ಗ್ಯಾರಂಟಿ ಯೋಜನೆಗಳು ಜನರು ಸ್ವಾವಲಂಬಿ ಜೀವನ ನಡೆಸಲು ಸಹಕಾರಿ: ಸಚಿವ ಡಾ.ಹೆಚ್.ಸಿ.ಮಹದೇವಪ್ಪ – Just Kannada | Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್

ಮೈಸೂರು, ಆಗಸ್ಟ್ 05, 2023 (www.justkannada.in): ಎಲ್ಲಾ 5 ಗ್ಯಾರೆಂಟಿ ಯೋಜನೆಗಳಿಂದ ಪ್ರತಿ ಕುಟುಂಬಕ್ಕೆ ಮಾಸಿಕ ಸರಾಸರಿ 4 ಸಾವಿರ ಆದಾಯ ಬರುತ್ತದೆ. ಈ ಯೋಜನೆಗಳನ್ನು ಜನರು ಉಪಯೋಗಿಸಿಕೊಂಡು ಸ್ವಾವಲಂಬಿ ಜೀವನ ಸಾಗಿಸಲು ಗ್ಯಾರೆಂಟಿ ಯೋಜನೆಗಳು ಸಹಕಾರಿಯಾಗಿವೆ ಎಂದು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಸಮಾಜ ಕಲ್ಯಾಣ ಇಲಾಖೆಯ ಸಚಿವ ಡಾ. ಹೆಚ್ ಸಿ ಮಹದೇವಪ್ಪ ಅವರು ತಿಳಿಸಿದರು

ಇಂದು ಕಲಾ ಮಂದಿರದಲ್ಲಿ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತದ ವತಿಯಿಂದ ಹಮ್ಮಿಕೊಂಡಿದ್ದ ಗೃಹ ಜ್ಯೋತಿ ಯೋಜನೆಗೆ ಚಾಲನೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸರ್ಕಾರ ಬಂದು 3 ತಿಂಗಳಾಗುತ್ತಾ ಬಂದಿದೆ. ನಾವು ಅಧಿಕಾರಕ್ಕೆ ಬಂದರೆ 5 ಗ್ಯಾರೆಂಟಿ ಯೋಜನೆಗಳನ್ನು ನೀಡುವುದಾಗಿ ಘೋಷಿಸಿ ಪ್ರತಿ ಮನೆ ಮನೆಗೆ ಗ್ಯಾರೆಂಟಿ ಕಾರ್ಡ್ ನೀಡಲಾಗಿತ್ತು. ಮೊದಲ ಸಚಿವ ಸಂಪುಟ ಸಭೆಯಲ್ಲಿಯೇ ಕೊಟ್ಟ ಮಾತಿನಂತೆ ನಡೆದುಕೊಂಡು ಯೋಜನೆಗಳನ್ನು ಜಾರಿಗೆ ಮಾಡುತ್ತಾ ಇದ್ದೇವೆ. ಪ್ರತಿ ವರ್ಷ 5 ಗ್ಯಾರೆಂಟಿ ಯೋಜನೆಗಳಿಗೆ 52 ಸಾವಿರ ಕೋಟಿ ವಾರ್ಷಿಕ ವೆಚ್ಚವಾಗುತ್ತದೆ. ಶಕ್ತಿ ಯೋಜನೆಯಿಂದ ಮಹಿಳೆಯರು ಉಚಿತ ಪ್ರಯಾಣ ಮಾಡಿ ಧಾರ್ಮಿಕ ಹಾಗೂ ಪ್ರೇಕ್ಷಣೀಯ ಸ್ಥಳಗಳಿಗೆ ಭೇಟಿ ನೀಡುತ್ತಿದ್ದಾರೆ. ಇದರಿಂದ ಮಹಿಳಾ ಸಬಲೀಕರಣಕ್ಕೆ ಸಹಕಾರಿಯಾಗಿದೆ ಎಂದರು.

ಅನ್ನ ಭಾಗ್ಯ ಯೋಜನೆಯಡಿ 10 ಕೆ ಜಿ ಅಕ್ಕಿ ನೀಡುವ ಉದ್ದೇಶ ಇತ್ತು. ಆದರೆ ಅಕ್ಕಿಯ ಕೊರತೆ ಇರುವುದರಿಂದ ಈಗ 5 ಕೆ ಜಿ ಅಕ್ಕಿ ಹಾಗೂ 5 ಕೆ ಜಿ ಗೆ ಅಕ್ಕಿಗೆ ಹಣ ನೀಡಲಾಗುತ್ತಿದೆ. ಈಗ ಗೃಹ ಜ್ಯೋತಿ ಯೋಜನೆಗೆ ಚಾಲನೆ ನೀಡಲಾಗಿದೆ. 1.42 ಕೋಟಿ ಕುಟುಂಬಗಳಿಗೆ 200 ಯೂನಿಟ್ ವರೆಗೆ ಉಚಿತವಾಗಿ ನೀಡಲಾಗುತ್ತಿದೆ. ಒಂದು ವರ್ಷದ ಸರಾಸರಿ ಬಳಕೆಯ 10% ಹೆಚ್ಚಿನ  ವಿದ್ಯುತ್ ನ್ನು ಉಚಿತವಾಗಿ ನೀಡಲಾಗುತ್ತಿದೆ. ಇದು ಎಲ್ಲಾ ವರ್ಗದ ಜನರಿಗೆ ತಲುಪುವ ಯೋಜನೆಯಾಗಿದೆ. ಇದು ಜನರನ್ನು ಕತ್ತಲೆಯಿಂದ ಬೆಳಕಿನೆಡೆಗೆ ಕೊಂಡೊಯ್ಯುವ ಯೋಜನೆಯಾಗಿದೆ ಎಂದರು.

