ಜಿಲ್ಲೆಯ ಪ್ರತಿ ಕುಟುಂಬ ಪಂಚ ಯೋಜನೆಗಳ ಫಲಾನುಭವಿಯಾಗಬೇಕು: ಸಂತೋಷ್ ಲಾಡ್

ಧಾರವಾಡ: ರಾಜ್ಯ ಸರಕಾರದ ಐದು ಪ್ರಮುಖ ಯೋಜನೆಗಳು ರಾಷ್ಟ್ರದಲ್ಲಿ ಪಂಚ ಗ್ಯಾರಂಟಿ ಯೋಜನೆಗಳೆಂದು ಪ್ರಸಿದ್ದಿಯಾಗಿದ್ದು, ಪ್ರತಿ ಕುಟುಂಬವು ಪಂಚ ಯೋಜನೆಗಳ ಫಲಾನುಭವಿಗಳಾಗಬೇಕು. ಸರಕಾರದ ಪ್ರಮುಖ, ಜನಪ್ರಿಯ ಯೋಜನೆಗಳ ಕುರಿತು ಜಾಗೃತಿ ಮೂಡಿಸಲು ಜಿಲ್ಲೆಯಲ್ಲಿ ಯೋಜನಾ ಫಲಾನುಭವಿಗಳ ಸಮಾವೇಶಗಳನ್ನು ಸರಕಾರದ ನಿರ್ದೇಶನದ ಮೇರೆಗೆ ಆಯೋಜಿಸಲಾಗುತ್ತಿದೆ ಎಂದು ಕಾರ್ಮಿಕ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಅವರು ಹೇಳಿದರು.

ಅವರು ಇಂದು ಬೆಳಿಗ್ಗೆ ಧಾರವಾಡ ಸಕ್ರ್ಯೂಟ್ ಹೌಸ್‍ದಲ್ಲಿ ಯೋಜನಾ ಫಲಾನುಭವಿಗಳ ಸಮಾವೇಶದ ಪೂರ್ವಭಾವಿ ಸಿದ್ಧತೆಗಾಗಿ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆ ಜರುಗಿಸಿ, ಮಾತನಾಡಿದರು.

ಧಾರವಾಡ ನಗರದ ಕೆಸಿಡಿ ಮೈದಾನದಲ್ಲಿ ನಾಳೆ, ಫೆಬ್ರುವರಿ 5 ರಂದು ಸಂಜೆ 5 ಗಂಟೆಗೆ ರಾಜ್ಯ ಸರಕಾರದ ಮಹತ್ವಾಕಾಂಕ್ಷಿ ಪಂಚ ಯೋಜನೆಗಳು ಹಾಗೂ ರಾಜ್ಯ ಸರಕಾರದ ವಿವಿಧ ಯೋಜನೆಗಳ ಫಲಾನುಭವಿಗಳ ಸಮಾವೇಶವನ್ನು ಆಯೋಜಿಸಲಾಗಿದೆ. ಧಾರವಾಡ ಪಶ್ಚಿಮ, ಧಾರವಾಡ ಗ್ರಾಮೀಣ ಮತಕ್ಷೇತ್ರದ ಹಾಗೂ ಅಳ್ನಾವರ ತಾಲೂಕಿನ ಫಲಾನುಭವಿಗಳು ಈ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಅವರು ಹೇಳಿದರು.

ಫಲಾನುಭವಿಗಳ ಧಾರವಾಡ ಸಮಾವೇಶದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಎಂಟು ಸಾವಿರ, ಆಹಾರ ಮತ್ತು ನಾಗರಿಕ ಇಲಾಖೆಯ 10 ಸಾವಿರ, ಹೆಸ್ಕಾಂ ಪರವಾಗಿ 1,500, ಸಹಕಾರಿ ಮತ್ತು ಕೆಎಂಎಫ್ ಇಲಾಖೆಯ ಒಂದು ಸಾವಿರ ಮತ್ತು ಕಾರ್ಮಿಕ ಇಲಾಖೆಯ ಒಂದು ಸಾವಿರ ಜನ ಸೇರಿ ವಿವಿಧ ಇಲಾಖೆಗಳ ಅಂದಾಜು 21 ಸಾವಿರ ಫಲಾನುಭವಿಗಳು ಭಾಗವಹಿಸಲಿದ್ದಾರೆ ಎಂದು ಸಚಿವರು ತಿಳಿಸಿದರು.

