ನಾಯಿ ಮಾಂಸಕ್ಕೆ ನಿಷೇಧ: ಸಂಸತ್ತಿನಲ್ಲಿ ವಿಧೇಯಕ ಪಾಸ್‌!

ಸಿಯೋಲ್‌: ದಕ್ಷಿಣ ಕೊರಿಯಾದ ರಾಷ್ಟ್ರೀಯ ಅಸೆಂಬ್ಲಿ ಅಥವಾ ಸಂಸತ್ತು ದೇಶದಲ್ಲಿ ನಾಯಿ ಮಾಂಸ ಸೇವೆನಯನ್ನು ನಿಷೇಧಿಸುವ ವಿಶೇಷ ಮಸೂದೆಯನ್ನು ಇಂದು ಅಂಗೀಕರಿಸಿದೆ.

ಇತ್ತೀಚಿನ ವರ್ಷಗಳಲ್ಲಿ ದಕ್ಷಿಣ ಕೊರಿಯಾದಲ್ಲಿ ನಾಯಿ ಮಾಂಸ ಸೇವನೆ ಮಾಡುವವರ ಸಂಖ್ಯೆಯಲ್ಲಿ ಸಾಕಷ್ಟು ಏರಿಕೆಯಾಗಿತ್ತು. ಇದರ ಬೆನ್ನಲ್ಲಿಯೇ ಈ ಅಭ್ಯಾಸವನ್ನು ಕೊನೆ ಮಾಡಲು ಸರ್ಕಾರವೇ ಹೊಸ ಮಸೂದೆಯೊಂದಿಗೆ ನಿರ್ಧಾರ ಮಾಡಿದೆ. ನಾಯಿಗಳ ಸಂತಾನೋತ್ಪತ್ತಿ, ಮಾಂಸಕ್ಕಾಗಿ ನಾಯಿಗಳನ್ನು ಕತ್ತರಿಸುವುದು ಮತ್ತು ಮಾರಾಟ ಮಾಡುವದನ್ನು ಈ ಮಸೂದೆಯು ನಿಷೇಧಿಸುತ್ತದೆ.

ಮಸೂದೆಯ ಪರವಾಗಿ ಸಂಸತ್ತಿನಲ್ಲಿ 208 ಮತಗಳು ಬಂದಿದ್ದು, ಇಬ್ಬರು ಗೈರಾಗಿರುವುದರೊಂದಿಗೆ ಈ ಮಸೂದೆ ಅಂಗೀಕಾರವಾಗಿದೆ ಎಂದು ಯೋನ್ಹಾಪ್ ನ್ಯೂಸ್ ಏಜೆನ್ಸಿ ವರದಿ ಮಾಡಿದೆ. ದೇಶದಲ್ಲಿ ಪ್ರಾಣಿಗಳ ಹಕ್ಕುಗಳ ಜಾಗೃತಿ ಮತ್ತು ಸಾಕುಪ್ರಾಣಿಗಳ ಮಾಲೀಕರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಆಡಳಿತಾರೂಢ ಪೀಪಲ್ ಪವರ್ ಪಾರ್ಟಿ (ಪಿಪಿಪಿ) ಮತ್ತು ಪ್ರಮುಖ ವಿರೋಧ ಪಕ್ಷ ಡೆಮಾಕ್ರಟಿಕ್ ಪಾರ್ಟಿ (ಡಿಪಿ) ಜಂಟಿಯಾಗಿ ನಿಷೇಧಕ್ಕೆ ಒತ್ತಾಯ ಮಾಡಿದ್ದವು.

ನಾಯಿ ಮಾಂಸ ಉದ್ಯಮದಲ್ಲಿಯೇ ಈವರೆಗೂ ಬದುಕು ಕಂಡುಕೊಂಡಿದ್ದ ಜನರಿಗೆ ಉದ್ಯೋಗಗಳನ್ನು ಬದಲಾಯಿಸಲು ಸಹಾಯ ಮಾಡಲು ಕೇಂದ್ರದಿಂದ ಸಬ್ಸಿಡಿಗಳನ್ನು ನೀಡಲಾಗುತ್ತದೆ ಎಂದೂ ಮಸೂದೆಯಲ್ಲಿ ತಿಳಿಸಲಾಗಿದೆ. ದೇಶದ ಪ್ರಥಮ ಮಹಿಳೆ ಕಿಮ್ ಕಿಯೋನ್ ಹೀ ಕೂಡ ನಿಷೇಧಕ್ಕೆ ಬೆಂಬಲವನ್ನು ಬಹಿರಂಗವಾಗಿ ವ್ಯಕ್ತಪಡಿಸಿದ್ದಾರೆ.

Font Awesome Icons

Leave a Reply

Your email address will not be published. Required fields are marked *