ಮೈಸೂರು : ಮತದಾನದ ದಿನ ರಜೆಯ ದಿನ ಅಲ್ಲ. ಅಂದು ಪ್ರವಾಸವನ್ನು ಕೈಗೊಳ್ಳದೆ ಜವಾಬ್ದಾರಿಯುತ ನಾಗರಿಕರಾಗಿ ಸಂವಿಧಾನಿಕ ಹಕ್ಕನ್ನು ಚಲಾಯಿಸುವಂತೆ ನಂಜನಗೂಡು ತಾಲ್ಲೂಕು ಸ್ವೀಪ್ ಸಮಿತಿಯಿಂದ ಸಾರ್ವಜನಿಕರಿಗೆ ಅರಿವು ಮೂಡಿಸಲಾಯಿತು.
ಚಾಮರಾಜನಗರ ಲೋಕಸಭಾ ಚುನಾವಣೆಯಲ್ಲಿ ಮತದಾನ ಪ್ರಮಾಣ ಹೆಚ್ಚಿಸುವ ನಿಟ್ಟಿನಲ್ಲಿ ತಾಲ್ಲೂಕು ಪಂಚಾಯಿತಿ ಸ್ವೀಪ್ ಸಮಿತಿ ವತಿಯಿಂದ ನಿತ್ಯ ವಿನೂತನ ರೀತಿಯಲ್ಲಿ ಮತದಾನ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದ್ದು, ಇಂದು ನಂಜನಗೂಡು ನಗರದ ರೈಲ್ವೆ ನಿಲ್ದಾಣ ಹಾಗೂ ಸಾರ್ವಜನಿಕ ಬಸ್ ನಿಲ್ದಾಣದಲ್ಲಿ ಏಪ್ರಿಲ್ 26 ರಂದು ಪ್ರವಾಸ ಕೈಗೊಳ್ಳದೆ ತಪ್ಪದೆ ಮತದಾನ ಮಾಡುವಂತೆ ಅರಿವು ಮೂಡಿಸಿದ್ದಾರೆ.
ಹೆಚ್ಚು ಜನಸಂದಣಿ ಇರುವ ಬಸ್ ನಿಲ್ದಾಣದಲ್ಲಿ ತಮ್ಮ ತಮ್ಮ ಹಳ್ಳಿಗೆ ತೆರಳಲು ಬಸ್ಸಿಗಾಗಿ ಕಾಯುತ್ತಿದ್ದ ಹಿರಿಯರು, ಕಾಲೇಜು ಯುವಕ- ಯುವತಿಯರು ಸೇರಿದಂತೆ ಎಲ್ಲಾ ಸಾರ್ವಜನಿಕರಿಗೆ ಸಮೃದ್ಧ ಮತ್ತು ಸದೃಢ ದೇಶ ಕಟ್ಟಲು ಪ್ರತಿಯೊಬ್ಬರ ಮತವು ಅತ್ಯಮೂಲ್ಯ ಎಂಬುದನ್ನು ಮನದಟ್ಟು ಮಾಡಲಾಯಿತು.
ಇನ್ನೊಂದೆಡೆ ರೈಲು ನಿಲ್ದಾಣದಲ್ಲಿ ಮತದಾನದ ಬಗ್ಗೆ ಅರಿವು ಮೂಡಿಸುವ ಜಾಗೃತ ಗೀತೆ, ಘೋಷವಾಕ್ಯಗಳನ್ನು ಕೇಳಿಸಿ, ಮತದಾನ ದಿನ ರಜೆ ಎಂದು ಭಾವಿಸದೆ ಮತ ಹಾಕುವ ಮೂಲಕ ಚುನಾವಣಾ ಹಬ್ಬವನ್ನು ಆಚರಿಸುವಂತೆ ಕರೆ ನೀಡಲಾಯಿತು.
ಈ ಸಂದರ್ಭದಲ್ಲಿ ತಾಲ್ಲೂಕು ಸ್ವೀಪ್ ಸಮಿತಿಯ ದಿನೇಶ್, ಬಸವರಾಜು, ರವಿ, ಕಾವ್ಯ ಸೇರಿದಂತೆ ಸಿಬ್ಬಂದಿಗಳು ಭಾಗವಹಿಸಿದ್ದರು.