ಅಭಿಮಾನಿಗಳ ಘೋರ ಸಾವಿಗೆ ಮಿಡಿದ ಯಶ್; ದುರಂತ ನಡೆದ ಗ್ರಾಮಕ್ಕೆ ಭೇಟಿ

ಗದಗ: ಹುಟ್ಟುಹಬ್ಬದ ಸಂಭ್ರಮದಲ್ಲಿದ್ದ ರಾಕಿಂಗ್ ಸ್ಟಾರ್ ಯಶ್​ಗೆ ಬೆಳ್ಳಂಬೆಳಗ್ಗೆ ಆಘಾತಕಾರಿ ಸುದ್ದಿಯೊಂದು ಬರಸಿಡಿಲಿನಂತೆ ಬಂದೆರಗಿತ್ತು. ನೆಚ್ಚಿನ ನಾಯಕನ ಹುಟ್ಟಹಬ್ಬದ ನಿಮಿತ್ತ ಕಟೌಟ್​ ನಿರ್ಮಿಸಲು ಮುಂದಾಗಿದ್ದ ಗದಗ ಜಿಲ್ಲೆಯ ಮೂವರು ಅಭಿಮಾನಿಗಳು ವಿದ್ಯುತ್ ಶಾಕ್​ನಿಂದ ಸಾವನ್ನಪ್ಪಿದ್ದರು.

ಸುದ್ದಿ ತಿಳಿಯುತ್ತಿದ್ದಂತೆಯೇ ಕಹಿ ಘಟನೆಗೆ ಮರುಗಿರುವ ಯಶ್, ಹುಟ್ಟುಹಬ್ಬ ನಿಮಿತ್ತ ಹಮ್ಮಿಕೊಂಡಿದ್ದ ಎಲ್ಲಾ ಕೆಲಸ ಕಾರ್ಯಗಳನ್ನೂ ಕ್ಯಾನ್ಸಲ್ ಮಾಡಿದ್ದಾರೆ. ಜೊತೆಗೆ ಮೃತಪಟ್ಟಿರುವ ಅಭಿಮಾನಿಗಳ ಕುಟುಂಬಸ್ಥರನ್ನು ಭೇಟಿಯಾಗಲು ನಿರ್ಧರಿಸಿದ್ದಾರೆ. ಎಲ್ಲವೂ ಅಂದುಕೊಂಡಂತೆ ಸಂಜೆ 4 ಗಂಟೆ ವೇಳೆಗೆ ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮಕ್ಕೆ‌ ಯಶ್ ಹೋಗಲಿದ್ದಾರೆ. ಅಲ್ಲಿ ಮೃತ ಅಭಿಮಾನಿಗಳ ಕುಟುಂಬಕ್ಕೆ ಸಾಂತ್ವನ ಹೇಳಿ, ನೊಂದವರ ದುಃಖದಲ್ಲಿ ಭಾಗಿ ಆಗಲಿದ್ದಾರೆ ಎಂದು ಯಶ್‌ ಅವರ ಆಪ್ತ ವಲಯಗಳು ತಿಳಿಸಿವೆ.

ಇನ್ನು ಯಶ್​ ಹುಟ್ಟುಹಬ್ಬ ಹಿನ್ನೆಲೆಯಲ್ಲಿ ಕಟೌಟ್ ನಿಲ್ಲಿಸುತ್ತಿದ್ದಾಗ ಮೂವರು ಯುವಕರಿಗೆ ವಿದ್ಯುತ್ ತಗುಲಿ ಸಾವನ್ನಪ್ಪಿರೋ ಘಟನೆ ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮದಲ್ಲಿ ನಡೆದಿದೆ. ಹನಮಂತ ಹರಿಜನ (21), ಮುರಳಿ ನಡವಿನಮನಿ (20) ನವೀನ್ ಗಾಜಿ (19) ಮೃತ ಯುವಕರು. ಮೃತ ಯುವಕರು ಸೂರಣಗಿ ಗ್ರಾಮದ ನಿವಾಸಿಗಳು. ಯಶ್​ ಬರ್ತ್​ ಡೇಗಾಗಿ ಅಭಿಮಾನಿಗಳು ಗ್ರಾಮದಲ್ಲಿ ಕಟೌಟ್ ಕಟ್ಟಲು ಮುಂದಾಗಿದ್ದರು. ಕಟೌಟ್ ಮೇಲೆ ಎತ್ತುತ್ತಿದ್ದಾಗ ಮೇಲೆ ಹಾದು ಹೋಗಿದ್ದ ಯುವಕರಿಗೆ ವಿದ್ಯುತ್ ಶಾಕ್ ತಗುಲಿದೆ. ಈ ವೇಳೆ ಅಲ್ಲೇ ನಿಂತುಕೊಂಡಿದ್ದ ಮಂಜುನಾಥ್ ಹರಿಜನ, ದೀಪಕ ಹರಿಜನ, ಪ್ರಕಾಶ ಮ್ಯಾಗೇರಿ ಎಂಬುವವರಿಗೆ ಗಂಭೀರ ಗಾಯಗಳಾಗಿವೆ. ಕೂಡಲೇ ಅವರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಇನ್ನು ಯಶ್ ಅಭಿಮಾನಿಗಳ ಕುಟುಂಬಕ್ಕೆ ರಾಜ್ಯ ಸರ್ಕಾರ ತಲಾ 2 ಲಕ್ಷ ರೂ. ಪರಿಹಾರ ಘೋಷಣೆ ಮಾಡಿದೆ. ಈ ಸಂಬಂಧ ಮಾತನಾಡಿರುವ ಸಚಿವ ಹೆಚ್.ಕೆ ಪಾಟೀಲ್, ವಿದ್ಯುತ್ ಸ್ಪರ್ಶದಿಂದ ಮೃತಪಟ್ಟವರ ಕುಟುಂಬಗಳಿಗೆ ರಾಜ್ಯ ಸರ್ಕಾರದಿಂದ ಪರಿಹಾರ ಘೋಷಣೆ ಮಾಡಿದ್ದೇವೆ ಎಂದು ತಿಳಿಸಿದ್ದಾರೆ.

Font Awesome Icons

Leave a Reply

Your email address will not be published. Required fields are marked *