ಬೆಂಗಳೂರು, ಮಾ.೨೬, ೨೦೨೪ : ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ನಡೆಸಲು ಉದ್ದೇಶಿಸಿದ್ದ ಪ್ರಾಧ್ಯಾಪಕ ಹಾಗೂ ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಪ್ರಕ್ರಿಯೆಗೆ ನೀಡಿದ್ದ ತಡೆಯಾಜ್ಞೆಯನ್ನು ಹೈಕೋರ್ಟ್ ವಿಸ್ತರಿಸಿದೆ.
ವಿವಿಧ ವಿಭಾಗಗಳಿಗೆ ನೇಮಿಸಿಕೊಳ್ಳಲು 27ಸಹಾಯಕ ಪ್ರಾಧ್ಯಾಪಕರು ಮತ್ತು ಏಳು ಪ್ರಾಧ್ಯಾಪಕರ ಆಯ್ಕೆ ಪ್ರಕ್ರಿಯೆಗೆ ಮುಕ್ತ ವಿವಿ ಚಾಲನೆ ನೀಡಿತ್ತು. ಈ ಸಂಬಂದ ಮೌಖಿಕ ಸಂದರ್ಶನಕ್ಕೆ ದಿನಾಂಕ ನಿಗಧಿಪಡಿಸಿತ್ತು. ಆದರೆ ಇದನ್ನು ಪ್ರಶ್ನಿಸಿ ಕೋರ್ಟ್ ಮೆಟ್ಟಿಲೇರಿದ ಕಾರಣ ಸಂದರ್ಶನಕ್ಕೆ ತಡೆಯಾಜ್ಞೆ ನೀಡಲಾಗಿತ್ತು. ಇದೀಗ ಈ ಹಿಂದೆ ನೀಡಿದ್ದ ತಡೆಯಾಜ್ಞೆಯನ್ನು ರಾಜ್ಯ ಹೈಕೋರ್ಟ್ ಮತ್ತೆ ವಿಸ್ತರಿಸಿದೆ.
ಕಳೆದ ಫೆ. 17ರಂದು ಈ ಹುದ್ದೆಗಳಿಗೆ ಸಂದರ್ಶನ ನಡೆಯಬೇಕಿತ್ತು. ಆದರೆ ದಾಖಲಾದ ರಿಟ್ ಅರ್ಜಿ ಪರಿಶೀಲಿಸಿ ನ್ಯಾಯಾಲಯ 16ರಂದು ತಡೆಯಾಜ್ಞೆ ನೀಡಿತ್ತು. ಹುದ್ದೆಗಳ ವರ್ಗೀಕರಣ ಮತ್ತು ಹೈಕ ಮೀಸಲಾತಿ ವಿಧಾನ ಸಮರ್ಪಕವಾಗಿಲ್ಲ ಎಂಬುದುಅರ್ಜಿದಾರರ ದೂರು.
ಈ ಹಿನ್ನೆಲೆಯಲ್ಲಿ ಈ ನೇಮಕಾತಿ ವಿವಾದಕ್ಕೆ ಸಿಲುಕಿತ್ತು. ನ್ಯಾಯಾಲಯದಲ್ಲಿ ಈ ಪ್ರಕರಣದ ಮುಂದಿನ ವಿಚಾರಣೆ ಏಪ್ರಿಲ್ ಒಂದರಂದು ನಿಗಧಿಯಾಗಿದ್ದು ಸದ್ಯ ವಿವಿ ಈ ನೇಮಕಾತಿಗೆ ಸಂಬಂಧಿಸಿದಂತೆ ಯಾವುದೇ ಕ್ರಮ ತೆಗೆದುಕೊಳ್ಳಲು ಅಸಹಾಯಕವಾಗಿದೆ.
KSOU :ಪ್ರೊಫೆಸರ್, ಅಸೋಸಿಯೇಟ್ ಪ್ರೊಫೆಸರ್ ಹುದ್ದೆ ನೇರ ನೇಮಕಾತಿಗೆ ಹೈಕೋರ್ಟ್ ತಡೆ..!
ಪ್ರಾಧ್ಯಾಪಕರ ನೇಮಕ ಮತ್ತು ಮೀಸಲು ವರ್ಗೀಕರಣ ಪ್ರಕ್ರಿಯೆ ಕುರಿತು ನ್ಯಾಯಾಲಯ ಇದೇ ವೇಳೆ ರಾಜ್ಯ ಸರ್ಕಾರದ ಉನ್ನತ ಶಿಕ್ಷಣ ಇಲಾಖೆಯಿಂದ ಮಾಹಿತಿ ಕೇಳಿತ್ತು. ಅಲ್ಲದೆ ಮುಕ್ತ ವಿಶ್ವವಿದ್ಯಾನಿಲಯಕ್ಕೆ ನೋಟೀಸ್ ಜಾರಿ ಮಾಡಲು ನಿರ್ದೇಶನ ನೀಡಿತ್ತು. ಸದ್ಯ ಮುಕ್ತ ವಿವಿ ನ್ಯಾಯಾಲಯದಲ್ಲಿ ತನ್ನ ಪ್ರತಿಕ್ರಿಯೆ ದಾಖಲಿಸಿದೆ.
ಮಾಹಿತಿ ಇಲ್ಲ :
ಕೋರ್ಟ್ ಆದೇಶದ ಸಂಬಂಧ ಕರ್ನಾಟಕ ರಾಜ್ಯ ಮುಕ್ತ ವಿವಿ ಕುಲಸಚಿವ ಪ್ರೊ.ಪ್ರವೀಣ ಅವರನ್ನು ಜಸ್ಟ್ ಕನ್ನಡ ಸಂಪರ್ಕಿಸಿದಾಗ, ನಾನು ಕೆಲ ದಿನಗಳ ಹಿಂದಷ್ಟೆ ಕುಲಸಚಿವನ ಹುದ್ದೆಗೆ ನೇಮಕಗೊಂಡಿರುವೆ. ಆದ್ದರಿಂದ ಈ ವಿಷಯ ಬಗ್ಗೆ ಮಾಹಿತಿ ಇಲ್ಲ. ಕುಲಪತಿಗಳನ್ನು ಸಂಪರ್ಕಿಸಿ ಅವರಿಂದ ಮಾಹಿತಿ ಪಡೆದು ಬಳಿಕ ಮುಂದಿನ ಕ್ರಮ ಜರುಗಿಸಲಾಗುತ್ತದೆ ಎಂದರು.
KEY WORDS : KSOU, HIGH COURT, PIL, STAY ORDER, MYSORE