ಅಕ್ಕಿ ಕಳವು ಪ್ರಕರಣ: ಬಂಟ್ವಾಳ ತಾಲೂಕು ಕಚೇರಿ ಮುತ್ತಿಗೆಗೆ ಯತ್ನ

ಬಂಟ್ವಾಳ: ಬಿ.ಸಿ.ರೋಡಿಗೆ ಸಮೀಪದ ಪೊನ್ನೊಡಿ ರಾಜ್ಯ ಆಹಾರ ನಿಗಮದ ಅಕ್ಕಿ ಶೇಖರಣಾ ಕೇಂದ್ರದಿಂದ ಬಿ.ಪಿ.ಎಲ್. ಕಾರ್ಡ್‌ದಾರರಿಗೆ ಹಂಚಿಕೆಯಾಗುವ ಕೋಟ್ಯಂತರ ರೂ. ಮೌಲ್ಯದ ಸಾವಿರಾರು ಕಿಂಟ್ವಾಲ್ ಅಕ್ಕಿ ಕಳವು ಪ್ರಕರಣದ ಬಗ್ಗೆ ಉನ್ನತ ಮಟ್ಟದ ತನಿಖೆಯಾಗಬೇಕು ಮತ್ತು 2023 ನೇ ಸಾಲಿನ ಅಕ್ರಮ- ಸಕ್ರಮದಲ್ಲಿ ಜಮೀನು ಮಂಜೂರಾದ ಫಲಾನುಭವಿಗಳಿಗೆ ಸಾಗುವಳಿ ಚೀಟಿ‌ ನೀಡುವಂತೆ ಒತ್ತಾಯಿಸಿ ಜಿ.ಪಂ.ಮಾಜಿ ಸದಸ್ಯ ತುಂಗಪ್ಪ ಬಂಗೇರ ಅವರ ನೇತೃತ್ವದಲ್ಲಿ ಬಿ.ಸಿ.ರೋಡಿನ ಆಡಳಿತ ಸೌಧದ ಮುಂಭಾಗ ಪ್ರತಿಭಟನೆ ನಡೆಸಿದ ಬಳಿಕ ತಾಲೂಕು ಕಚೇರಿಗೆ ಮುತ್ತಿಗೆ ಹಾಕಲು ಮುಂದಾದಾಗ ಪೊಲೀಸರು ತಡೆದ ಘಟನೆ ನಡೆಯಿತು.

ಬಡವರಿಗೆ ವಿತರಿಸಲಾಗುವ ಪಡಿತರ ಗೋದಾಮಿನಿಂದ 3850 ಕ್ವಿಂಟಾಲ್ ಅಕ್ಕಿ ಕಳವಾಗಿದ್ದು,8  ತಿಂಗಳಾದರೂ ತಪ್ಪಿತಸ್ಥರನ್ನು ಪತ್ತೆ ಹಚ್ಚಿ  ಕಾನೂನು ಕ್ರಮ ಕೈಗೊಳ್ಳಲು  ಜಿಲ್ಲಾಡಳಿತ ಹಿಂದೇಟು ಹಾಕುತ್ತಿರುವುದು ಖಂಡನೀಯವಾಗಿದೆ  ಎಂದು ಪ್ಋಇಭಟನಾಕಾರರನ್ನುದ್ದೇಶಿಸಿ ಮಾತನಾಡಿದ ತುಂಗಪ್ಪ ಬಂಗೇರ ಹೇಳಿದರು.

ಅಕ್ಕಿ ಕಳವು ಪ್ರಕರಣದ ಹಿಂದೆ ದೊಡ್ಡ ಜಾಲವಿದ್ದು, ಅಧಿಕಾರಿಗಳು ಕೂಡ ಇದರಲ್ಲಿ ಶಾಮೀಲಾಗಿರುವ ಶಂಕೆ ಇದ್ದು, ಯಾರದೋ ಒತ್ತಡಕ್ಕೆ ಮಣಿದು ಜಿಲ್ಲಾಡಳಿತ ಆರೋಪಿಗಳನ್ನು ರಕ್ಷಿಸುತ್ತಿದೆ ಎಂದು ಆರೋಪಿಸಿದರು.

ಹಾಗೆಯೇ 2023 ನೇ ಸಾಲಿನಲ್ಲಿ ಅಕ್ರಮ- ಸಕ್ರಮದಡಿ ಜಮೀನು ಮಂಜೂರಾದ ಫಲಾನುಭವಿಗಳಿಗೆ ಸಾಗುವಳಿ ಚೀಟಿ ನೀಡದಿರುವುದು ಮತ್ತು ಸಾಗುವಳಿ ಚೀಟಿ ಸಿಕ್ಕಿದವರಿಗೆ ಆರ್‌ಟಿಸಿ ನೀಡಿರುವುದಿಲ್ಲ ಎಂದು ಆರೋಪಿಸಿದರು.

ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿದ ಬಿಜೆಪಿ ಮುಖಂಡ ಹರಿಕೃಷ್ಣ ಬಂಟ್ವಾಳ್  ಶಾಸಕ ರಾಜೇಶ್ ನಾಯ್ಕ್ ಅವರು ಜಿಲ್ಲಾಧಿಕಾರಿಯವರಿಗೆ ಪತ್ರದ ಮೂಲಕ ಗಮನಸೆಳೆದ ಹಿನ್ನಲೆಯಲ್ಲಿ ಅಕ್ಕಿ ಕಳವು ಪ್ರಕರಣ ಬಯಲಿಗೆ ಬಂದಿತ್ತು.ಇದೀಗ ಯಾರದೋ ಒತ್ತಡಕ್ಕೆ ಮಣಿದು ಈ ಹಗರಣವನ್ನು ಮುಚ್ಚಿಹಾಕುವ ಯತ್ನ ನಡೆಯುತ್ತಿದೆ ಎಂದು ಆರೋಪಿಸಿದರಲ್ಲದೆ ಭ್ರಷ್ಟಾಚಾರಕ್ಕೆ ಇನ್ನೊಂದು ಹೆಸರೇ ಕಾಂಗ್ರೆಸ್ ಪಕ್ಷವಾಗಿದ್ದು,ರಾಜ್ಯದಲ್ಲಿರುವುದು ಡೋಂಗಿ‌ ಸರಕಾರ ಎಂದು ಟೀಕಾಪ್ರಹಾರಗೈದರು.

ಬಿಜೆಪಿ ನಾಯಕಿ ಸುಲೋಚನ ಜಿ.ಕೆ.ಭಟ್,ಬಂಟ್ವಾಳ ಮಂಡಲ ಬಿಜೆಪಿ ಅಧ್ಯಕ್ಷ ದೇವಪ್ಪ ಪೂಜಾರಿ , ತಾ.ಪಂ.ಮಾಜಿ ಸದಸ್ಯ ಮೋಹನ್ ಪಿ‌.ಎಸ್. ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿದರು.

ಈ ಸಂದರ್ಭದಲ್ಲಿ ಬಂಟ್ವಾಳ ಪುರಸಭಾ ಸದಸ್ಯರಾದ ಗೋವಿಂದ ಪ್ರಭು, ಹರಿಪ್ರಸಾದ್  ಬಿಜೆಪಿ ಪ್ರಮುಖರಾದ ಸುದರ್ಶನ ಬಜ, ಹರ್ಷಿಣಿ ಪುಷ್ಪಾನಂದ , ಶುಭಕರ ಶೆಟ್ಟಿ, ಹರೀಂದ್ರ ಪೈ, ಪುರುಷೋತ್ತಮ ಶೆಟ್ಟಿ ವಾಮಪದವು, ಆನಂದ ಶಂಭೂರು,ರೊನಾಲ್ಡ್ ಡಿ.ಸೋಜ,ರತ್ನ ಕುಮಾರ್ ಚೌಟ,ಶಂಕರ ಶೆಟ್ಟಿ ಬೆದ್ರಮಾರ್, ಲಕ್ಷ್ಮೀನಾರಾಯಣ ಹೆಗ್ಡೆ,  ಶಾರದಾ,ಚಂದ್ರಶೇಖರ ಶೆಟ್ಟಿ, ಪುರುಷೋತ್ತಮ ಪೂಅರಿ, ಶಶಿಕಾಂತ್ ಶೆಟ್ಟಿ ಅರುಮುಡಿ ಮೊದಲಾದವರಿದ್ದರು. ಹಾಜರಿದ್ದರು.

ಬಳಿಕ ಪ್ರತಿಭಟನಾಕಾರರು ತಾಲೂಕು ಕಚೇರಿಗೆ ಮುತ್ತಿಗೆ ಹಾಕಲು ಮುಂದಾದಾಗ ಪೊಲೀಸರು ಸೌಧ ಬಾಗಿಲ ಬಳಿ ಪೊಲೀಸರು ತಡೆದರು . ಈ ಸಂದರ್ಭದಲ್ಲಿ ಸ್ಥಳಕ್ಕಾಗಮಿಸಿದ ಬಂಟ್ವಾಳ ತಹಶೀಲ್ದಾರ್ ಬಿ.ಎಸ್.ಕೂಡಲಗಿ ಅವರಿಗೆ ಮನವಿ ಸಲ್ಲಿಸಿ ಅಕ್ಕಿ ಕಳವು ಪ್ರಕರಣದ ಆರೋಪಿಗಳನ್ನು ಶೀಘ್ರವಾಗಿ ಬಂಧಿಸಿ ಕ್ರಮ ಕೈಗೊಳ್ಳಬೇಕು ಹಾಗೂ 2023 ನೇ ಸಾಲಿನ ಅಕ್ರಮ-ಸಕ್ರಮದಲ್ಲಿ ಜಮೀನು ಮಂಜೂರಾದ ಫಲಾನುಭವಿಗಳಿಗೆ ಸಾಗುವಳಿ ಚೀಟಿ‌ ನೀಡುವಂತೆ ಆಗ್ರಹಿಸಲಾಯಿತು.ಪಿ.ಎಂ.ಪ್ರಭಾಕರ ಸ್ವಾಗತಿಸಿ, ವಂದಿಸಿದರು.

ಬಂಟ್ವಾಳ ನಗರ ಪೊಲೀಸರು ಬಂದೋಬಸ್ತು ಏರ್ಪಡಿಸಿದರು.

Font Awesome Icons

Leave a Reply

Your email address will not be published. Required fields are marked *