KUWJ ವಿರುದ್ಧ ತಿರುಗಿ ಬಿದ್ದ ಮೈಸೂರು ಪತ್ರಕರ್ತರು ̤̤̤! – Just Kannada | Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್

 

ಮೈಸೂರು, ಫೆ.೨೨, ೨೦೨೪ : (justkannada in news ) ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಸದಸ್ಯತ್ವ ಪಡೆಯಲು ರಾಜ್ಯ ಸಂಘದಿಂದ ನೀಡಿರುವ ನಿಬಂಧನೆಗಳು ಜಿಲ್ಲಾ ಹಾಗೂ ಸ್ಥಳೀಯ ಪತ್ರಕರ್ತರ ಹಿತಾಸಕ್ತಿ ಕಾಯುವ ನಿಟ್ಟಿನಲ್ಲಿ ಪೂರಕವಾಗಿಲ್ಲ ಎಂಬ ಕೂಗೆದ್ದಿದೆ.

ರಾಜ್ಯ ಸಂಘದಲ್ಲಿರುವ ನಿಬಂಧನೆಗಳು ನಿಬಂಧನೆಗಳಿಗಿಂತ ಹೆಚ್ಚಾಗಿ ಒಂದು ರೀತಿ ಡಿಕ್ಟೇಟ‌ರ್‌ಶಿಪ್‌ ನಂತೆ  ಅನಿಸುತ್ತಿದೆ. ಇನ್ನು ದಶಕಗಳಿಂದ ನನ್ನ ಜಿಲ್ಲಾ ಪತ್ರಕರ್ತರ ಸಂಘ ಸದೃಢವಾಗಿದ್ದು, ತನ್ನದೇ ಸ್ವಂತ ಅರ್ಥಪೂರ್ಣ ಬೈಲಾವನ್ನು ಹೊಂದಿತ್ತು. ಅದರ ನಿಯಮದಂತೆ ಇಷ್ಟು ವರ್ಷ ಸದಸ್ಯತ್ವವನ್ನು ಪಡೆದಿರುತ್ತೇನೆ. ಈ ವರ್ಷವೂ ಅದೇ ಬೈಲಾದಡಿ ಸದಸ್ಯತ್ವ ನವೀಕರಣ ಮಾಡುವುದಾದರೆ ನಾನು ಸದಸ್ಯತ್ವ ನವೀಕರಣ ಮಾಡಿಸುತ್ತೇನೆ. ಇಲ್ಲವಾದರೆ ನನಗೆ ಸಂಘದ ಸದಸ್ಯತ್ವ ಬೇಡ ಎಂದು ಮೈಸೂರು ಪತ್ರಕರ್ತರು ಅಭಿಯಾನವನ್ನೇ ಆರಂಭಿಸಿದ್ದಾರೆ.

ಪತ್ರಕರ್ತ ರಾಮ್‌ ಆರಂಭಿಸಿದ ಈ ಧನಿಗೆ ಪೂರಕವಾಗಿ ವಿನಯ್‌ ಸಾಲಿಗ್ರಾಮ, ಕೆ.ಪಿ.ನಾಗರಾಜ್‌, ಎಸ್.‌ ಆರ್.‌ ಮಧುಸೂಧನ್‌, ರಂಗಸ್ವಾಮಿ, ರಾಜೇಶ್ವರ್‌, ರಂಗಸ್ವಾಮಿ ಮಾದಾಪುರ ಮತ್ತಿತರರು ಪೂರಕವಾಗಿ ಅಭಿಪ್ರಾಯ ವ್ಯಕ್ತಪಡಿಸಿದ್ದು ಅದು ಹೀಗಿದೆ….

 