ಗೃಹಜ್ಯೋತಿ  ಯೋಜನೆಯಡಿ ರಾಜ್ಯದಲ್ಲಿನ ಪ್ರತಿ ಮನೆಗೆ ಪ್ರತಿ ತಿಂಗಳಿಗೆ ಗರಿಷ್ಠ 200 ಯೂನಿಟ್ ವರೆಗಿನ ಬಳಕೆಯ ಮಿತಿಯಲ್ಲಿ ಆರ್ಥಿಕ ವರ್ಷ 2022-23 ರ ಸರಾಸರಿ ಬಳಕೆಯ ಯೂನಿಟ್ ಗಳ ಮೇಲೆ ಶೇಕಡಾ 10% ರಷ್ಟು ಹೆಚ್ಚಿನ ಬಳಕೆಯ ಮಿತಿಯನ್ನು ಅನುಮತಿಸಿ ಅದಕ್ಕೆ ಅನುಗುಣವಾಗಿ ವಿದ್ಯುತ್ ಬಿಲ್ಲಿನ ಮೊತ್ತವನ್ನು ಉಚಿತವಾಗಿ ಒದಗಿಸಲಾಗುವುದು. 2022-23 ವಿದ್ಯುತ್ ಬಳಕೆಯ ವಾರ್ಷಿಕ ಸರಾಸರಿ ಲಭ್ಯವಿಲ್ಲದ ಗ್ರಾಹಕರಿಗೆ ರಾಜ್ಯದ ಸರಾಸರಿಯಾದ 53 ಯೂನಿಟ್ + 10% ಹೆಚ್ಚುವರಿಯಾಗಿ ಅಂದರೆ ಐದು ಯೂನಿಟ್ ಒಟ್ಟು 58 ಯೂನಿಟ್ ಮಿತಿಯನ್ನು ನಿಗದಿಪಡಿಸಲಾಗಿದೆ ಎಂದರು.

ಜಾರಿಯಲ್ಲಿರುವ ಅಮೃತ ಜ್ಯೋತಿ ಭಾಗ್ಯಜ್ಯೋತಿ ಮತ್ತು ಕುಟೀರ ಜ್ಯೋತಿ ಯೋಜನೆಗಳನ್ನು ಗೃಹಜ್ಯೋತಿ ಯೋಜನೆಯಲ್ಲಿ ವಿಲೀನಗೊಳಿಸಲಾಗಿದ್ದು ಭಾಗ್ಯಜ್ಯೋತಿ ಮತ್ತು ಕುಟೀರ  ಜ್ಯೋತಿ ಯೋಜನೆ ಅಡಿ ಈಗಾಗಲೇ 40 ಯೂನಿಟ್ ಗಳ ಉಚಿತ ವಿದ್ಯುತ್ತನ್ನು ನೀಡಲಾಗುತ್ತಿದ್ದು ಈ ಗ್ರಾಹಕರಿಗೆ ಗೃಹಜ್ಯೋತಿ ಯೋಜನೆ ಅಡಿ ಪ್ರತಿ ತಿಂಗಳಿಗೆ ರಾಜ್ಯದ ಸರಾಸರಿ ಬಳಕೆಯಾದ 53 ಯೂನಿಟ್ +10% ಹೆಚ್ಚುವರಿಯಾಗಿ ಐದು ಯೂನಿಟ್, ಒಟ್ಟು 58 ಯೂನಿಟ್ ಉಚಿತ ವಿದ್ಯುತ್ ನೀಡಲಾಗುವುದು ಎಂದರು.