ಸಮಾವೇಶಕ್ಕೆ ಫಲಾನುಭವಿಗಳು ಗ್ರಾಮೀಣ ಭಾಗದ 141 ವಿವಿಧ ಗ್ರಾಮಗಳ ಸ್ಥಳಗಳಿಂದ ಮತ್ತು ಧಾರವಾಡ ನಗರದ 82 ಸ್ಥಳಗಳಿಂದ ಆಗಮಿಸುತ್ತಿದ್ದು, ಅವರ ಬರುವಿಕೆಗೆ ಸಾರಿಗೆ ವ್ಯವಸ್ಥೆ ಮಾಡಲಾಗಿದೆ. ಇದಕ್ಕಾಗಿ ಸುಮಾರು 223 ಬಸ್‍ಗಳನ್ನು ನಿಯೋಜಿಸಲಾಗಿದ್ದು, ಅಂದಾಜು 303 ಟ್ರಿಪ್‍ಗಳಲ್ಲಿ ಫಲಾನುಭವಿಗಳು ಸಮಾವೇಶಕ್ಕೆ ಆಗಮಿಸಲಿದ್ದಾರೆ ಎಂದು ಸಚಿವರು ಹೇಳಿದರು.

ಕೆಸಿಡಿ ಮೈದಾನದಲ್ಲಿ ಸಮಾವೇಶಕ್ಕಾಗಿ ಬೃಹತ್ತ ವೇದಿಕೆ ಹಾಕಲಾಗುತ್ತಿದೆ. ಎಲ್ಲರಿಗೂ ಕುಳಿತುಕೊಳ್ಳಲು ಆಸನ, ಕುಡಿಯುವ ನೀರು, ಬಿಸ್ಕೆಟ್ ವ್ಯವಸ್ಥೆ ಮಾಡಲಾಗಿದೆ. ಮತ್ತು ಬೇರೆ ಬೇರೆ ಗ್ರಾಮ, ಸ್ಥಳಗಳಿಂದ ಆಗಮಿಸುವ ಫಲಾನುಭಿಗಳಿಗೆ ಲಘು ಊಟದ ವ್ಯವಸ್ಥೆ ಮಾಡಲಾಗಿದೆ ಎಂದು ಸಚಿವರು ತಿಳಿಸಿದರು.

ಸಮಾವೇಶಕ್ಕಾಗಿ ಆಗಮಿಸುವ ಬಸ್, ವಾಹನಗಳ ನಿಲುಗಡೆಗೆ ಕೆಸಿಡಿ ಮೈದಾನ ಸಮೀಪದ ವಿವಿಧ ಸ್ಥಳಗಳಲ್ಲಿ ಅವಕಾಶ ಮಾಡಲಾಗಿದೆ. ಸುಗಮ ಸಂಚಾರಕ್ಕೆ ಅಗತ್ಯ ಕ್ರಮಕೈಗೊಳ್ಳಲು ಅಧಿಕಾರಿಗಳಿಗೆ ಸಚಿವರು ಸೂಚಿಸಿದರು.

ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಮಾತನಾಡಿ, ಸರಕಾರಿ ಯೋಜನೆಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸಲು, ಸಾರ್ವಜನಿಕರಲ್ಲಿ ಯೋಜನೆಗಳ ಕುರಿತು ಅರಿವು ಮೂಡಿಸುವುದು ಮುಖ್ಯವಾಗಿದೆ. ಸರಕಾರದ ನಿರ್ದೇಶನದಂತೆ ಧಾರವಾಡ ಜಿಲ್ಲೆಯ ಪ್ರತಿ ತಾಲೂಕಿನಲ್ಲಿ ಯೋಜನಾ ಫಲಾನುಭವಿಗಳ ಸಮಾವೇಶ ಸಂಘಟಿಸಲಾಗುತ್ತಿದೆ. ಅಧಿಕಾರಿಗಳು ಮತ್ತು ಕ್ಷೇತ್ರಮಟ್ಟದ ಸಿಬ್ಬಂದಿಗಳು ಸಕ್ರಿಯವಾಗಿ ಈ ಕಾರ್ಯಕ್ರಮದಲ್ಲಿ ತೊಡಗಿಸಿಕೊಳ್ಳಬೇಕು. ವಿವಿಧ ಯೋಜನೆಗಳಿಗೆ ಅರ್ಹ ಫಲಾನುಭವಿಗಳನ್ನು ಗುರುತಿಸಲು ಇಂತಹ ಜಾಗೃತಿ ಕಾರ್ಯಕ್ರಮಗಳು ಸಹಾಯಕವಾಗುತ್ತವೆ ಎಂದರು.

ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಆಯೋಜಿಸಲು ಪ್ರತಿ ಹಂತದಲ್ಲಿ ವಿವಿಧ ಅಧಿಕಾರಿಗಳನ್ನು ನೊಡಲ್ ಅಧಿಕಾರಿಗಳನ್ನಾಗಿ ನೇಮಿಸಿ, ಅವರಿಗೆ ಕಾರ್ಯ ಹಂಚಿಕೆ ಮಾಡಲಾಗಿದೆ. ತಮಗೆ ವಹಿಸಿರುವ ಕಾರ್ಯಗಳನ್ನು ಲೋಪವಾಗದಂತೆ, ಜನಸ್ನೆಹಿಯಾಗಿ ನಿರ್ವಹಿಸಬೇಕೆಂದು ಜಿಲ್ಲಾಧಿಕಾರಿಗಳು ಹೇಳಿದರು.

ಪೊಲೀಸ್ ಇಲಾಖೆ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಜನರ, ವಾಹನಗಳ ಸುಗಮ ಸಂಚಾರ, ಮಹಿಳೆಯರ ಸುರಕ್ಷತೆಗೆ ಆದ್ಯತೆ ನೀಡಿ, ಕ್ರಮವಹಿಸಬೇಕು ಎಂದು ಜಿಲ್ಲಾಧಿಕಾರಿಗಳು ಸೂಚಿಸಿದರು.