# ನನ್ನ ಜಿಲ್ಲಾ ಸಂಘ ನನ್ನ ಹೆಮ್ಮೆ – ನನ್ನ ಬೈಲಾ ನನ್ನ ಗರಿಮೆ

ಸ್ಥಳೀಯ ಟಿವಿ ಚಾನಲ್ ನ ಒಂದು ಸಂಸ್ಥೆಯ ಇಬ್ಬರಿಗೆ ಮಾತ್ರ ಸದಸ್ಯತ್ವ ನೀಡುವ ನಿಬಂಧನೆ ಸರಿಯಲ್ಲ. ಈ ಮೊದಲು ಸ್ಥಳೀಯ ಟಿವಿ ಚಾನಲ್ ಗಳಿಗೆ ಒಂದು ಸಂಸ್ಥೆಯ ಎಂಟು ಮಂದಿಗೆ ಸದಸ್ಯತ್ವ‌ ನೀಡಲಾಗುತ್ತಿತ್ತು. ನಂತರದ ವರ್ಷದಲ್ಲಿ ಅದನ್ನು ಆರಕ್ಕೆ ಇಳಿಸಲಾಯಿತು. ಕಳೆದ ವರ್ಷ ಐದಕ್ಕೆ ಇಳಿಸಲಾಯಿತು. ಈ ವರ್ಷದಿಂದ ಇಬ್ಬರಿಗೆ ಇಳಿಸಲಾಗಿದೆ‌. ಮುಂದಿನ ವರ್ಷದಿಂದ ಸದಸ್ಯತ್ವ ಕೊಡುವುದಿಲ್ಲ ಎಂದರೂ ಆಶ್ಚರ್ಯವಿಲ್ಲ. ಸ್ಥಳೀಯ ಟಿವಿ ಚಾನಲ್ ಗಳನ್ನು ಕಡೆಗಣಿಸಿರುವುದು ಸರಿಯಲ್ಲ‌.

ಮೈಸೂರು ಜಿಲ್ಲಾ ಪತ್ರಕರ್ತರ ಸಂಘ ಇರೋದು ಸರ್ವ ಸದಸ್ಯರ ಹಿತ ಕಾಪಾಡಲು, ಆದರೀಗ ಸದಸ್ಯರ ಹಿತ ಕಾಪಾಡುವುದರ ಬದಲು ಸದಸ್ಯರ ಹಕ್ಕನ್ನು ಕಸಿದುಕೊಳ್ಳಲಾಗುತ್ತಿದೆ.

ಈ ಬಾರಿ ಅರ್ಜಿಗೂ 10 ರೂಪಾಯಿ ಶುಲ್ಕ ವಿಧಿಸಿದ್ದಾರೆ‌. ನಾನು ನೋಡಿದ ಮಟ್ಟಿಗೆ ಇದೇ ಮೊದಲ ಬಾರಿ ಅರ್ಜಿಗೂ 10 ರೂಪಾಯಿ ಶುಲ್ಕ ವಿಧಿಸಿರೋದು

ಮೈಸೂರು ಪತ್ರಕರ್ತರ ಸಂಘ ಈಗ ಅಕ್ಷರಶಃ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಅಡಿಯಾಳು!. ಇಷ್ಟು ವರ್ಷ ಮೈಸೂರು ಪತ್ರಕರ್ತರ ಸಂಘ ತನ್ನದೆ ಆದ ಮೌಲ್ಯಯುತ ಬೈಲಾ ಇಟ್ಟುಕೊಂಡು ದೊಡ್ಡ ಮಟ್ಟದಲ್ಲಿ ಬೆಳೆದು ನಿಂತಿದೆ.  2006 ರಲ್ಲಿ ಮೈಸೂರು ಜಿಲ್ಲಾ ಪತ್ರಕರ್ತರ ಸಂಘ ( ಅವತ್ತಿನ ಕಾಲಕ್ಕೆ ಬೇರೆ ಸಂಘ ಆಗಬಾರದು ಎಂಬ ದೃಷ್ಟಿಯಿಂದ) ರಾಜ್ಯ ಸಂಘದ affiliation ಪಡೆದಿತ್ತು. ಹಾಗಂದ ಮಾತ್ರಕ್ಕೆ ರಾಜ್ಯದ ಬೈಲಾವನ್ನು ಒಪ್ಪಿಕೊಳ್ಳದೆ ಮೈಸೂರು ಜಿಲ್ಲೆಯ ಪರಿಸ್ಥಿತಿಗೆ ಅನುಗುಣವಾಗಿ ಪ್ರತ್ಯೇಕ ಬೈಲಾ ರಚಿಸಿ ಕೊಂಡು ಅದರಂತೆ ಬಹಳ ವ್ಯವಸ್ಥಿತ ವಾಗಿ ಸಂಘ ನಡೆಸಲಾಗುತ್ತಿತ್ತು. ಆಯಾ ಕಾಲಕ್ಕೆ ಒಂದಿಷ್ಟು ಬದಲಾವಣೆ ಕೂಡ ಮಾಡಿಕೊಳ್ಳಲಾಗುತ್ತಿತ್ತು. ಹೀಗಾಗಿ ಮೈಸೂರು ಸಂಘಕ್ಕೆ ತನ್ನದೇ ಆದ ಹಿರಿಮೆ ಬೆಳೆಯಿತು. ಈಗ ಏಕಾಏಕಿಯಾಗಿ ರಾಜ್ಯ ಸಂಘದ ಬೈಲಾವನ್ನು ಪರಿಪೂರ್ಣವಾಗಿ ಒಪ್ಪಿಕೊಳ್ಳುವ ಸ್ಥಿತಿಯನ್ನು  ಸೃಷ್ಟಿ ಮಾಡಿ ಮೈಸೂರು ಸಂಘದ ಮೂಲ ಸ್ವರೂಪವನ್ನೆ ಸಂಪೂರ್ಣವಾಗಿ ಹಾಳು ಮಾಡಲು ಹೆಜ್ಜೆ ಇಟ್ಟಿದ್ದಾರೆ.

