ಕೊಡಗಿನಲ್ಲಿ ಗಾಂಧೀಜಿಯವರ ಚಿತಾಭಸ್ಮಕ್ಕೆ ನಮನ – News Kannada (ನ್ಯೂಸ್ ಕನ್ನಡ)

ಮಡಿಕೇರಿ: ಗಾಂಧೀಜಿ ಅವರು ಕೊಡಗಿಗೆ ಭೇಟಿ ನೀಡಿದ ವೇಳೆ ಅವರು ಜನರನ್ನುದ್ದೇಶಿಸಿ ಮಾತನಾಡಿದ ಮೈದಾನ ಇಂದು ಗಾಂಧಿ ಮೈದಾನವಾಗಿದ್ದರೆ, ಇಲ್ಲೊಂದು ಮಂಟಪವನ್ನು ಕಟ್ಟಲಾಗಿದ್ದು, ಅದು ಗಾಂಧಿ ಮಂಟಪವಾಗಿ ಗಮನಸೆಳೆಯುತ್ತಿದೆ. ಈ ಗಾಂಧಿ ಮೈದಾನ ಮತ್ತು ಗಾಂಧಿ ಮಂಟಪದಲ್ಲಿಂದು ಗಾಂಧೀಜಿಯವರ ಪುಣ್ಯ ಸ್ಮರಣೆ ಮಾಡಲಾಗುತ್ತಿದೆ. ಈ ಮಂಟಪದಲ್ಲಿ ಗಾಂಧಿಯ ಚಿತಾಭಸ್ಮವಿರಿಸಿ ಪೂಜಿಸಲಾಗುತ್ತದೆ.

ಗಾಂಧಿಯವರ ಚಿತಾಭಸ್ಮ ವನ್ನು ಕೊಡಗಿನ ಖಜಾನೆಯಲ್ಲಿ ಭದ್ರವಾಗಿ ಇರಿಸಲಾಗಿದ್ದು, ಗಾಂಧಿಪುಣ್ಯ ಸ್ಮರಣೆ (ಜ.30)ಯಂದು ಖಜಾನೆಯೊಳಗೆ ಕರಂಡಿಕೆಯಲ್ಲಿ ಭದ್ರವಾಗಿಟ್ಟಿರುವ ಭಸ್ಮವನ್ನು ತಂದು ಗಾಂಧಿ ಮಂಟಪದಲ್ಲಿಟ್ಟು ಗೌರವ ಸಲ್ಲಿಸಲಾಗುತ್ತದೆ. ಈ ಸಂದರ್ಭ ಸರ್ವ ಧರ್ಮ ಪ್ರಾರ್ಥನೆಯೂ ನಡೆಯುತ್ತದೆ. ನಗರದಲ್ಲಿ ಒಂದು ನಿಮಿಷ ಎಲ್ಲ ಚಟುವಟಿಕೆಗಳನ್ನು ಸ್ಥಗಿತಗೊಳಿಸಿ ಮೌನವ್ರತ ಆಚರಿಸಲಾಗುತ್ತದೆ. ನಂತರ ಮತ್ತೆ ಗೌರವದೊಂದಿಗೆ ಚಿತಾಭಸ್ಮವನ್ನು ಮೆರವಣಿಗೆಯಲ್ಲಿ ಕೊಂಡೊಯ್ದು ಖಜಾನೆಯಲ್ಲಿರಿಸಲಾಗುತ್ತದೆ.