ಖ್ಯಾತ ಗಾಯಕಿ ಕಲಾವತಿ ಅವರಿಂದ ಸಾಂಸ್ಕೃತಿಕ ಕಾರ್ಯಕ್ರಮ: ಫಲಾನುಭವಿಗಳ ಸಮಾವೇಶದಲ್ಲಿ ಜೀ ಕನ್ನಡ ವಾಹಿನಿ ಖ್ಯಾತಿಯ ಉಡುಪಿ ಗಾಯಕಿ ಕಲಾವತಿ ದಯಾನಂದ ಅವರು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸುಮಾರು 10 ಕಲಾತಂಡಗಳ ಕಲಾವಿದರು ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ನಡೆಸಿಕೊಡಲಿದ್ದಾರೆ. ಕಾರ್ಯಕ್ರಮದಲ್ಲಿ ವಿವಿಧ ಫಲಾನುಭವಿಗಳಿಗೆ ಸರ್ಕಾರದ ಸೌಲಭ್ಯಗಳನ್ನು ವಿತರಿಸಲಾಗುವುದು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ., ಉಪ ಪೊಲೀಸ್ ಆಯುಕ್ತ ರಾಜೀವ ಎಂ., ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಆಯುಕ್ತ ಡಾ. ಈಶ್ವರ ಉಳ್ಳಾಗಡ್ಡಿ, ಅಧೀಕ್ಷಕ ಅಭಿಯಂತರ ತಿಮ್ಮಪ್ಪ, ಉಪವಿಭಾಗಾಧಿಕಾರಿ ಶಾಲಂ ಹುಸೆನ್, ಸಹಾಯಕ ಪೊಲೀಸ್ ಆಯುಕ್ತ ಪ್ರಶಾಂತ ಸಿದ್ಧನಗೌಡರ, ವಿನೋದ ಮುಕ್ತೆದಾರ, ಎನ್.ಡಬ್ಲು.ಕೆ.ಎಸ್.ಆರ್.ಟಿ.ಸಿಯ ವಿಭಾಗಿಯ ನಿಯಂತ್ರಣಾಧಿಕಾರಿಗಳಾದ ಶಶಿಧರ ಚನ್ನಪ್ಪಗೌಡರ, ಎಸ್.ಆರ್.ರಾಮನಗೌಡರ, ಜಿಲ್ಲಾ ಆರೋಗ್ಯಾಧಿಕಾರಿ ಡಾ. ಪಾಟೀಲ ಶಶಿ, ಆಹಾರ ಇಲಾಖೆಯ ಜಂಟಿ ನಿರ್ದೇಶಕ ವಿನೋದಕುಮಾರ ಹೆಗ್ಗಳಗಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪ ನಿರ್ದೇಶಕಿ ಪದ್ಮಾವತಿ, ಹೆಸ್ಕಾಂ ಅಧಿಕಾರಿಗಳಾದ ಶರಣಮ್ಮ ಜಂಗಿನ, ಎಂ.ಎಂ. ನದಾಫ್, ಎಂ.ಟಿ.ದೊಡ್ಡಮನಿ, ತಹಶೀಲ್ದಾರರಾದ ದೊಡ್ಡಪ್ಪ ಹೂಗಾರ, ಬಸವರಾಜ ಬೆಣ್ಣಿಶಿರೂರ, ಕಾರ್ಮಿಕ ಇಲಾಖೆಯ ಅಧಿಕಾರಿಗಳಾದ ಲಲಿತಾ ಸಾತೇನಹಳ್ಳಿ, ಮಾರಿಕಾಂಬಾ ಸೇರಿದಂತೆ ಇತರರು ಇದ್ದರು.

ಜಿಲ್ಲಾಧಿಕಾರಿಗಳಿಂದ ಕಾರ್ಯಕ್ರಮ ಸ್ಥಳ ಪರಿಶೀಲನೆ: ನಾಳೆ ಫೆಬ್ರುವರಿ 5 ರಂದು ಸಂಜೆ 5 ಗಂಟೆಗೆ ಜರುಗಲಿರುವ ಫಲಾನುಭವಿಗಳ ಸಮಾವೇಶದ ಪೂರ್ವ ಸಿದ್ಧತೆಗಳನ್ನು ಕೆಸಿಡಿ ಮೈದಾನಕ್ಕೆ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಇಂದು ಮಧ್ಯಾಹ್ನ ಭೇಟಿ ನೀಡಿ, ಪರಿಶೀಲಿಸಿದರು.

ವೇದಿಕೆ ಸಿದ್ಧತೆ, ಫಲಾನುಭವಿಗಳು, ಗಣ್ಯರು, ಮಾಧ್ಯಮ ಪ್ರತಿನಿಧಿಗಳು ಕುಳಿತುಕೊಳ್ಳುವ ಗ್ಯಾಲರಿಗಳಿಗೆ ಭೇಟಿ ನೀಡಿ, ಅಧಿಕಾರಿಗಳಿಗೆ ಸೂಕ್ತ ಸಲಹೆ, ಸೂಚನೆ ನೀಡಿದರು. ಪೊಲೀಸ್ ಅಧಿಕಾರಿಗಳಿಗೆ ಸೂಕ್ತ ಭದ್ರತೆ ಕೈಗೊಳ್ಳುವಂತೆ ತಿಳಿಸಿದರು. ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ., ಮಹಾನಗರ ಪಾಲಿಕೆ ಆಯುಕ್ತ ಡಾ.ಈಶ್ವರ ಉಳ್ಳಾಗಡ್ಡಿ, ಎಸಿ. ಶಾಲಂ ಹುಸೇನ ಸೇರಿದಂತೆ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.

Font Awesome Icons

Leave a Reply

Your email address will not be published. Required fields are marked *