ಕೆ-ಸೆಟ್‌ಗಾಗಿ ರೈಲಿನ ಟಾಯ್ಲೆಟ್‌ನಲ್ಲಿ ಕುಳಿತು ಪ್ರಯಾಣ!

ಕಲಬುರಗಿ: ಸಹಾಯಕ ಪ್ರಾಧ್ಯಾಪಕರ ನೇಮಕಾತಿಯ ಅರ್ಹತಾ ಪರೀಕ್ಷೆ (ಕೆ-ಸೆಟ್‌) ಬರೆಯಲು ಬೆಂಗಳೂರಿಗೆ ತೆರಳಿದ್ದ ಕಲ್ಯಾಣ ಕರ್ನಾಟಕದ ನೂರಾರು ಅಭ್ಯರ್ಥಿಗಳು ರೈಲು, ಬಸ್‌ಗಳ ಸೀಟ್‌ ಸಿಗದೆ ಪರದಾಡಿದ್ದು, ಕೆಲವರು ರೈಲಿನ ಟಾಯ್ಲೆಟ್‌ನಲ್ಲಿ ಕುಳಿತು ಪ್ರಯಾಣಿಸಿ ಪರೀಕ್ಷೆ ಬರೆದರು.

ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (ಕೆಇಎ) ನೇಮಕಾತಿ ಪರೀಕ್ಷೆಯಲ್ಲಿ ಬ್ಲೂಟೂತ್ ಸಾಧನ ಬಳಸಿದ ಅಕ್ರಮ ಪ್ರಕರಣ ಕೆ-ಸೆಟ್‌ ಮೇಲೂ ಪರಿಣಾಮ ಬೀರಿತ್ತು. ಹೀಗಾಗಿ, ಪಾರದರ್ಶಕ ಪರೀಕ್ಷೆಯ ದೃಷ್ಟಿಯಿಂದ ಕೆಇಎ ಅಧಿಕಾರಿಗಳು ಏಕಾಏಕಿ ಪರೀಕ್ಷಾ ಕೇಂದ್ರವನ್ನು ಕಲಬುರಗಿಯಿಂದ ಬೆಂಗಳೂರಿಗೆ ಸ್ಥಳಾಂತರಿಸಿದ್ದರು.

ಅಸಮಾಧಾನದ ನಡುವೆಯೂ ಪರೀಕ್ಷೆ ಬರೆಯಲು ಬೆಂಗಳೂರಿಗೆ ತೆರಳಿದ್ದ ಸಹಾಯಕ ಪ್ರಾಧ್ಯಾಪಕರ ಹುದ್ದೆಯ ಆಕಾಂಕ್ಷಿತ ಸ್ನಾತಕೋತ್ತರ ಪದವೀಧರರು ತಮ್ಮ ನರಕಯಾತನೆಯ ನೋವನ್ನು ‘ಪ್ರಜಾವಾಣಿ’ಯೊಂದಿಗೆ ಹಂಚಿಕೊಂಡರು.

‘ಪರೀಕ್ಷಾ ಕೇಂದ್ರವನ್ನು ಬೆಂಗಳೂರಿಗೆ ಸ್ಥಳಾಂತರವಾದ ಮರುದಿನದಿಂದ (ಡಿಸೆಂಬರ್ 14) ರೈಲಿನ ಕಾಯ್ದಿರಿಸಿದ ಸೀಟ್‌ಗೆ ಪ್ರಯತ್ನಿಸಿದರೂ ಸಿಗಲಿಲ್ಲ. ಅನಿವಾರ್ಯವಾಗಿ ಜನರಲ್ ಟಿಕೆಟ್‌ ಪಡೆದು ಬೆಂಗಳೂರಿನವರೆಗೂ ನಿಂತುಕೊಂಡೇ, ಕೆಲವರು ಸೀಟ್‌ಗಳ ಕೆಳಗಡಿ ಮಲಗಿ ಪ್ರಯಾಣಿಸಿದರು. ರೈಲಿನ ಟಾಯ್ಲೆಟ್‌ ರೂಮ್‌ನಲ್ಲಿ ಕುಳಿತು ಪ್ರಯಾಣಿಸಿದ್ದ ದೃಶ್ಯ ನೋಡಿದರೆ ನಾವು ಮನುಷ್ಯರೋ, ಕುರಿಗಳೋ ಎನಿಸಿತ್ತು. ಗಬ್ಬು ನಾರುತ್ತಿದ್ದ ಟಾಯ್ಲೆಟ್‌ನಲ್ಲಿ ಉಸಿರು ಬಿಗಿ ಹಿಡಿದುಕೊಂಡು ಪ್ರಯಾಣಿಸುವ ಸ್ಥಿತಿ ನಮ್ಮ ಶತ್ರುಗಳಿಗೂ ಬರಬಾರದಿತ್ತು’ ಎನ್ನುತ್ತಾರೆ ಕೆ-ಸೆಟ್‌ ಅಭ್ಯರ್ಥಿ, ಗುಲಬರ್ಗಾ ವಿ.ವಿ.ಯ ಅಣವೀರಗೌಡ ಬಿರಾದಾರ. ಮಧ್ಯಾಹ್ನ 2ಕ್ಕೆ ಪರೀಕ್ಷೆ ಮುಗಿಸಿಕೊಂಡು ಬಸ್‌ ನಿಲ್ದಾಣಕ್ಕೆ ಬರುವ ವೇಳೆಗೆ 5 ಗಂಟೆಯಾಗಿದ್ದರಿಂದ ಕಲಬುರಗಿಯ ಬಹುತೇಕ ಬಸ್‌ಗಳು ಹೋಗಿದ್ದವು. ರೈಲು ನಿಲ್ದಾಣಕ್ಕೆ ಬಂದು ನೋಡಿದರೆ ಜನರಲ್ ಬೋಗಿಗಳು ಅದಾಗಲೇ ಭರ್ತಿಯಾಗಿದ್ದವು. ಅನಿವಾರ್ಯವಾಗಿ ರೈಲ್ವೆ ಫ್ಲಾಟ್‌ಫಾರ್ಮ್‌ನಲ್ಲಿ ಮಲಗಿ, ಮರುದಿನ ರೈಲು ಹತ್ತಿ ವಾಪಸ್ ಬಂದೆವು’ ಎಂದು ಮತ್ತೊಬ್ಬ ಅಭ್ಯರ್ಥಿ ಮಾಳಪ್ಪ ಹೇಳಿದರು.

