ಗುಜರಾತ್ ಪೊಲೀಸರಿಗೆ ಛೀಮಾರಿ ಹಾಕಿದ ಸುಪ್ರೀಂಕೋರ್ಟ್. – Just Kannada | Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್

ನವದೆಹಲಿ,ಜನವರಿ,24,2024(www.justkannada.in): ಮುಸ್ಲಿಂ ಸಮುದಾಯಕ್ಕೆ ಸೇರಿದ ಐವರನ್ನು ಸಾರ್ವಜನಿಕವಾಗಿ ಥಳಿಸಿದ್ದ ಕೃತ್ಯದಲ್ಲಿ ಭಾಗಿಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಗುಜರಾತ್ ಪೊಲೀಸರಿಗೆ ಸುಪ್ರೀಂ ಕೋರ್ಟ್ ಛೀಮಾರಿ ಹಾಕಿದೆ.

ಇನ್‌ಸ್ಪೆಕ್ಟ‌ರ್ ಎ.ವಿ. ಪರ್ಮಾರ್, ಸಬ್‌ ಇನ್‌ ಸ್ಪೆಕ್ಟರ್ ಡಿ.ಬಿ.ಕುಮಾವತ್ ಮತ್ತು ಇಬ್ಬರು ಕಾನ್‌ ಸ್ಟೆಬಲ್‌ಗಳು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಗಳಾದ ಬಿ.ಆರ್.ಗವಾಯಿ ಹಾಗೂ ಸಂದೀಪ್ ಮೆಹ್ತಾ ಅವರಿದ್ದ ಪೀಠ ನಡೆಸಿತು. ‘ಜನರನ್ನು ಕಂಬಕ್ಕೆ ಕಟ್ಟಿ ಹಾಕಿ ಥಳಿಸಲು ನಿಮಗೆ ಅಧಿಕಾರ ಕೊಟ್ಟವರು ಯಾರು’ ಎಂದು ಈ ವೇಳೆ ನ್ಯಾಯಪೀಠ ಖಾರವಾಗಿ ಪ್ರಶ್ನಿಸಿದೆ.

ಆರೋಪಿಗಳನ್ನು ಬಂಧಿಸುವ ಮತ್ತು ವಿಚಾರಣೆಗೆ ಒಳಪಡಿಸುವ ಕುರಿತ ಸುಪ್ರೀಂ ಕೋರ್ಟ್‌ ನ ಮಾರ್ಗಸೂಚಿಗಳನ್ನು ಉಲ್ಲಂಘಿಸಿದ್ದಕ್ಕಾಗಿ ಗುಜರಾತ್ ಹೈಕೋರ್ಟ್, 2023ರ ಅಕ್ಟೋಬರ್ 19ರಂದು ಈ ನಾಲ್ವರಿಗೆ 14 ದಿನಗಳ ಜೈಲು ಶಿಕ್ಷೆ ವಿಧಿಸಿತ್ತು. ಆದೇಶವನ್ನು ಪ್ರಶ್ನಿಸಲು ಪೊಲೀಸರಿಗೆ ಅವಕಾಶ ನೀಡುವ ಉದ್ದೇಶದಿಂದ ಹೈಕೋರ್ಟ್, ತನ್ನ ಆದೇಶದ ಅನುಷ್ಠಾನಕ್ಕೆ ಮೂರು ತಿಂಗಳ ತಡೆಯಾಜ್ಞೆ ನೀಡಿತ್ತು. ಹೈಕೋರ್ಟ್‌ ಆದೇಶ ಪ್ರಶ್ನಿಸಿ ಪೊಲೀಸರು ಸುಪ್ರಿಂ ಕೋರ್ಟ್ ಮೊರೆ ಹೋಗಿದ್ದರು.

ಈ ವೇಳೆ ಪೊಲೀಸರ ವಿರುದ್ದ ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಮೂರ್ತಿ ಗವಾಯಿ ಅವರು, ಜನರನ್ನು ಕಂಬಕ್ಕೆ ಕಟ್ಟಿ ಅವರಿಗೆ ಥಳಿಸಲು ಕಾನೂನಿನಲ್ಲಿ ನಿಮಗೆ ಅಧಿಕಾರವಿದೆಯೇ? ಹೋಗಿ ಜೈಲು ಶಿಕ್ಷೆ ಅನುಭವಿಸಿ’ ಎಂದು ಛೀಮಾರಿ ಹಾಕಿದರು.

ಪೊಲೀಸರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡ ನ್ಯಾಯಮೂರ್ತಿ ಮೆಹ್ತಾ, ‘ಜನರನ್ನು ಕಂಬಕ್ಕೆ ಕಟ್ಟಿ, ಸಾರ್ವಜನಿಕವಾಗಿ ಥಳಿಸಿದ್ದು ಅಲ್ಲದೆ ಅದರ ವಿಡಿಯೊ ಮಾಡಿದ್ದೀರಿ. ಈ ರೀತಿಯ ದೌರ್ಜನ್ಯ ನಡೆಸಿ ಇದೀಗ ನೀವು ನ್ಯಾಯಾಲಯ ಮಧ್ಯಪ್ರವೇಶಿಸಬೇಕೆಂದು ಬಯಸುತ್ತೀರಿ’ ಎಂದು ಕೇಳಿದರು. ಪೊಲೀಸರ ಪರ ವಕೀಲ ಸಿದ್ದಾರ್ಥ್ ದವೆ ಅವರ ಮನವಿ ಆಲಿಸಿದ ಪೀಠ, ಮೇಲ್ಮನವಿಯ ವಿಚಾರಣೆಗೆ ಒಪ್ಪಿ ಕೊಂಡಿತು.

Key words: assult-muslim-Supreme Court – reprimanded – Gujarat -Police.

Font Awesome Icons

Leave a Reply

Your email address will not be published. Required fields are marked *