ಜನರಲ್ಲಿ ಆತಂಕ – News Karnataka Kannada (ನ್ಯೂಸ್ ಕರ್ನಾಟಕ ಕನ್ನಡ)

ಹನಗೋಡು:  ಹೋಬಳಿ ಕೇಂದ್ರವಾದ ಹನಗೋಡಿನಲ್ಲಿ ಮತ್ತೆ ಹುಲಿ ಹೆಜ್ಜೆ ಕಾಣಿಸಿಕೊಳ್ಳುತ್ತಿದ್ದು, ಹನಗೋಡು ಹಾಗೂ ಸುತ್ತ ಮುತ್ತಲ ಗ್ರಾಮಸ್ಥರು ಮತ್ತು ರೈತರು ಇದರಿಂದ ಭಯಭೀತರಾಗಿದ್ದಾರೆ.

ಹನಗೋಡಿನ ಲಕ್ಷ್ಮಣ ತೀರ್ಥ ನದಿಯ ಏರಿ ಕೆಳ ಪಾತ್ರದ ಸುಶೀಲಮ್ಮರಿಗೆ ಸೇರಿದ ತೋಟದ ಜಮೀನಿನಲ್ಲಿ ಕಳೆದ ಎರಡು  ದಿನಗಳಿಂದ ಹುಲಿ ಓಡಾಡಿರುವ ಹೆಜ್ಜೆ ಗುರುತು ಪತ್ತೆಯಾಗಿದೆ. ಕಳೆದ ಫೆ.23ರಂದು ಪಕ್ಕದ ತೋಟದ  ಎಚ್.ಆರ್.ರಮೇಶ್‌ಗೆ ಸೇರಿದ ತೋಟದಲ್ಲಿ ಹುಲಿ ಹೆಜ್ಜೆ ಗುರುತು ಪತ್ತೆಯಾಗಿತ್ತಲ್ಲದೆ, ಹುಲಿಯು ಕಾಡು ಹಂದಿಯೊಂದಿಗೆ ಕಾದಾಡಿ ಬೇಟೆ ಮಾಡಿರುವ ಕುರುಹು ಸ್ಥಳದಲ್ಲಿ ಕಂಡು ಬಂದಿತ್ತು. ಇದೀಗ ಮತ್ತೆ ಹೆಜ್ಜೆ ಕಾಣಿಸಿರುವುದು ಆತಂಕಕ್ಕೆ ಕಾರಣವಾಗಿದೆ.

ಲಕ್ಷ್ಮಣ ತೀರ್ಥ ನದಿಯ ಏರಿಯ ಸುಮಾರು ಒಂದು ಕಿ.ಮೀ.ಯಲ್ಲಿ ಸಾಕಷ್ಟು ಪೊದೆಗಳಿವೆ. ಅಲ್ಲದೆ ಸಾಕಷ್ಟು ಗಿಡ-ಗಂಟಿಗಳು ಬೆಳೆದಿದ್ದು, ಇದು ಹುಲಿ-ಚಿರತೆ, ಕಾಡು ಹಂದಿಗಳು ವಾಸಕ್ಕೆ ಪ್ರಶಸ್ತ ಸ್ಥಳವಾಗಿದೆ. ಈ ಅಣೆಕಟ್ಟೆಯ ಏರಿಯು ಹಾರಂಗಿ ಅಚ್ಚುಕಟ್ಟು ಪ್ರದೇಶಕ್ಕೆ ಸೇರಿದ್ದು, ಇದನ್ನು ತೆರವುಗೊಳಿಸುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಕಳೆದ ಎರಡು ವರ್ಷಗಳಿಂದ ಹನಗೋಡು, ಕಾಮಗೌಡನಹಳ್ಳಿ, ಬಿ.ಆರ್.ಕಾವಲ್, ಅಬ್ಬೂರು, ಸಿಂಡೇನಹಳ್ಳಿ,  ನೇಗತ್ತೂರು, ಶೆಟ್ಟಳ್ಳಿ, ದಾಸನಪುರ, ಹಿಂಡಗುಡ್ಲು, ಚಿಕ್ಕಹೆಜ್ಜೂರು, ಕಾಳಬೂಚನಹಳ್ಳಿ, ಕಚುವಿನಹಳ್ಳಿ, ಮುತ್ತುರಾಯನಹೊಸಳ್ಳಿ ಭಾಗದ ಸುಮಾರು 15ಕಿ.ಮೀ. ಸುತ್ತ ಮುತ್ತಲಲ್ಲಿ ಹುಲಿ ಆಗಾಗ್ಗೆ ಕಾಣಿಸಿಕೊಳ್ಳುತ್ತಿದೆ. ಅಲ್ಲದೆ ಹತ್ತಾರು ಜಾನುವಾರುಗಳನ್ನು ಬಲಿ ಪಡೆದಿದೆ. ಕಳೆದ ಆರು ತಿಂಗಳ ಹಿಂದೆ ಒಮ್ಮೆಲೆ ಎರಡು ಹಸುಗಳ ಮೇಲೆ ದಾಳಿ ನಡೆಸಿ ಕೊಂದು ಹಾಕಿತ್ತು.

