ಕೊಪ್ಪಳ: ಲೋಕಸಭಾ ಚುನಾವಣೆಗೆ ಸಂಸದ ಕರಡಿ ಸಂಗಣ್ಣರಿಗೆ ಟಿಕೆಟ್ ಕೈತಪ್ಪಿದ ಹಿನ್ನೆಲೆ ಅಸಮಾಧಾನಗೊಂಡಿರುವ ಟಿಕೆಟ್ ವಂಚಿತ ಸಂಸದ ಕರಡಿ ಸಂಗಣ್ಣ ಇಂದು ಮಹತ್ವದ ಸುದ್ದಿಗೋಷ್ಠಿ ನಡೆಸಲಿದ್ದಾರೆ. ಸುದ್ದಿಗೋಷ್ಠಿ ವೇಳೆ ಮಹತ್ವದ ಘೋಷಣೆ ಸಾಧ್ಯತೆ ಇದೆ.
ಈಗಾಗಲೇ ಹಾಲಿ ಸಂಸದರಿಗೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಬಿಗ್ ಆಫರ್ ನೀಡಿದ್ದಾರೆ ಎನ್ನಲಾಗಿದ್ದು, ಕಾಂಗ್ರೆಸ್ ನಾಯಕರು ಸಂಪರ್ಕ ಮಾಡಿರುವ ಬೆನ್ನಲ್ಲೇ ದಿಢೀರ್ ಪತ್ರಿಕಾಗೋಷ್ಠಿ ಕರೆದಿರುವುದು ತೀವ್ರ ಕುತೂಹಲ ಮೂಡಿಸಿದೆ.
ಇನ್ನು ಸಂಸದ ಕರಡಿ ಸಂಗಣ್ಣ ಅವರು ಕಾಂಗ್ರೆಸ್ ನಿಂದ ಕ್ಷೇತ್ರದಲ್ಲಿ ಟಿಕೆಟ್ಗೆ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಕಾಂಗ್ರೆಸ್ ನಾಯಕರು ಭರವಸೆ ನೀಡಿದ್ದಾರಂತೆ. ಈ ಹಿನ್ನೆಲೆಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ನಾಯಕರ ವಿರುದ್ಧ ಅಸಮಾಧಾನ ಮೂಲಕ ಕಾಂಗ್ರೆಸ್ ಸೇರ್ಪಡೆಗೆ ಸಿದ್ಧತೆ ನಡೆದಿದೆ ಎನ್ನಲಾಗಿದೆ.
ಕೊಪ್ಪಳದ ಸಂಸದರ ನಿವಾಸದಲ್ಲಿ ಇಂದು ಬೆಳಗ್ಗೆ 11 ಗಂಟೆಗೆ ಪತ್ರಿಕಾಗೋಷ್ಠಿ ನಡೆಯಲಿದ್ದು, ಶುಕ್ರವಾರ ಬೆಂಬಲಿಗರ ಸಭೆ ನಡೆಸಿ ಆ ಬಳಿಕ ಕಾಂಗ್ರೆಸ್ ಪಕ್ಷ ಸೇರ್ಪಡೆ ಆಗುವ ಸಾಧ್ಯತೆ ಇದೆ ಎನ್ನಲಾಗಿದೆ.
ಇತ್ತ ಬೆಂಗಳೂರು ಬಿಜೆಪಿಯಿಂದ ಉತ್ತರ ಕ್ಷೇತ್ರದಲ್ಲಿ ಟಿಕೆಟ್ ಕೈತಪ್ಪ ಬೆನ್ನಲ್ಲೇ ಮಾಜಿ ಸಿಎಂ ಡಿ.ವಿ.ಸದಾನಂದಗೌಡ ಬಂಡೆದ್ದಿದ್ದಾರೆ. ಇಂದು ಸಭೆ ಕರೆದಿರುವ ಡಿವಿಎಸ್ ತಮ್ಮ ಮುಂದಿನ ನಿರ್ಧಾರ ಪ್ರಕಟಿಸಲಿದ್ದಾರೆ. ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗುವಂತೆ ಆ ಪಕ್ಷದ ನಾಯಕರು ನನ್ನನ್ನು ಸಂಪರ್ಕಿಸಿರೋದು ನಿಜ, ಈ ಬಗ್ಗೆ ಕುಟುಂಬದವರೊಂದಿಗೆ ಚರ್ಚಿಸಿ ಮುಂದಿನ ನಿರ್ಧಾರ ತಿಳಿಸುತ್ತೇನೆ ಎಂದು ಡಿವಿಎಸ್ ಹೇಳಿದ್ದಾರೆ.