ಕನ್ನಡ ಚಿತ್ರರಂಗದಲ್ಲಿ 50 ವರ್ಷಗಳನ್ನು ಪೂರೈಸಿದ ಹಿರಿಯ ನಟ ಅನಂತ ನಾಗ್

ನಟ ಶಿವರಾಜ್‌ ಕುಮಾರ್‌, ರಿಷಬ್‌ ಶೆಟ್ಟಿ, ರಕ್ಷಿತ್‌ ಶೆಟ್ಟಿ ಸೇರಿದಂತೆ ಚಿತ್ರರಂಗದ ಅನೇಕರು ಅವರಿಗೆ ಶುಭಾಶಯ ಕೋರಿದ್ದಾರೆ.

ಅನಂತ ನಾಗ್ ಜೊತೆ ಇರುವ ಚಿತ್ರವೊಂದನ್ನು ತಮ್ಮ ಸಾಮಾಜಿಕ ಜಾಲತಾಣ ಪುಟದಲ್ಲಿ ಹಂಚಿಕೊಂಡಿರುವ ಶಿವರಾಜ್​ಕುಮಾರ್, ‘ಚಿತ್ರರಂಗದಲ್ಲಿ 50 ವರ್ಷ ಯಶಸ್ವಿಯಾಗಿ ಪೂರೈಸಿದ ನಿಮಗೆ ಹೃತ್ಪೂರ್ವಕ ಅಭಿನಂದನೆ. ನಿಮ್ಮ ಪ್ರತಿಭೆ, ವರ್ಚಸ್ಸು ತಲೆಮಾರುಗಳವರೆಗೆ ಪ್ರೇರಣೆ’ ಎಂದು ಬರೆದುಕೊಂಡಿದ್ದಾರೆ.

ಗೋಧಿ ಬಣ್ಣ ಸಾಧಾರಣ ಮೈಕಟ್ಟಿನ ಈ ನಟ ಕನ್ನಡ ಪ್ರೇಕ್ಷಕನ ಮನಸಿನಿಂದ ಎಂದೂ ಕಾಣೆಯಾಗೋದಿಲ್ಲ. ಬಯಲುದಾರಿಯ ಹೆಲಿಕಾಪ್ಟರಿನೊಳಗೆ, ‘ನಾರದ ವಿಜಯ’ದ ತಂಬೂರಿ ಜೊತೆಗೆ, ‘ಗಣೇಶನ ಮದುವೆ’ಯ ವಠಾರದಲ್ಲಿ, ‘ಬೆಳದಿಂಗಳ ಬಾಲೆ’ಯ ಕನಸಿನೊಳಗೆ, ‘ಮುಂಗಾರುಮಳೆ’ಯ ಕಣ್ಣೀರಿನಲ್ಲಿ ಅವರ ಜೊತೆ ಒದ್ದೆಯಾದವರೆಷ್ಟೋ.

ನಟ ರಿಷಬ್‌ ಶೆಟ್ಟಿ ತಮ್ಮ ಸಾಮಾಜಿಕ ಜಾಲತಾಣದ ಪುಟದಲ್ಲಿ ಅನಂತ್‌ನಾಗ್‌ ಅಭಿನಯದ ಚಿತ್ರಗಳ ವಿಶೇಷ ವಿಡಿಯೋ ಮಾಡಿ ಹಂಚಿಕೊಂಡಿದ್ದಾರೆ. ‘ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು’ ಚಿತ್ರದ ಅನಂತ ಪ‍ದ್ಮನಾಭರಿಗೆ ಅನಂತ ಶುಭಾಶಯಗಳು’ ಎಂದು ಶುಭ ಹಾರೈಸಿದ್ದಾರೆ.

ಮರಾಠಿ ಕುಟುಂಬಕ್ಕೆ ಸೇರಿದ ಅನಂತ್‌ನಾಗ್‌ ಸಿನಿಮಾಗೆ ಬರುವ ಮುನ್ನ ರಂಗಭೂಮಿಯಲ್ಲಿ ತೊಡಗಿಸಿಕೊಂಡಿದ್ದರು. ಮುಂಬೈನಲ್ಲಿ ನೆಲೆಸಿದ್ದ ಅವರು ಅನೇಕ ನಾಟಕಗಳಲ್ಲಿ ಅಭಿನಯಿಸಿದ್ದಾರೆ. ಸಿನಿಮಾದಲ್ಲಿ ಅವಕಾಶ ದೊರೆತ ನಂತರ ಅನಂತ್‌ನಾಗ್‌ ಬೆಂಗಳೂರಿಗೆ ಶಿಫ್ಟ್‌ ಆದರು. ನಂತರ ಸಹೋದರ ಶಂಕರ್‌ನಾಗ್‌ ಹಾಗೂ ಇತರ ಸ್ನೇಹಿತರನ್ನು ಕೂಡಾ ಕರೆಸಿಕೊಂಡರು. ‘ಸಂಕಲ್ಪ’ ಚಿತ್ರದ ಮೂಲಕ ಅನಂತ್‌ನಾಗ್‌ ಸಿನಿಮಾ ಕರಿಯರ್‌ ಆರಂಭಿಸಿದ್ದರು. ಈ ಸಿನಿಮಾ 1973ರಲ್ಲಿ ತೆರೆ ಕಂಡಿತ್ತು.

ಕನ್ನಡ ಚಿತ್ರರಂಗಕ್ಕೆ ದೊಡ್ಡ ಕೊಡುಗೆ ನೀಡಿದ ಅನಂತ್‌ನಾಗ್‌ ಅವರಂಥ ನಟನಿಗೆ ಪದ್ಮ ಪ್ರಶಸ್ತಿ ದೊರೆಯಲೇಬೇಕು ಎಂದು ಚಿತ್ರರಂಗದ ಕೆಲವರು ಒತ್ತಾಯಿಸಿದ್ದರು.

Font Awesome Icons

Leave a Reply

Your email address will not be published. Required fields are marked *