ಮುಂಬೈ: ಅನಿಮಲ್ ಚಿತ್ರ ಭರ್ಜರಿ ಕಲೆಕ್ಷನ್ ಮಾಡುತ್ತಿದೆ. ಸಾವಿರ ಕೋಟಿ ರೂ. ಗಳಿಸುವ ನಿರೀಕ್ಷೆಯಿದೆ. ಅನಿಮಲ್ ಚಿತ್ರವನ್ನು ಹಲವಾರು ಮಂದಿ ಹಾಡಿ ಹೊಗಳಿದರೆ ಅತ್ತ ಟೀಂ ಇಂಡಿಯಾದ ಆಟಗಾರನೊಬ್ಬ ಸಿನಿಮಾವನ್ನು ದೂಷಿಸುವ ಮೂಲಕ ಸುದ್ದಿಯಾಗಿದ್ದು, ವ್ಯಾಪಕ ಟೀಕೆಗೆ ಗುರಿಯಾಗಿದ್ದಾರೆ.
ಟೀಂ ಇಂಡಿಯಾದ ಆಟಗಾರ ಜಯದೇವ್ ಉನದ್ಕತ್ ಅನಿಮಲ್ ಚಿತ್ರವನ್ನು ಅವಮಾನಕರ ಸಿನಿಮಾ ಎಂದು ಹೇಳಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಅವರು, ಕರುಣಾಜನಕವಾಗಿ ಈ ಸಿನಿಮಾವನ್ನು ನಿರ್ಮಿಸಲಾಗಿದೆ. ಸಿನಿಮಾ ನೋಡಿ, 3 ಗಂಟೆಗಳ ಕಾಲ ವ್ಯರ್ಥ ಮಾಡಲಾಯಿತು. ಡಿಸಾಸ್ಟರ್ ಮತ್ತು ಅವಮಾನಕರ ಎಂದಿರುವ ಅವರು, ಲಕ್ಷಾಂತರ ಜನ ವೀಕ್ಷಿಸುವ ಸಿನಿಮಾದಲ್ಲಿ ಇಂತಹ ಕೃತ್ಯಗಳನ್ನು ವೈಭವೀಕರಿಸಿ ತೋರಿಸಬಾರದು. ಮನರಂಜನಾ ಉದ್ಯಮದಲ್ಲಿಯೂ ಸಾಮಾಜಿಕ ಜವಾಬ್ದಾರಿ ಎಂಬ ವಿಷಯವಿದೆ. ಅದನ್ನು ಎಂದಿಗೂ ಮರೆಯಬಾರದು ಎಂದಿದ್ದಾರೆ.
ಅಷ್ಟೆ ಅಲ್ಲ, ನಾವು ಕಾಡಿನಲ್ಲಿ, ಅರಮನೆಗಳಲ್ಲಿ ವಾಸಿಸುತ್ತಿಲ್ಲ. ಯುದ್ಧಗಳನ್ನು ಮಾಡುತ್ತಿಲ್ಲ ಅಥವಾ ಬೇಟೆಯಾಡಲು ಹೋಗುತ್ತಿಲ್ಲ. ನಟನೆ ಎಷ್ಟು ಚೆನ್ನಾಗಿತ್ತು ಎಂಬುದು ಮುಖ್ಯವಲ್ಲ ಎಂದು ಬರೆದುಕೊಂಡಿದ್ದಾರೆ. ಆದರೆ ತೀವ್ರ ವಿರೋಧ ವ್ಯಕ್ತವಾದ ಬೆನ್ನಲ್ಲೇ ಟ್ವೀಟ್ ಅನ್ನು ಅಳಿಸಿದ್ದಾರೆ.