‘ಕಷ್ಟು ಪಟ್ಟು ಓದಿ ಸ್ನಾತಕೋತ್ತರ ಪದವಿ ಮುಗಿಸಿದ್ದೇವೆ. ಕುಟುಂಬದವರು ಸಹ ನಮ್ಮ ಪರೀಕ್ಷೆಯನ್ನು ನಂಬಿಕೊಂಡು ಕುಳಿತ್ತಿದ್ದಾರೆ. ವರ್ಷಗಟ್ಟಲೇ ಮನೆಯಲ್ಲಿ ಕುಳಿತು ಓದಿದ್ದನ್ನು ನೆನಪಿನಲ್ಲಿ ಇರಿಸಿಕೊಂಡು ಬರೆಯಬೇಕಾದರೆ ಮಾನಸಿಕ ನೆಮ್ಮದಿ ಮುಖ್ಯವಾಗುತ್ತದೆ. ನೂರಾರು ಕಿ.ಮೀ. ದೂರದಿಂದ ಕಣ್ತುಂಬ ನಿದ್ರೆ ಇಲ್ಲದೆ, ಸರಿಯಾಗಿ ಊಟ ಇಲ್ಲದೆ ಪರೀಕ್ಷೆ ಬರೆಯುವುದು ಹೇಗಾಗುತ್ತದೆ? ಕೆಇಎ ಅಧಿಕಾರಿಗಳು ಪರೀಕ್ಷಾ ಕೇಂದ್ರವನ್ನು ಏಕಾಏಕಿ ಸ್ಥಳಾಂತರಿಸುವ ಮುನ್ನ ಅಭ್ಯರ್ಥಿಗಳ ಕಷ್ಟ-ನೋವಿಗೂ ಸ್ಪಂದಿಸಬೇಕಾಗಿತ್ತು’ ಎಂದು ಅಭ್ಯರ್ಥಿ ಅಂಬಿಕಾ ನುಡಿದರು.

‘ಬೆಂಗಳೂರು ಜಿಲ್ಲೆಯ ಕೇಂದ್ರಗಳಲ್ಲಿ ಪರೀಕ್ಷೆ ಬರೆಯಲು ಕಲಬುರಗಿ ಕೇಂದ್ರದ ಅಭ್ಯರ್ಥಿಗಳಿಗೆ ಸಕಲ ರೀತಿಯ ವ್ಯವಸ್ಥೆ ಮಾಡುವುದಾಗಿ ಕೆಇಎ ಅಧಿಕಾರಿಗಳು ಭರವಸೆ ನೀಡಿದ್ದರು. ಆದರೆ, ಹೇಳಿಕೊಳ್ಳುವಂತಹ ಕನಿಷ್ಠಸೌಕರ್ಯಗಳು ಇರಲಿಲ್ಲ. ಬೆಂಗಳೂರಿನ ರೈಲು ನಿಲ್ದಾಣದಿಂದ 25-30 ಕಿ.ಮೀ. ದೂರದಲ್ಲಿ ಪರೀಕ್ಷಾ ಕೇಂದ್ರಗಳನ್ನು ಗುರುತಿಸಿದ್ದರು’ ಎಂದು ಅಭ್ಯರ್ಥಿ ನೇಹಾ ಬೇಸರದಿಂದ ಹೇಳಿದರು.

Font Awesome Icons

Leave a Reply

Your email address will not be published. Required fields are marked *