– ರಾಜ್ಯದ ಸಂಘದ ಬೈಲಾ ಪ್ರಕಾರ ಸ್ಥಳೀಯ ಟಿವಿ ವಾಹಿನಿಗಳಿಗೆ ಕೇವಲ ಎರಡೇ ಎರಡು ಸದಸ್ಯತ್ವ ಸಿಗುತ್ತದೆ. ಮೈಸೂರಿನಲ್ಲಿ ಆರಕ್ಕೂ ಹೆಚ್ಚು ಸ್ಥಳೀಯ ಕೇಬಲ್ ಚಾನಲ್ ಗಳು ಬಹಳ ಸಕ್ರಿಯವಾಗಿದ್ದು 10 ಕ್ಕೂ ಹೆಚ್ಚು ವರದಿಗಾರರು, 10 ಕ್ಕೂ ಹೆಚ್ಚು ಕ್ಯಾಮರಾಮೆನ್ ಗಳು ದಿನ ನಿತ್ಯ ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರೆಲ್ಲಾ ಏನ್ ಮಾಡುಬೇಕು?.

– ವಾರಪತ್ರಿಕೆಯವರಿಗೆ ಸಂಘದ ಒಳಗೆ ಪ್ರವೇಶವಿಲ್ಲ ಅಂತಾ ಬೋರ್ಡ್ ಹಾಕಿ ದಿಟ್ಟತನ ಮೆರದಿದ್ದ ಸಂಘವಿದು. ಆದರೆ ರಾಜ್ಯ ಬೈಲಾ ಪ್ರಕಾರ ವಾರಪತ್ರಿಕೆ, ಪಾಕ್ಷಿಕ ಪತ್ರಿಕೆ, ಮಾಸ ಪತ್ರಿಕೆ ಹೀಗೆ ಎಲ್ಲರಿಗೂ ತಲಾ ಎರಡು ಸದಸ್ಯತ್ವ ಕೊಡಬೇಕು.

– ರಾಜ್ಯ ಸಂಘದಿಂದ ನಮಗೆ ವರ್ಷಕ್ಕೆ ಒಂದು ಗುರುತಿನ ಕಾರ್ಡ್ ಬರುತ್ತೆ ಅಷ್ಟೆ. ಅದು ನಾವು ಕೊಡುವ ದುಡ್ಡಿನಲ್ಲಿ.

– ನಮ್ಮ ಪ್ರತಿ ಸದಸ್ಯನಿಂದ 350 ರೂ ಪಡೆಯುವ ರಾಜ್ಯ ಸಂಘ ಒಂದು ಗುರುತಿನ ಕಾರ್ಡ್ ಕೊಡುತ್ತೆ. ಆ ಕಾರ್ಡ್ ನಿಂದ ನಮಗೆ ಯಾವ ಸೌಲಭ್ಯವು, ರಿಯಾಯಿತಿಯೂ ಯಾವ ವ್ಯವಸ್ಥೆಯಲ್ಲೂ ಸಿಗುವುದಿಲ್ಲ. ಬಹುತೇಕರು ಆ ಕಾರ್ಡ್ ನ್ನು ಒಂದು ದಿನವೂ ಪರ್ಸ್ ನಿಂದ ಹೊರಗೆ ತೆಗೆಯುವುದಿಲ್ಲ.