ಗಾಂಧೀಜಿ ಅವರು ಕೊಡಗಿಗೆ 1934 ಫೆಬ್ರವರಿ 21ರಂದು ತಮಿಳುನಾಡಿನ ಕೂನೂರಿನಿಂದ ಬಂದಿದ್ದರು. ಮಾರನೆಯ ದಿನ ಅಂದರೆ ಫೆಬ್ರವರಿ 22ರಂದು ಸಂಜೆ ಮೈಸೂರಿನಿಂದ ಆಗಿನ ಕಾಫಿ ಬೆಳೆಗಾರರಾಗಿದ್ದ ಗುಂಡುಕುಟ್ಟಿ ಮಂಜುನಾಥಯ್ಯ ಅವರ ಕಾರಿನಲ್ಲಿ ಪಂದ್ಯಂಡ ಬೆಳ್ಯಪ್ಪ ಅವರೊಂದಿಗೆ ಗಾಂಧೀಜಿಯವರನ್ನು ಗೋಣಿಕೊಪ್ಪಲುವಿಗೆ ಕರತಂದಿದ್ದರು. ಹಾಗೆ ಬಂದವರು ಗೋಣಿಕೊಪ್ಪಲು ಸಮೀಪದ ಕೈಕೇರಿಯ ಹರಿಜನ ಕೇರಿಗೆ ತೆರಳಿದ್ದರು. ಇದಾದ ನಂತರ ಪೊನ್ನಂಪೇಟೆ, ಹುದಿಕೇರಿ, ವಿರಾಜಪೇಟೆ, ಅಭ್ಯತ್‌ ಮಂಗಲ, ಫ್ರೇಜರ್ ಪೇಟೆ (ಕುಶಾಲನಗರ)ಕ್ಕೆ ತೆರಳಿ ಅಲ್ಲಿ ಜನರನ್ನುದ್ದೇಶಿಸಿ ಮಾತನಾಡಿದರು.

ಆ ನಂತರ ಮಡಿಕೇರಿಗೆ ಆಗಮಿಸಿದ್ದರು. ಗಾಂಧೀಜಿ ಅವರು ಮಡಿಕೇರಿಗೆ ಆಗಮಿಸುತ್ತಿರುವ ಸುದ್ದಿ ತಿಳಿದು ಅವರನ್ನು ನೋಡಲು ಜನ ಆಗಮಿಸಿದ್ದರು. ರಾಜಾಸೀಟ್‌ಗೆ ಭೇಟಿ ನೀಡಿದಾಗ ಅಲ್ಲಿನ ಮೈದಾನದಲ್ಲಿ ಸಾವಿರಾರು ಮಂದಿ ಸೇರಿದ್ದರು. ಅವರನ್ನುದ್ದೇಶಿಸಿ ಗಾಂಧಿ ಮಾತನಾಡಿದ್ದರು. ಅವತ್ತು ಗಾಂಧಿ ಮಾತನಾಡಿದ ಮುಂದೆ ಗಾಂಧಿ ಮೈದಾನವಾಗಿಯೇ ಜನಜನಿತವಾಯಿತು. ಕೊಡಗನ್ನು ಬಿಟ್ಟು ಹೋಗುವ ವೇಳೆ ಎರಡು ದಿನಗಳ ಭೇಟಿ ನನ್ನ ಬದುಕಿನಲ್ಲಿ ಅವಿಸ್ಮರಣೀಯವಾಗಿ ಉಳಿಯಲಿದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಇನ್ನು ಗಾಂಧಿ ಕೊಡಗಿನ ಭೇಟಿ ಮತ್ತು ಅವರು ಭಾಷಣ ಮಾಡಿದ ಸ್ಥಳವೆಲ್ಲವೂ ಮಹತ್ವ ಪಡೆದುಕೊಂಡಿದೆ. ಇಲ್ಲಿ ಗಾಂಧಿ ಮೈದಾನ ಮಾತ್ರವಲ್ಲದೆ ಗಾಂಧಿ ಮಂಟಪವೂ ಇದೆ. ಇಲ್ಲಿಯೇ ಗಾಂಧಿ ಮಂಟಪದಲ್ಲಿ ಗಾಂಧಿಯ ಪ್ರತಿಮೆಯನ್ನು ನಿರ್ಮಿಸಲಾಗಿದೆ.

Font Awesome Icons

Leave a Reply

Your email address will not be published. Required fields are marked *