ಕಲಬುರಗಿ: ಜೀಪ್ ಹಾಗೂ ಲಾರಿ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ನಾಲ್ವರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಕಲಬುರಗಿ ಜಿಲ್ಲೆ ಅಫಜಲ್ಪುರ ತಾ|ಹೊರವಲಯದ ನೀರಾವರಿ ಕಚೇರಿ ಬಳಿ ತಡರಾತ್ರಿ ನಡೆದಿದೆ. ಕಲಬುರಗಿ ಕಡೆಯಿಂದ ಹೊರಟಿದ್ದ ಲಾರಿಗೆ ಜೀಪ್ ಡಿಕ್ಕಿಯಾಗಿ ಈ ದುರ್ಘಟನೆ ಸಂಭವಿಸಿದೆ.
ಸಂತೋಷ್ (40), ಶಂಕರ್ (55), ಸಿದ್ದಮ್ಮ (50), ಹುಚ್ಚಪ್ಪ (5) ಮೃತ ದುರ್ದೈವಿಗಳೆಂದು ತಿಳಿದು ಬಂದಿದೆ. ಮೃತರು ಅಫಜಲ್ಪುರ ತಾಲ್ಲೂಕಿನ ಮಾಡ್ಯಾಳ ಗ್ರಾಮದ ನಿವಾಸಿಗಳಾಗಿದ್ದಾರೆ. ಗಂಭೀರವಾಗಿ ಗಾಯಗೊಂಡಿರುವವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು, ಅಫಜಲ್ಪುರ ಕಡೆಯಿಂದ ಮಲ್ಲಾಬಾದ್ ಕಡೆ ಹೊರಟಿದ್ದ ಜೀಪ್ ಕಲಬುರಗಿ ಕಡೆ ತೆರಳುತ್ತಿದ್ದ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ದುರ್ಘಟನೆ ಸಂಭವಿಸಿದೆ. ಜೀಪ್ನಲ್ಲಿದ್ದ ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದು, ಓರ್ವ ಮಹಿಳೆ ಗಂಭೀರವಾಗಿ ಗಾಯಗೊಂಡಿದ್ದಾರೆ. ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.