ಮೈಸೂರು ಜಿಲ್ಲೆಯ ವ್ಯಾಪ್ತಿಯಲ್ಲಿ ಶೇಕಡಾ 79.73 ರಷ್ಟು ಪ್ರಗತಿ ಸಾಧಿಸಲಾಗಿದ್ದು ಬಾಕಿ ಇರುವ 198429 ಸಂಖ್ಯೆಯ ಗ್ರಾಹಕರಿಂದ ಅರ್ಜಿಗಳ ನೋಂದಣಿ ಪ್ರಕ್ರಿಯೆ ಜಾರಿಯಲ್ಲಿದ್ದು ಆಗಸ್ಟ್ 15 ರ ಒಳಗೆ ಶೇಕಡ 100 ರಷ್ಟು ಅರ್ಜಿ ನೋಂದಣಿ  ಮಾಡುವ ಗುರಿಯನ್ನು ಹೊಂದಲಾಗಿದೆ . ಈ ಉದ್ದೇಶಕ್ಕಾಗಿ ಗ್ರಾಹಕರು ಸೇವಾಸಿಂದು ಪೋರ್ಟಲ್ https://sevasindhugs.karnataka.gov.in/gsdn/    ಮುಖಾಂತರ ನೇರವಾಗಿ ನೋಂದಣಿ ಮಾಡಿಕೊಳ್ಳಬಹುದಾಗಿರುತ್ತದೆ ಇದಲ್ಲದೆ ಪ್ರತಿ ನಿಗಮದ ಶಾಖೆ, ಉಪ ವಿಭಾಗ, ವಿಭಾಗ, ವೃತ್ತ ಕಚೇರಿಗಳಲ್ಲಿ ಪ್ರತ್ಯೇಕ ಅರ್ಜಿ ನೊಂದಣಿ ಕೌಂಟರ್ ಗಳನ್ನು ತೆರೆಯಲಾಗಿರುತ್ತದೆ. ಅಲ್ಲದೆ ಗ್ರಾಮಒನ್ , ನಾಡಕಚೇರಿ, ಬಾಪೂಜಿ ಸೇವಾ ಕೇಂದ್ರಗಳಲ್ಲಿಯೂ ಅರ್ಜಿ ನೊಂದಾಯಿಸಬಹುದಾಗಿರುತ್ತದೆ ಎಂದರು.

ಪಶು ಸಂಗೋಪನಾ ಹಾಗೂ ರೇಷ್ಮೆ ಇಲಾಖೆಯ ಸಚಿವ ಕೆ ವೆಂಕಟೇಶ್  ಮಾತನಾಡಿ, ಗೃಹ ಜ್ಯೋತಿ ಯೋಜನೆ ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿದೆ. ಚುನಾವಣೆಗೆ ಮುಂಚೆ 5 ಗ್ಯಾರೆಂಟಿ ಯೋಜನೆಗಳನ್ನು ಘೋಷಿಸಿದ್ದೇವು. ಶಕ್ತಿ ಯೋಜನೆಯಡಿ ಇಲ್ಲಿಯವರೆಗೆ 68 ಕೋಟಿ ಮಹಿಳೆಯರು ಉಚಿತ ಬಸ್ ಪ್ರಯಾಣ ಮಾಡಿದ್ದಾರೆ. ಮೈಸೂರು ಜಿಲ್ಲೆಯಲ್ಲಿ ಗೃಹ ಜ್ಯೋತಿ ಯೋಜನೆಯಡಿ ಶೇ 79 ರಷ್ಟು ಜನ ನೋಂದಣಿ ಆಗಿದ್ದಾರೆ. ಅನ್ನ ಭಾಗ್ಯ ಯೋಜನೆಯಡಿ 5 ಕೆ ಜಿ ಅಕ್ಕಿ ಹಾಗೂ 5 ಕೆ ಜಿ ಗೆ ಹಣವನ್ನು ನೀಡಲಾಗುತ್ತಿದೆ. ಗೃಹ ಲಕ್ಷ್ಮಿ ಯೋಜನೆಯಡಿ ಮನೆ ಯಜಮಾನಿ ಗೆ 2000  ನೀಡುವ  ಯೋಜನೆ ನೊಂದಣಿ ಆಗುತ್ತಿದೆ. ಅರ್ಹರು ನೊಂದಣಿ ಮಾಡಿಕೊಳ್ಳಿ ಎಂದು ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಮೈಸೂರು ಮಹಾನಗರ ಪಾಲಿಕೆಯ ಮೇಯರ್ ಶಿವಕುಮಾರ್, ಶಾಸಕರಾದ ಡಿ ರವಿಶಂಕರ್, ವಿಧಾನ ಪರಿಷತ್ ಸದಸ್ಯರಾದ, ಹೆಚ್ ವಿಶ್ವನಾಥ್, ಮರಿತಿಬ್ಬೇಗೌಡ, ಡಿ ತಿಮ್ಮಯ್ಯ, ಸಿ ಎನ್ ಮಂಜೇಗೌಡ, ಉಪ ಮಹಾ ಪೌರರಾದ ಜಿ ರೂಪ, ಚೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀಧರ್  ಸೇರಿದಂತೆ ಮತ್ತಿತರರು ಉಪಸ್ಥತರಿದ್ದರು.

Font Awesome Icons

Leave a Reply

Your email address will not be published. Required fields are marked *