ನಟ ದರ್ಶನ್‌ ಪ್ರಕರಣ; ಇಲ್ಲ…ಹಾಗಾಗಲಿಲ್ಲ..! » Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್


 

ಮೈಸೂರು, ಜೂ.12,2024: (www.justkannada.in news)

*. ಯಾವ ಸ್ಟಾರ್ ನಟನ ಸಂಸಾರ ಏನಾದರೇನು, ನನ್ನಪ್ಪ ನನ್ನವ್ವ , ನನ್ನ ಹೆಂಡತಿ, ಅವಳ ಹೊಟ್ಟೆಯಲ್ಲಿರೋ ಭೂಮಿಕಾಣದ ನನ್ನ ಕಂದ ನನಗೆ ಮುಖ್ಯ ಅಂತ ರೇಣುಕಾಸ್ವಾಮಿಗೆ ಅನಿಸಬಹುದಿತ್ತು…ಹಾಗಾಗಲಿಲ್ಲ.

* ಕೆಟ್ಟ ಮೆಸೇಜು ಬರುವುದು ಪವಿತ್ರಾಗೇ ಮೊದಲಾಗಿರಲಿಲ್ಲ. ಕೊನೆಯೂ ಅಲ್ಲ. ಹುಚ್ಚುಮನಸು ಅಂತ ಅವಳು ಇಗ್ನೋರ್ ಮಾಡಬಹುದಿತ್ತು…ಹಾಗಾಗಲಿಲ್ಲ.

*ಅವಳು ಯಾರತ್ರವೋ ಹೇಳಿಕೊಂಡಳು. ಅವನು ಸುಮ್ಮನಿರಬಹುದಿತ್ತು …ಹಾಗಾಗಲಿಲ್ಲ.

* ಸತ್ತವರನ್ನೆಲ್ಲಾ ಒಳ್ಳೆಯವರು ಅನ್ನಬೇಕಾಗಿಲ್ಲ. ಬಸುರಿ ಹೆಂಡತಿ ಇದ್ದವನು, ತನ್ನ ಮರ್ಮಾಂಗದ ಫೋಟೋ ತೆಗೆದು ಇನ್ನೊಬ್ಬಳಿಗೆ ಕಳಿಸುವವನು ಸಚ್ವಾರಿತ್ರನೇನಲ್ಲ. ಆದರೆ ಕೆಟ್ಟ ಮೆಸೇಜು ಮಾಡಿದವನನ್ನು ಕಂಡುಹಿಡಿಯಲು ಸೈಬರ್ ಪೋಲಿಸ್ ಇದ್ದರು. ಆ ಕೆಲಸ ಇವರೇ ಮಾಡಿದರು. ಸರಿ. ಹುಡುಕಿದ ಮೇಲೆ ನಾಕು ತದಕಿ ಬುದ್ದಿ ಹೇಳಿಸಲು ಪೋಲಿಸ್ ಸಹಾಯ ಕೇಳಬಹುದಾಗಿತ್ತು. ಗೃಹ ಇಲಾಖೆಯೇ ಜೊತೆಗಿರುತ್ತಿತ್ತು…ಹಾಗಾಗಲಿಲ್ಲ.

* ಆಕೆಯ ಹೆಸರು ಕೂಡ ಹೇಳದೇ ಯಾರೋ ಹೆಣ್ಮಗಳಿಗೆ ಈತ ಹೀಗೆ ಮಾಡ್ತಿದ್ದಾನೆ ಅಂತ ರೇಣುಕಾಸ್ವಾಮಿಯ ಕುರಿತು ದರ್ಶನ್ ಒಂದು ಮೆಸೇಜು ಬಿಟ್ಟಿದ್ದರೆ ಸಾಕಿತ್ತು. ಜನರೇ ಕಂಡಕಂಡಲ್ಲಿ ಉಗಿದುಬುದ್ದಿ ಹೇಳಬಹುದಾಗಿತ್ತು…ಹಾಗಾಗಲಿಲ್ಲ.

