ನವದೆಹಲಿ: ಭಾರತ ರತ್ನವು ನನ್ನ ಆದರ್ಶ ಮತ್ತು ತತ್ವಗಳಿಗಾಗಿ ಕೊಡಲಾಗ ಗೌರವ ಎಂದ ಎಲ್.ಕೆ.ಅಡ್ವಾಣಿ(೯೬), ತಮ್ಮ ಪಕ್ಷದ ಕಾರ್ಯಕರ್ತರು ಮತ್ತು ಅವರ ಪತ್ನಿ ಕಮಲಾರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.
ಬಿಜೆಪಿಯ ಹಿರಿಯ ನಾಯಕರಾದ ಅಡ್ವಾಣಿಯವರಿಗೆ ಶನಿವಾರ ಭಾರತ ರತ್ನ ಪ್ರಶಸ್ತಿ ಘೋಷಿಸಲಾಯಿತು. ಇದನ್ನು ನಾನು ನಮ್ರತೆ ಮತ್ತು ಕೃತಜ್ಞತೆಯಿಂದ ಸ್ವೀಕರಿಸುತ್ತೇನೆ ಎಂದು ಅವರು ಹೇಳಿದರು.
ತಾವು ೧೪ನೇ ವಯಸ್ಸಿನಲ್ಲಿ ಅರ್.ಎಸ್.ಎಸ್ ಸೇರಿದಾಗಿನ ನೆನಪುಗಳನ್ನು ಹಂಚಿಕೊಂಡ ಅಡ್ವಾಣಿ, ಜೀವನದಲ್ಲಿ ನನಗೆ ನಿಯೋಜಿಸಲಾದ ಯಾವುದೇ ಕಾರ್ಯದಲ್ಲಿ ನನ್ನ ಪ್ರೀತಿಯ ದೇಶದ ಸಮರ್ಪಿತ ಮತ್ತು ನಿಸ್ವಾರ್ಥ ಸೇವೆಯಲ್ಲಿ ಮಾತ್ರ ಪ್ರತಿಫಲವನ್ನು ಬಯಸಿದೆ ಎಂದು ಹೇಳಿದ್ದಾರೆ.
ʼನನ್ನ ಜೀವನಕ್ಕೆ ಸ್ಪೂರ್ತಿ ನೀಡಿದ್ದು ಸಂಸ್ಕೃತದ ಮಂತ್ರ ಇದಮ್-ನ-ಮಮʼ. ಇದರರ್ಥ, ಈ ಜೀವನ ನನ್ನದಲ್ಲ, ನನ್ನ ಜೀವನ ರಾಷ್ಟ್ರಕ್ಕಾಗಿʼ ಎಂದು ಅವರು ಹೇಳಿದರು.
ತಮ್ಮ ಧನ್ಯವಾದ ಪತ್ರದಲ್ಲಿ ಇಬ್ಬರು ಹಿರಿಯರಾದ ಪಂಡಿತ್ ದೀನದಯಾಳ್ ಉಪಾಧ್ಯಾಯ ಮತ್ತು ಅಟಲ್ ಬಿಹಾರಿ ವಾಜಪೇಯಿ ಅವರನ್ನು ನೆನಪಿಸಿಕೊಂಡ ಅಡ್ವಾಣಿ, ಅವರೊಂದಿಗೆ ನಿಕಟವಾಗಿ ಕೆಲಸ ಮಾಡುವ ಗೌರವವನ್ನು ಪಡೆದ ಇಬ್ಬರು ವ್ಯಕ್ತಿಗಳನ್ನು ಇಂದು ನಾನು ಕೃತಜ್ಞತೆಯಿಂದ ಸ್ಮರಿಸುತ್ತೇನೆ ಎಂದು ಹೇಳಿದರು.
1990 ರ ದಶಕದ ಆರಂಭದಲ್ಲಿ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕಾಗಿ ರಥಯಾತ್ರೆ ಕೈಗೊಂಡು ಪಕ್ಷವನ್ನು ರಾಷ್ಟ್ರೀಯ ಪ್ರಾಮುಖ್ಯತೆಗೆ ತರುವಲ್ಲಿ ಪ್ರಮುಖ ಪಾತ್ರ ವಹಿಸಿದ ಬಿಜೆಪಿಯ ಪ್ರಮುಖ ವ್ಯಕ್ತಿ ಲಾಲ್ ಕೃಷ್ಣ ಅಡ್ವಾಣಿ ಅವರಿಗೆ ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿ ಭಾರತ ರತ್ನ ನೀಡಿ ಗೌರವಿಸುವುದಾಗಿ ಮೋದಿ ಶನಿವಾರ ಘೋಷಣೆ ಮಾಡಿದರು. ಈ ಸಂದರ್ಭದಲ್ಲಿ, ಭಾರತದ ಅಭಿವೃದ್ಧಿಯಲ್ಲಿ ಎಲ್‌ಕೆ ಅಡ್ವಾಣಿ ಅವರು ನಿರ್ವಹಿಸಿದ ಸ್ಮಾರಕ ಪಾತ್ರವನ್ನು ಒತ್ತಿ ಹೇಳಿದ ಪ್ರಧಾನಿ ಮೋದಿ, ಅವರನ್ನು ದೇಶದ ಅತ್ಯಂತ ಗೌರವಾನ್ವಿತ ರಾಜಕಾರಣಿಗಳಲ್ಲಿ ಒಬ್ಬರು ಎಂದು ಶ್ಲಾಘಿಸಿದರು.