟಾಚಾರ ಕುರಿತು ಬಿಜೆಪಿ ಮುಖಂಡ ಟಿ.ಗಿರೀಶ್ ಪ್ರಸಾದ್ ದೂರು ಸಲ್ಲಿಸಿದ್ದಾರೆ. ಈ ವೇಳೆ ಇತರೆ ಬಿಜೆಪಿ ಮುಖಂಡರು ಉಪಸ್ಥಿತರಿದ್ದರು.
Key words: AIISH, Corruption, BJP, complains, Union Minister HDK