– ನಮ್ಮಿಂದ ಹಣ ಪಡೆಯುವ ರಾಜ್ಯ ಸಂಘ, ನಮ್ಮ ಆರ್ಥಿಕ ಕಷ್ಟಕ್ಕೆ ಯಾವತ್ತಿಗೂ ನಯಾ ಪೈಸೆ ಕೊಡುವುದಿಲ್ಲ. ಸಾಲ, ಅನುದಾನ ಹೀಗೆ ಯಾವುದಕ್ಕೂ ನಮ್ಮ ನೆರವಿಗೆ ಅವರು ಬರುವುದಿಲ್ಲ.

– ಈಗ ನಾವು ಸಿಎ ಸೈಟ್ ಗೆ ತುರ್ತಾಗಿ 3 ಲಕ್ಷ ರು ಕಟ್ಟಬೇಕು. ರಾಜ್ಯ ಕೊಡುತ್ತಾ? ಖಂಡಿತ ಇಲ್ಲ. ನಮ್ಮ ಬಳಿ ಈ ವ್ಯವಸ್ಥೆ ಇಲ್ಲ ಎಂಬ ಉತ್ತರ ಕೊಡುತ್ತಾರೆ.

– ಕೇವಲ ನಮ್ಮ ಸದಸ್ಯರ ಹಣ ಪಡೆದು ನಮ್ಮ ಮೇಲೆ ಹಿಡಿತ ಸಾಧಿಸೋದಷ್ಟೆ ಆ ಸಂಘದ ಉದ್ದೇಶ.

 ಪರಿಸ್ಥಿತಿ ಹೀಗಿರುವಾಗ ನಾವು ಪುರುಷಾರ್ಥಕ್ಕೆ ರಾಜ್ಯ ಸಂಘದ ಅಡಿಯಾಳುಗಳಾಗಬೇಕು?

ಅವರ ಬೈಲಾ ಪ್ರಕಾರ ನಮ್ಮ ಸಂಘದ ಸದಸ್ಯರ ಸಂಖ್ಯೆ 700 – 800 ಆಗುತ್ತೆ. ಈಗ ಇರುವ 400 ಸದಸ್ಯರಿಗೆ ಎಲ್ಲಾ ಅನುಕೂಲ ಕೊಡಲು ಆಗುತ್ತಿಲ್ಲ. 400 ಸದಸ್ಯರು ಇದ್ದಾಗಲೇ ದಸರಾದಲ್ಲಿ ಒಂದೊಂದು ಪಾಸ್ ಬರುತ್ತೆ. ನಮ್ಮ ಸಂಖ್ಯೆ 700 ದಾಟಿದ್ದಾಗ ಮೂವರಿಗೆ ಒಂದು ಪಾಸ್ ಅನ್ನೋ ಸ್ಥಿತಿ ಬರಬಹುದು.

ನಮ್ಮ ಜಿಲ್ಲಾ ಸಂಘ ನಮ್ಮ ಹಿರಿಮೆ. ನಮ್ಮ ಜಿಲ್ಲಾ ಬೈಲಾ ನಮ್ಮ ಗರಿಮೆ

1 ರಾಜ್ಯ ಸಂಘವು  ಮೈಸೂರು ಜಿಲ್ಲಾ ಪತ್ರಕರ್ತ ಸಂಘಕ್ಕೆ ಯಾವ ಕೊಡುಗೆ ಕೊಟ್ಟಿದೆ..?

2 ನಮಗೆ ನೀಡಲಾಗುವ ಐಡಿ ಕಾರ್ಡ್ ಗೂ ಸಹ ಹಣ ಪಡೆದು ನೀಡಲಾಗುತ್ತಿದೆ

3 ನಮ್ಮಲ್ಲಿ ಯಾರಿಗಾದರೂ ಆಸ್ಪತ್ರೆ ಅಥವಾ ಬೇರೆ ಬೇರೆ ಕಾರಣಗಳಲ್ಲಿ ಚಿಕಿತ್ಸೆಗೊಳ್ಳಾದವರಿಗೂ ಸಹ ನಮ್ಮಿಂದಲೇ ಹಣ ಕೊಟ್ಟಿದ್ದೇವೆ