ಈ  ಘಟನೆ ವೇಳೆ ಶೆಟ್ಟಳ್ಳಿ ಅರಣ್ಯ ಪ್ರದೇಶದಲ್ಲಿ ಸಾಕಾನೆಗಳ ಮೂಲಕ ಕೋಬಿಂಗ್ ನಡೆಸಿದ್ದರೂ ಹುಲಿ ಪತ್ತೆಯಾಲಿಲ್ಲ, ಆದರೆ ಆಗಾಗ್ಗೆ ಅಲ್ಲಲ್ಲಿ ಕಾಣಿಸಿಕೊಂಡು, ಜಾನುವಾರುಗಳನ್ನು ಬಲಿ ಪಡೆದು ತನ್ನ ಇರುವಿಕೆಯನ್ನು ಸಾಬೀತುಪಡಿಸುತ್ತಲೇ ಇದೆ. ಹೀಗಾಗಿ ಗ್ರಾಮಸ್ಥರು ಜಮೀನಿಗೆ ತೆರಳಲು ಹೆದರುವಂತಾಗಿದೆ. ಹೇಗಾದರೂ ಸರಿ ಯಾವುದೇ ಪ್ರಾಣ ಹಾನಿಗೂ ಮೊದಲೇ ಹುಲಿ ಸೆರೆ ಹಿಡಿಯುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಪ್ರಾದೇಶಿಕ ಅರಣ್ಯ ವಿಭಾಗದ ಡಿಸಿಎಫ್ ಸೀಮಾ, ವಲಯ ಅರಣ್ಯಾಕಾರಿ ನಂದಕುಮಾರ್‌ಹುಲಿ ಹೆಜ್ಜೆ  ಕಾಣಿಸಿಕೊಂಡಿರುವ ಸುತ್ತ ಕೂಂಬಿಂಗ್ ನಡೆಸುವುದು, ಕ್ಯಾಮರಾ ಅಳವಡಿಸಿ ಹುಲಿ ಪತ್ತೆಗೆ ಕ್ರಮವಹಿಸಲಾಗುವುದೆಂದು  ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಡಿ.ಆರ್.ಎಫ್.ಓ.ಗಳಾದ ಮಲ್ಲಿಕಾರ್ಜುನ್, ಚಂದ್ರೇಶ್ ಹಾಗೂ ಆನೆ ಕಾರ್ಯಪಡೆ ಸಿಬ್ಬಂದಿ ಹುಲಿ ಕಾಣಿಸಿಕೊಂಡಿರುವ ಸ್ಥಳದ ಸುತ್ತ ಮುತ್ತಾ ನದಿಯ ಏರಿಯ ಪೊದೆಗಳ ಬಳಿ ರಾತ್ರಿ ವೇಳೆ ಪಟಾಕಿ ಸಿಡಿಸಿದರು. ಸೈರನ್ ಮೊಳಗಿಸಿದ್ದಾರೆ.

Font Awesome Icons

Leave a Reply

Your email address will not be published. Required fields are marked *