ಆಯಾ ವರ್ಷದಲ್ಲಿಯೇ ಅನುದಾನ ವಿನಿಯೋಗಿಸಿ: ಹೆಚ್.ಸಿ.ಮಹದೇವಪ್ಪ

ಮೈಸೂರು: ಆಯಾ ವರ್ಷದಲ್ಲಿ ಬಿಡುಗಡೆಯಾದ ಅನುದಾನವನ್ನು ಆಯಾ ವರ್ಷವೇ ಖರ್ಚು ಮಾಡಬೇಕು. ಇಲ್ಲದಿದ್ದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ಎಚ್ಚರಿಕೆ ನೀಡಿದರು.

ಬೆಂಗಳೂರಿನಲ್ಲಿ ನಡೆದ ಎಸ್‌ಸಿಎಸ್‌ಪಿ, ಟಿಎಸ್‌ಪಿ ನೋಡಲ್ ಏಜೆನ್ಸಿ ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಶೇ.24 ಜನಸಂಖ್ಯೆ ಇರುವ ಪರಿಶಿಷ್ಟ ಜಾತಿ ಮತ್ತು ಪಂಗಡ ಸಮುದಾಯದ ಜನರ ಏಳಿಗೆಗಾಗಿ ಕಾಯ್ದೆಯ ರೂಪದಲ್ಲಿ ಕಲ್ಪಿಸಲಾದ ಅನುದಾನದ ಬಳಕೆಯಿಂದ ಅವರ ಬದುಕಿನಲ್ಲಿ ಉಂಟಾದ ಧನಾತ್ಮಕ ಬದಲಾವಣೆಯ ಕುರಿತಾಗಿ ಮೌಲ್ಯಮಾಪನ ವರದಿ ನೀಡಿ. ನೀಡಲ್ಪಟ್ಟ ಇಲಾಖಾವಾರು ಅನುದಾನದಿಂದ ಎಷ್ಟು ಮಂದಿಗೆ ಪ್ರಯೋಜನ ಆಗಿದೆ ಎಂಬ ಅಂಕಿ ಅಂಶವನ್ನು ನೀಡಬೇಕು. ಇದರಿಂದ ಅನುದಾನ ಸದ್ಬಳಕೆಯಾಗುತ್ತಿದೆಯೋ, ಇಲ್ಲವೋ ಎಂಬುದು ತಿಳಿಯಲಿದೆ. ಯಾವ ಇಲಾಖೆಯಲ್ಲಿ ಎಷ್ಟು ಅನುದಾನ ಬಳಕೆ ಮಾಡಿಕೊಳ್ಳಲಾಗಿದೆ ಎಂಬುದೂ ತಿಳಿಯುತ್ತದೆ. ಹೀಗಾಗಿ ವರದಿ ನೀಡಿ ಎಂದು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ವಿವಿಧ ಇಲಾಖೆಗಳಲ್ಲಿ ಪರಿಶಿಷ್ಟ ಜಾತಿಯ ಮತ್ತು ಪರಿಶಿಷ್ಟ ಪಂಗಡದ ಅರ್ಹ ಫಲಾನುಭವಿಗಳಿಗೆ ಎಸ್‌ಸಿಎಸ್‌ಪಿ, ಟಿಎಸ್‌ಪಿ ಕಾರ್ಯಕ್ರಮದಡಿ ಹಲವು ಯೋಜನೆಗಳನ್ನು ರೂಪಿಸಲಾಗಿದೆ. ಇವುಗಳನ್ನು ಪರಿಣಾಮಕಾರಿಯಾಗಿ ತಲುಪಿಸಿ. ಮಕ್ಕಳ ವಿದ್ಯಾಭ್ಯಾಸಕ್ಕೆಂದು ಸರ್ಕಾರ ರೂಪಿಸಿರುವ ಯೋಜನೆಗಳು ಯಾವುದೇ ಕಾರಣಕ್ಕೂ ಹಳ್ಳಹಿಡಿಯಬಾರದು. ಅವುಗಳನ್ನು ಎಲ್ಲರಿಗೂ ಪರಿಣಾಮಕಾರಿಯಾಗಿ ತಲುಪಿಸಿ ಆ ಕುರಿತು ಸರಿಯಾದ ವರದಿಯನ್ನು ನೀಡುವಂತೆಯೂ ಸಚಿವರು ಆದೇಶ ನೀಡಿದರು.

ನೋಡಲ್ ಸಭೆಗಳ ನಂತರ ಎಲ್ಲರೂ ಮತ್ತೊಂದು ಸಭೆಯಲ್ಲಿ ಕೇವಲ ಸ್ಪಷ್ಟನೆ ನೀಡದೇ ಕೆಲಸ ಮೂಲಕ ಬಡವರಿಗೆ ಸಹಾಯ ಮಾಡಬೇಕು. ಅಧಿಕಾರಿಗಳೆಂದರೆ ಸರ್ಕಾರ ಮತ್ತು ಜನರ ನಡುವೆ ಸೇತುವೆ ಆಗಿದ್ದು ತಮ್ಮ ಸ್ಥಾನದ ಮಹತ್ವ ಅರಿತು ಕೆಲಸ ಮಾಡಬೇಕು. ಸಬೂಬು ಹೇಳದೆ ತಮಗೆ ವಹಿಸಿರುವ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ಮಾಡುವ ಮೂಲಕ ಸರ್ಕಾರಕ್ಕೆ ಒಳ್ಳೆಯ ಹೆಸರು ತರಬೇಕು ಎಂದು ಹೇಳಿದರು. ಸುದೀರ್ಘ 6 ಗಂಟೆಗಳ ಕಾಲ ಜರುಗಿದ ಸಭೆಯಲ್ಲಿ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಿದರು.

ಸಭೆಯಲ್ಲಿ ಎಸ್‌ಸಿಎಸ್‌ಪಿ, ಟಿಎಸ್‌ಪಿ ನೋಡಲ್ ಏಜೆನ್ಸಿ ಸಲಹೆಗಾರ, ಸಮಾಜ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ, ಆಯುಕ್ತರು, ಎಸ್‌ಸಿಎಸ್‌ಪಿ, ಟಿಎಸ್‌ಪಿ ನಿರ್ದೇಶಕರು ಹಾಗೂ ಅಧಿಕಾರಿಗಳು ಸೇರಿದಂತೆ, ವಿವಿಧ ಇಲಾಖೆಗಳ ಅಪರ ಮುಖ್ಯ ಕಾರ್ಯದರ್ಶಿ, ಪ್ರಧಾನ ಕಾರ್ಯದರ್ಶಿ, ಕಾರ್ಯದರ್ಶಿ, ಹಿರಿಯ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

Font Awesome Icons

Leave a Reply

Your email address will not be published. Required fields are marked *