ಇಂಗ್ಲೆಂಡ್ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲಿ ಶುಭ್​ಮನ್ ಗಿಲ್ ಶತಕ

ವಿಶಾಖಪಟ್ಟಣಂ: ವೈಎಸ್​ ರಾಜಶೇಖರ ರೆಡ್ಡಿ ಮೈದಾನದಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲಿ ಶುಭ್​ಮನ್ ಗಿಲ್  ಭರ್ಜರಿ ಸೆಂಚುರಿ ಸಿಡಿಸಿದ್ದಾರೆ. ಈ ಪಂದ್ಯದ ಮೊದಲ ಇನಿಂಗ್ಸ್​ನಲ್ಲಿ 34 ರನ್ ಬಾರಿಸಿ ಔಟಾಗಿದ್ದ ಗಿಲ್ ದ್ವಿತೀಯ ಇನಿಂಗ್ಸ್​ನಲ್ಲಿ ಮೂರಂಕಿ ಮೊತ್ತಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಟೀಮ್ ಇಂಡಿಯಾ ಮೊತ್ತ 29 ರನ್​ಗಳಿದ್ದಾಗ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಶುಭ್​ಮನ್ ಗಿಲ್ ಸ್ಪೋಟಕ ಬ್ಯಾಟಿಂಗ್ ಪ್ರದರ್ಶಿಸಿದರು. ಪರಿಣಾಮ ಅವರ ಬ್ಯಾಟ್​ನಿಂದ ಕೇವಲ 59 ಎಸೆತಗಳಲ್ಲಿ ಅರ್ಧಶತಕ ಮೂಡಿಬಂತು. ಹಾಫ್ ಸೆಂಚುರಿ ಬಳಿಕ ಎಚ್ಚರಿಕೆಯ ಬ್ಯಾಟಿಂಗ್ ಪ್ರದರ್ಶಿಸಿದ ಗಿಲ್ ಅವಕಾಶ ಸಿಕ್ಕಾಗೆಲ್ಲಾ ಇಂಗ್ಲೆಂಡ್ ಬೌಲರ್​ಗಳ ಬೆಂಡೆತ್ತಿದರು.

ಈ ಮೂಲಕ 132 ಎಸೆತಗಳಲ್ಲಿ 2 ಭರ್ಜರಿ ಸಿಕ್ಸರ್ ಹಾಗೂ 11 ಫೋರ್​ಗಳೊಂದಿಗೆ ಶತಕ ಪೂರೈಸಿದರು. ವಿಶೇಷ ಎಂದರೆ ಮಾರ್ಚ್​ 2023 ರಲ್ಲಿ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್​ನಲ್ಲಿ ಕೊನೆಯ ಬಾರಿ ಶತಕ ಸಿಡಿಸಿದ್ದ ಗಿಲ್ ಆ ಬಳಿಕ ಸತತ ಬ್ಯಾಟಿಂಗ್​ ವೈಫಲ್ಯಕ್ಕೆ ಒಳಗಾಗಿದ್ದರು. ಇದೀಗ ಶತಕದೊಂದಿಗೆ ಶುಭ್​ಮನ್ ಮತ್ತೆ ಫಾರ್ಮ್ ಕಂಡುಕೊಂಡಿದ್ದಾರೆ.

ಇದು ಶುಭ್​ಮನ್ ಗಿಲ್ ಅವರ ಮೂರನೇ ಟೆಸ್ಟ್ ಶತಕ. ಇದಕ್ಕೂ ಮುನ್ನ ಬಾಂಗ್ಲಾದೇಶ್ (vs 110 ರನ್ಸ್) ಮತ್ತು ಆಸ್ಟ್ರೇಲಿಯಾ (vs 128 ರನ್ಸ್) ವಿರುದ್ಧ ಭರ್ಜರಿ ಶತಕಗಳನ್ನು ಬಾರಿಸಿದ್ದಾರೆ. ಇದೀಗ ಇಂಗ್ಲೆಂಡ್ ವಿರುದ್ಧ ಶತಕ ಸಿಡಿಸಿ ಮೂರನೇ ಬಾರಿ ಮೂರಂಕಿ ರನ್​ ಕಲೆಹಾಕಿದ್ದಾರೆ.

ಶುಭ್​ಮನ್ ಗಿಲ್ ಅವರ ಈ ಭರ್ಜರಿ ಶತಕದ ನೆರವಿನಿಂದ ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಬೃಹತ್ ಮೊತ್ತದತ್ತ ದಾಪುಗಾಲಿಟ್ಟಿದೆ. 52 ಓವರ್​ಗಳ ಮುಕ್ತಾಯದ ವೇಳೆಗೆ ಟೀಮ್ ಇಂಡಿಯಾ 4 ವಿಕೆಟ್​ ಕಳೆದುಕೊಂಡು 201 ರನ್ ಕಲೆಹಾಕಿದೆ.

Font Awesome Icons

Leave a Reply

Your email address will not be published. Required fields are marked *