ಡಾ.ಸಿ.ಎನ್.ಅಶ್ವತ್ಥನಾರಾಯಣ – News Karnataka Kannada (ನ್ಯೂಸ್ ಕರ್ನಾಟಕ ಕನ್ನಡ)

ಮೈಸೂರು: ಕಾಂಗ್ರೆಸ್ ಮುಳುಗುತ್ತಿರುವ ಹಡಗಾಗಿದ್ದು, ಬಿಜೆಪಿ  ನಾಯಕರು ಯಾರು ಕೂಡ ಕಾಂಗ್ರೆಸ್ ಸೇರ್ಪಡೆಗೆ ಮುಂದಾಗುವುದಿಲ್ಲ ಎಂದು ಮಾಜಿ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದರು.

ಮೈಸೂರಿನ ಹೆಬ್ಬಾಳದಲ್ಲಿರುವ ಲಕ್ಷ್ಮೀಕಾಂತ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು  ಟಿಕೆಟ್ ವಂಚಿತ ಸಂಸದರು, ಹಿರಿಯ ನಾಯಕರು ಬಹಿರಂಗ ಅಸಮಾಧಾನ ವ್ಯಕ್ತಪಡಿಸಿರುವುದರಿಂದ ಚುನಾವಣೆ ಮೇಲೆ ಪರಿಣಾಮ ಬೀರಲಿದೆ. ಅಭ್ಯರ್ಥಿಗಳನ್ನು ಘೋಷಿಸುವ ಮುನ್ನಾ ಟಿಕೆಟ್ ಆಕಾಂಕ್ಷಿಗಳನ್ನು ಪಕ್ಷ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕಿತ್ತು ಎಂಬುದನ್ನು ಒಪ್ಪಿಕೊಂಡರು.

ಟಿಕೆಟ್ ಆಕಾಂಕ್ಷಿತರ ಜತೆಗೆ ಮಾತುಕತೆ ನಡೆಸಿದ ಬಳಿಕ ಅಭರ್ಥಿಗಳ ಹೆಸರು ಪ್ರಕಟಿಸಬೇಕಿತ್ತು. ಇದೀಗ ಟಿಕೆಟ್  ವಂಚಿತ ಸಂಸದರು, ಹಿರಿಯ ನಾಯಕರು ಅಸಮಾಧಾನ ಹೊರಹಾಕುತ್ತಿದ್ದಾರೆ. ಇದರಿಂದ ಪಕ್ಷಕ್ಕೆ ಮುಜುಗರವಾಗಿದೆ. ಈ  ಬೆಳವಣಿಗೆ ಚುನಾವಣೆ ಮೇಲೂ ಪರಿಣಾಮ ಬೀರಲಿದೆ. ಆದರೆ, ಅಂತಿಮವಾಗಿ ಜನರು ನರೇಂದ್ರ ಮೋದಿ ನಾಯಕತ್ವ ಬೆಂಬಲಿಸುತ್ತಾರೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.

ಯದುವೀರ್ ಯಾವ ಮಹಾರಾಜ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿ, ಸಿದ್ದರಾಮಯ್ಯ ಇಂತಹ  ದುರಾಹಂಕಾರದ ಮಾತು ಬಿಡಬೇಕು. ಮೈಸೂರು ಮಹಾರಾಜರ ಕೊಡುಗೆ ಅನನ್ಯವಾದದ್ದು. ಮಹಾರಾಜರು ಮಾಡಿರುವ ಕೆಲಸದಲ್ಲಿ, ಎಳ್ಳಷ್ಟು ಕೆಲಸ ನಿಮ್ಮ ಕೈಯಲ್ಲಿ ಮಾಡಲಾಗಿದೆಯಾ. ಮೈಸೂರಿಗೆ ನಿಮ್ಮ ಕೊಡುಗೆಯಾದರೂ ಏನು. ರಾಜ ಮನೆತನದ ಬಗ್ಗೆ ಗೌರವ ಇಟ್ಟುಕೊಂಡು ಮಾತನಾಡಿ ಎಂದು ಕಿಡಿಕಾರಿದರು.

ಬಿಜೆಪಿ-ಜೆಡಿಎಸ್ ಮೈತ್ರಿಯಲ್ಲಿ ಯಾವುದೇ ಗೊಂದಲವಿಲ್ಲ. ಜೆಡಿಎಸ್‌ನವರು ಮೂರು ಸೀಟು ಕೇಳಿದ್ದರು. ಈ ಬಗ್ಗೆ ವರಿಷ್ಠರ  ಹಂತದಲ್ಲಿ ಎಲ್ಲವೂ ತೀರ್ಮಾನವಾಗಲಿದೆ. ನಾವು ಅದರ ಬಗ್ಗೆ ಮಾತನಾಡುವುದು ಸರಿಯಲ್ಲ ಎಂದು, ಎಚ್.ಡಿ.ದೇವೇಗೌಡ, ಕುಮಾರಸ್ವಾಮಿ ಸೇರಿದಂತೆ ಎಲ್ಲ ನಾಯಕರನ್ನೂ ರಾಜ್ಯಾದ್ಯಂತ ಪಕ್ಷದ ಪ್ರಚಾರಗಳಿಗೆ ಆಹ್ವಾನಿಸಲಾಗುವುದು. ಈಗಾಗಲೇ ಮೈಸೂರು ಅಭ್ಯರ್ಥಿ ಯದುವೀರ್ ಪ್ರಚಾರ ಪ್ರಾರಂಭ ಮಾಡಿದ್ದಾರೆ. ಶಾಸಕ ಜಿ.ಟಿ. ದೇವೇಗೌಡ ಅವರನ್ನು ಖುದ್ದಾಗಿ ಭೇಟಿಯಾಗಿ ಬೆಂಬಲ ಕೇಳಿದ್ದಾರೆ.

ಸಭೆ ನಡೆಸಿ ಒಟ್ಟಿಗೆ ಪ್ರಚಾರ ಶುರು ಮಾಡಲು ತೀರ್ಮಾನಿಸಲಾಗಿತ್ತು. ಈ ನಡುವೆ ಏನಾಗಿದೆಯೋ ನನಗೆ ಮಾಹಿತಿ ಇಲ್ಲ. ಮುಂದಿನ ದಿನಗಳಲ್ಲಿ ಜೆಡಿಎಸ್ ಮುಖಂಡರಾದ ಹರೀಶ್‌ಗೌಡ, ಮಹದೇವು ಸೇರಿದಂತೆ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಪ್ರಚಾರ ಮಾಡುತ್ತೇವೆ ಎಂದು ತಿಳಿಸಿದರು.

Font Awesome Icons

Leave a Reply

Your email address will not be published. Required fields are marked *