* ಕೊಲ್ಲುವ ಉದ್ದೇಶ ಇರಲಿಕ್ಕಿಲ್ಲ. ರಕ್ಕಸರಂತೆ ಚಚ್ಚಿ ಹಾಕಿದ ರಭಸಕ್ಕೆ , ರೇಣುಕಾಸ್ವಾಮಿಯ ಸಪೂರ ದೇಹದಿಂದ ಪ್ರಾಣ ಹಾರಿತ್ತು. ದೇಹವಿಲೇವಾರಿಗೆ ಯಾರಿಗೋ ದುಡ್ಡುಕೊಟ್ಟು ಜವಾಬ್ದಾರಿ ವಹಿಸಿದರು. ಅವರು ಕಾಲುವೆಗೆಸೆದರು. ಎಸೆದವರು ದೇಹ ಕಾಲುವೆನೀರೊಳಗೆ ಹೋಯ್ತಾ ಅಂತ ನೋಡಬಹುದಾಗಿತ್ತು…ಹಾಗಾಗಲಿಲ್ಲ.

* ಕಾಲುವೆಯ ದಡದಲ್ಲಿ ಬಿದ್ದ ದೇಹ…ಜೋರು ಮಳೆಯಲ್ಲೊ, ಗುಡ್ಡ ಕುಸಿದೋ ಕಾಣೆಯಾಗಬಹುದಾಗಿತ್ತು…ಹಾಗಾಗಲಿಲ್ಲ.

* ನಾಯಿಕಚ್ಚುತ್ತಿದ್ದ ದೇಹವನ್ನು ಯಾರೋ ನೋಡಿದರು. ಪೋಲಿಸ್ ಬಂದರು. ವಾಸನೆ ಹಿಡಿದರು. ನಾವೇ ಕೊಂದದ್ದೆಂದು ಯಾರೋ ಒಪ್ಪಿಯೂಕೊಂಡರು. ಅದನ್ನು ನಿಜವೆಂದು ಪೋಲಿಸ್ ನಂಬಬಹುದಾಗಿತ್ತು…ಹಾಗಾಗಲಿಲ್ಲ.

* ಒಬ್ಬೊಬ್ಬರನ್ನೆ ಬೆಂಡೆತ್ತಿ ಕೆದಕಿದಾಗ, ದರ್ಶನ್ ಹೆಸರು ಬಂದಾಗ ಪೋಲಿಸರು ತಾವೇ ಮಾತಾಡಿಕೊಂಡು ಕೇಸನ್ನು ಅಲ್ಲಿಗೆ ಮುಗಿಸಬಹುದಾಗಿತ್ತು…ಹಾಗಾಗಲಿಲ್ಲ.

* ಇದು ಅಂತಿಂತಾ ಕೇಸಲ್ಲ. ಸರ್ಕಾರದ ಗಮನಕ್ಕೆ ತರೋಣ ಅಂತ ಖಾಕಿಪಡೆ ಯೋಚಿಸಬಹುದಾಗಿತ್ತು. ಹಾಲೀ ಸರ್ಕಾರಕ್ಕೆ ಸ್ಯಾನೇ ಹತ್ರವಾಗಿದ್ದ ದರ್ಶನ್ ರಕ್ಷಣೆಗೆ ಮುಖ್ಯಮಂತ್ರಿಗಳಾದಿಯಾಗಿ ಎಲ್ಲರೂ ಸಹಾಯ ಮಾಡಬಹುದಾಗಿತ್ತು. ‘ಇದನ್ನ ಇಲ್ಲಿಗೇ ಕ್ಲೋಸ್ ಮಾಡಿ’ ಅನ್ನಬಹುದಾಗಿತ್ತು…ಹಾಗಾಗಲಿಲ್ಲ.