4 ಮೈಸೂರು ಜಿಲ್ಲಾ ಪತ್ರಕರ್ತರ ಸಂಘಕ್ಕೆ ತನ್ನದೇ ಆದ ಘನತೆ ಗೌರವವಿದೆ

5 ಯಾವುದೇ ಕಾರಣಕ್ಕೂ ರಾಜ್ಯ ಸಂಘದೊಡನೆ ವಿಲೀನ ಆಗಲು ಬಿಡಬೇಡಿ

6 ಈಗ ನಮ್ಮದೇ ಆದ ಭವನ ಕಟ್ಟಿಸಿಕೊಳ್ಳಲು ಜಾಗವೂ ಸಹ ಮಂಜೂರಾಗಿದೆ

7 ಸಂಘದ ಹಿರಿಯ ಪದಾಧಿಕಾರಿಗಳು ಸದಸ್ಯರುಗಳು ತಮ್ಮ ತಮ್ಮ ವೈಯಕ್ತಿಕ ಹಿತಾಸಕ್ತಿಗಳನ್ನು ಬಿಟ್ಟು ಮೈಸೂರು ಜಿಲ್ಲಾ  ಪತ್ರಕರ್ತರ ಸಂಘವನ್ನು ಮೇಲೆತ್ತುವ ಕೆಲಸವನ್ನು ನಿರ್ವಹಿಸಿ

ಅನವಶ್ಯಕ ಮಾತುಗಳು ಹಾಗೂ ಅನವಶ್ಯಕ ಬೇರೆ ಸಂಘ ಮಾಡುವ ಉದ್ದೇಶಗಳು ಬೇಡ

ಸ್ಪಷ್ಟನೆ :

ಮೈಸೂರು ಜಿಲ್ಲಾ ಪತ್ರಕರ್ತರ ವಲಯದ್ಲಿ ಈ ಆಕ್ಷೇಪ ವ್ಯಕ್ತವಾಗುತ್ತಿದ್ದಂತೆ ಅಡಾಕ್‌ ಸಮಿತಿಯ ಬಾಲಕೃಷ್ಣ ಮದ್ದೂರು ಸ್ಪಷ್ಟನೆ ನೀಡಿದ್ದಾರೆ.

ಪ್ರಿಯರೇ ನಮಸ್ಕಾರ,

ನಮ್ಮ ಸಂಘದ ಸದಸ್ಯರ ಹಿತಾಸಕ್ತಿಗೆ ಧಕ್ಕೆ ಬರುವ ಕೆಲವಂಶಗಳ ಬಗ್ಗೆ ಸದಸ್ಯರು ತೋರಿರುವ ಕಾಳಜಿ ಶ್ಲಾಘನೀಯ. ನಿಮ್ಮಂತೆ ನಾನೂ ಸಹ ಈ ಅಂಶಗಳನ್ನು ಗಮನಿಸಿರುವೆ ಮತ್ತು ಈ ಕುರಿತು ನಿರಂತರ ಚರ್ಚೆಯಲ್ಲಿರುವೆ.

ರಾಜ್ಯ ಸಂಘದಿಂದ ಬಂದಿರುವುದು ಅವರು ಅಳವಡಿಸಿಕೊಂಡಿರುವ ಮಾದರಿಯಷ್ಟೇ. ಅಗತ್ಯ ಬಿದ್ದಲ್ಲಿ ಇದರಲ್ಲಿನ ಕೆಲ ವಿಚಾರಗಳನ್ನು ನಮ್ಮ ಸ್ಥಿತಿಗನುಗುಣವಾಗಿ ಮಾರ್ಪಡಿಸಿಕೊಳ್ಳುವ ಅವಕಾಶವಿದೆ ಎನ್ನುವುದು ಸ್ಪಷ್ಟ.

ತಾಲ್ಲೂಕಿನಲ್ಲಿ ಸದಸ್ಯತ್ವ ನೀಡಲು ತಾಲೂಕು ಸಂಘವೇ ಅಂತಿಮ. ಜಿಲ್ಲಾ ಮಟ್ಟದಲ್ಲಿ ಜಿಲ್ಲಾ ಸಂಘಗಳೇ ಸದಸ್ಯತ್ವ ನೀಡುತ್ತಾ ಬಂದಿವೆ. ಸರ್ವ ಸಮ್ಮತವಾಗಿ ಒಪ್ಪಿದ ಪಟ್ಟಿಯನ್ನು ರಾಜ್ಯ ಸಂಘ ಪ್ರತಿವರ್ಷ ಅನುಮೋದಿಸಿ ಸದಸ್ಯತ್ವ ಕಾರ್ಡ್ ನೀಡುತ್ತಾ ಬಂದಿದೆ. ವ್ಯತ್ಯಾಸಗಳಾದಾಗ ಸರಿಪಡಿಸಿದೆ. ಆ ಪ್ರಕಾರವೇ ಚುನಾವಣೆಯೂ ನಡೆದುಕೊಂಡು ಬರುತ್ತಿದೆ.