* ಒಂದು ಕೊಲೆ ಮಾಡಿ ದರ್ಶನ್ ಜಿಮ್ ಗೆ , ಪವಿತ್ರಾ ಪಾರ್ಲರಿಗೆ ಹೋಗುವ ಮನಸ್ಸು ಇರಬಾರದಾಗಿತ್ತು. ಪಶ್ಚಾತ್ತಾಪದಲ್ಲಿ ಅರೆದಿನವಾದರೂ ನೋಯಬಹುದಾಗಿತ್ತು…ಹಾಗಾಗಲಿಲ್ಲ

* ಒಬ್ಬ ಅತಿಸಾಮಾನ್ಯನಿಗೆ, ಬಡವನಿಗೆ, ಅತ್ಯಂತ ಪ್ರಭಾವಿ ವ್ಯಕ್ತಿಯ ವಿರುದ್ಧ ನ್ಯಾಯ ಸಿಗದೆಯೇ ಹೋಗಬಹುದಾಗಿತ್ತು. ವ್ಯವಸ್ಥೆಯ ಯಾವ ಹಂತದಲ್ಲಾದರೂ ಇದು ಮುಚ್ಚಿಹೋಗಬಹುದಾಗಿತ್ತು. ಹೀಗೊಂದು ಘಟನೆಯಾದದ್ದೇ ಹೊರಜಗತ್ತಿಗೆ ಗೊತ್ತಾಗದೇ ಹೋಗಬಹುದಾಗಿತ್ತು. ಕೊಲೆಮಾಡಿದವರಿಗೆ ಹಾರ, ಜೈಕಾರ, ಹಾಲಿನ ಅಭಿಷೇಕ ನಡೆಯಬಹುದಾಗಿತ್ತು…ಹಾಗಾಗಲಿಲ್ಲ

* ಯಾವ ಸ್ಟಾರ್ ಪಟ್ಟವನ್ನೂ ಲೆಕ್ಕಿಸದೇ, ಒಬ್ಬ ಅಸಹಾಯಕನಿಗೆ ಎಲ್ಲ ರೀತಿಯ ದರ್ಪದ ವಿರುದ್ಧ ನ್ಯಾಯ ಕೊಟ್ಟ ಪೋಲಿಸರಿಗೆ ದರ್ಶನ್ ಅಭಿಮಾನಿಗಳಾದಿಯಾಗಿ ಎಲ್ಲರೂ ‘ದೊಡ್ಡ ಸಲ್ಯೂಟ್’ ಅನ್ನಬಹುದಾಗಿತ್ತು…ಅಭಿಮಾನ ಹುಚ್ಚಿನಂತೆ ವರ್ತಿಸದೇ ಇರಬಹುದಾಗಿತ್ತು. ದುರದೃಷ್ಟವಶಾತ್… ಹಾಗಾಗಲಿಲ್ಲ.

*.ಬಳಸಿಕೊಳ್ಳುವವರ ಬದಲು, ವ್ಯಕ್ತಿತ್ವ ತಿದ್ದುವ ಮಾರ್ಗದರ್ಶಕರು ಮುಂಚಿಂದಲೂ ಸಿಗಬಹುದಾಗಿತ್ತು…ಹಾಗಾಗಲಿಲ್ಲ.

* ಜನರ ಕಣ್ಣಲ್ಲಿ ದೇವರೇ ಆಗಿಬಿಡುವ ಅವಕಾಶವನ್ನು ಬದುಕು ಕೊಟ್ಟಾಗ ಮುಟ್ಟಲಾಗದ ಎತ್ತರಕ್ಕೆ ಹೋಗಬಹುದಾಗಿತ್ತು. ತನ್ನ ದೌರ್ಬಲ್ಯಗಳನ್ನು ಮೀರಬಹುದಾಗಿತ್ತು…

– ಕುಸುಮ ಆಯರಹಳ್ಳಿ.

key words: Kannada actor, darshan, murder case, accused

Font Awesome Icons

Leave a Reply

Your email address will not be published. Required fields are marked *