ಈಗಿನ ನಮ್ಮ ಸದಸ್ಯತ್ವ ನವೀಕರಣ ಪ್ರಕ್ರಿಯೆಗೆ ಯಾವುದೇ ಸಮಸ್ಯೆ ಇಲ್ಲ ಎನ್ನುವುದನ್ನು ಮೊದಲು ತಮ್ಮೆಲ್ಲರ ಗಮನಕ್ಕೆ ತರಬಯಸುವೆ. ಇದರಲ್ಲಿ ಯಾವುದೇ ಅನುಮಾನವಿಲ್ಲ. ಸದ್ಯ ನಮ್ಮ ಸಂಘದಲ್ಲಿನ ನಗರ ವ್ಯಾಪ್ತಿಯ ಸದಸ್ಯರು ಮತ್ತು ಗ್ರಾಮಾಂತರದಲ್ಲಿ ಕೆಲಸ ಮಾಡುತ್ತಿರುವ ಉತ್ಸಾಹಿಗಳಿಗೆ ಹೊಸ ನಿಬಂಧನೆಗಳಿಂದ ಯಾವುದೇ ಸಮಸ್ಯೆಯಾಗಬಾರದೆನ್ನುವುದು ನನ್ನ ನಿಲುವು.

ಸದಸ್ಯತ್ವ ನವೀಕರಣ ಪ್ರಕ್ರಿಯೆ ಮುಗಿಸಿ;  ಕೂಡಲೇ ಚುನಾವಣೆಗೆ ಹೋಗಿ;  ಪ್ರಜಾಪ್ರಭುತ್ವ ಮಾದರಿಯಲ್ಲಿ ಅನುಷ್ಠಾನಕ್ಕೆ ಬರುವ ನೂತನ ಆಡಳಿತ ಮಂಡಳಿಗೆ ಅವಕಾಶ ನೀಡುವುದಷ್ಟೇ ಅಡಾಕ್ ಕಮಿಟಿಯ ಜವಾಬ್ದಾರಿ ಮತ್ತು ಸವಾಲಾಗಿದೆ.

ವಯಕ್ತಿಕವಾಗಿ ನಾನು ಮತ್ತು ಹಿರಿಯರಾದ ಪ್ರಭುರಾಜನ್ ಇದೇ ಆದ್ಯತೆಯಲ್ಲಿ ಕೆಲಸ ಮಾಡುತ್ತಿದ್ದೇವೆ. ಹೊಸ ಸದಸ್ಯತ್ವ ನೀಡುವ ಪ್ರಕ್ರಿಯೆಯನ್ನು ನಿಯಮಾವಳಿ ಪ್ರಕಾರ ಪರಿಗಣಿಸಲಾಗುವುದು.

ಚುನಾವಣೆಯಲ್ಲಿ ಗೆದ್ದು ಬರುವ ಆಡಳಿತ ಮಂಡಳಿಯವರು ಲೋಪಗಳಿದ್ದರೆ ಸರಿಪಡಿಸಿಕೊಳ್ಳಬಹುದು. ಈ ಅಂಶಗಳನ್ನು ತಮಗೆಲ್ಲರಿಗೂ ಸ್ಪಷ್ಟಪಡಿಸಲು ಬಯಸುವೆ.

ತಾಲೂಕು, ಜಿಲ್ಲಾ, ರಾಜ್ಯ ಸಂಘದ ಒಕ್ಕೂಟ ವ್ಯವಸ್ಥೆಯಲ್ಲಿ ಎಲ್ಲವನ್ನೂ ಸರಿಪಡಿಸಿಕೊಂಡು ಹೋಗಬೇಕು. ಹೆಚ್ಚಿನ ವಿಷಯಗಳನ್ನು ರಾಜ್ಯ ಸಂಘದ ಅಧ್ಯಕ್ಷರ ಗಮನಕ್ಕೆ ತರಲಾಗಿದೆ. ಏನೇ ಗೊಂದಲಗಳಿದ್ದರೂ ಸರಿಪಡಿಸೋಣ ಎಂದಿದ್ದಾರೆ.

ಧನ್ಯವಾದ

ಬಾಲಕೃಷ್ಣ ಮದ್ದೂರು

೨೨.೦೨.೨೪, ಮೈಸೂರು

 

Key words : journalist ̲ kuwj ̲ mysore ̲ oppose ̲ bylaw

 

 

Font Awesome Icons

Leave a Reply

Your email address will not be published. Required fields are marked *