ನಿಸರ್ಗ ಪ್ರಿಯರಿಗೆ ರಸದೂಟ ನೀಡುವ ಬಿಸಿಲೆಘಾಟ್

ಮಡಿಕೇರಿ: ಕೊಡಗು, ದಕ್ಷಿಣಕನ್ನಡ ಹಾಗೂ ಹಾಸನ ಜಿಲ್ಲೆಗಳಿಗೆ ಹೊಂದಿಕೊಂಡಂತಿರುವ ಸುಬ್ರಹ್ಮಣ್ಯ ಸಮೀಪವಿರುವ ನಿಸರ್ಗ ನಿರ್ಮಿತ ಸುಂದರ ತಾಣವೇ ಬಿಸಿಲೆಘಾಟ್. ಇದು ಪಶ್ಚಿಮ ಘಟ್ಟದ ಸುಂದರ ಪ್ರಾಕೃತಿಕ ಸುಂದರ ತಾಣ ಎಂದರೆ ತಪ್ಪಾಗಲಾರದು. ಇಲ್ಲಿ ಬಂದು ನೋಡಿದರಷ್ಟೇ ಇಲ್ಲಿನ ಚೆಲುವು ತಿಳಿಯಲು ಸಾಧ‍್ಯ.

ಸಾಮಾನ್ಯವಾಗಿ ಸುಬ್ರಹ್ಮಣ್ಯಕ್ಕೆ ಸಕಲೇಶಪುರದಿಂದ ತೆರಳುವವರು ಮಾರ್ಗ ಮಧ್ಯೆ ಸುಬ್ರಹ್ಮಣ್ಯ ಸಮೀಪದಲ್ಲಿರುವ ಬಿಸಿಲೆಘಾಟ್ ಪ್ರವಾಸಿಗರನ್ನು ಸೆಳೆಯುವ ಪ್ರವಾಸಿ ತಾಣವಾಗಿದ್ದು, ಸುಬ್ರಹ್ಮಣ್ಯಕ್ಕೆ ಹೋದವರು ಇಲ್ಲಿಗೆ ತೆರಳಿದರೆ ನಿಸರ್ಗದ ಸುಂದರ ಕ್ಷಣಗಳನ್ನು ಸವಿಯಲು ಸಾಧ್ಯವಾಗುತ್ತದೆ. ಮುಖ್ಯರಸ್ತೆಯಿಂದಲೇ ಪ್ರವೇಶದ್ವಾರವಿದ್ದು, ಅದರ ಮೂಲಕ ಮುನ್ನಡೆಯುತ್ತಾ ಹೋದರೆ ನಿಸರ್ಗ ಸುಂದರತೆ ನಮ್ಮ ಕಣ್ಣಿಗೆ ರಾಚುತ್ತಾ ಹೋಗುತ್ತದೆ.

ಸದಾ ಪಟ್ಟಣದ ಗೌಜು ಗದ್ದಲ, ಕೆಲಸ ಕಾರ್ಯಗಳ ಒತ್ತಡದಲ್ಲಿ ಕಳೆದು ಹೋದವರು ಪ್ರಕೃತಿ ನಡುವೆ ಒಂದಷ್ಟು ಸಮಯ ಕಳೆದು ಮೈಮನವನ್ನು ಉಲ್ಲಾಸಗೊಳಿಸಲು ಇಚ್ಚಿಸುತ್ತಿದ್ದರೆ ಅಂತಹವರು ಇಲ್ಲಿಗೆ ಬಂದು ಒಂದಷ್ಟು ಹೊತ್ತು ನಿಸರ್ಗದ ಒಡನಾಟದಲ್ಲಿದ್ದು ಹೋದರೆ ಮಾನಸಿಕ ಒತ್ತಡವೆಲ್ಲ ಕಡಿಮೆಯಾಗಿ ಮನಸ್ಸು ಹಗುರವಾಗುತ್ತದೆ.

ಇಷ್ಟಕ್ಕೂ ಬಿಸಿಲೆಘಾಟ್ ಗೆ ಹೋಗುವುದು ಹೇಗೆ ಮತ್ತು ಎಷ್ಟು ದೂರದಲ್ಲಿ ಈ ತಾಣವಿದೆ ಎಂಬ ಪ್ರಶ್ನೆಗಳು ದೂರದ ಪ್ರವಾಸಿಗರನ್ನು ಕಾಡುವುದು ಸಹಜ. ಹಾಗಾಗಿ  ಹಾಸನಕ್ಕೆ ತೆರಳುವ ಪ್ರವಾಸಿಗರು ಸಕಲೇಶಪುರಕ್ಕೆ  ತೆರಳಿದರೆ  ಅಲ್ಲಿಂದ 50 ಕಿ.ಮೀ. ದೂರದಲ್ಲೂ, ದಕ್ಷಿಣಕನ್ನಡದ ಕುಕ್ಕೆ ಸುಬ್ರಹ್ಮಣ್ಯಕ್ಕೆ ಹೋದವರು ಅಲ್ಲಿಂದ ಸುಮಾರು 20 ಕಿ.ಮೀ. ಕೊಡಗಿನ ಸೋಮವಾರಪೇಟೆಗೆ ತೆರಳಿ  ಅಲ್ಲಿಂದ 40ಕಿ.ಮೀ. ದೂರದಲ್ಲಿ ಬಿಸಿಲೆಘಾಟ್ ಇದೆ.

ಇನ್ನು ಬಿಸಿಲೆಘಾಟ್‍ ಗೆ ತೆರಳಿ ಕಾನನದ ನಡುವಿನ ರಸ್ತೆಯಲ್ಲಿ ಹೆಜ್ಜೆ ಹಾಕುತ್ತಾ ಹೋದರೆ ನಿಸರ್ಗದ ಸುಂದರ ನೋಟ ಎದುರಾಗುತ್ತದೆ. ಪ್ರಶಾಂತ ವಾತಾವರಣದಲ್ಲಿ ನಿಶ್ವಬ್ದತೆಯನ್ನು ಸೀಳುವ ಗಾಳಿಯ ಭೋರ್ಗರೆತ, ಹಕ್ಕಿಗಳ ಚಿಲಿಪಿಲಿ ಅದರಾಚೆಗೆ ಮುಗಿಲಿಗೆ ಮುತ್ತಿಡುವತ್ತಾ ಪರ್ವತ ಶ್ರೇಣಿಗಳು.. ಕೆಳಗೆ ಕಣ್ಣು ಹಾಯಿಸಿದರೆ ಹಸಿರಿನ ಕಂದಕ ಒಮ್ಮೆ ಎದೆ ಝಲ್ಲೆನ್ನುತ್ತದೆ. ಗಿರಿಕಂದಕಗಳಲ್ಲಿ ಒತ್ತೊತ್ತಾಗಿ ಬೆಳೆದು ವೃಕ್ಷಸಮೂಹದೊಂದಿಗೆ ಪ್ರಪಾತದಾಚೆಗೆ  ಕರಿಬಂಡೆಗಳ ಮೇಲೆ ಹಾಲ್ನೊರೆಯುಕ್ಕಿಸಿ ಹರಿಯುವ ನದಿ ಮತ್ತು  ಬೀಸಿ ಬರುವ ಕುಳಿರ್‌ ಗಾಳಿ ನಮ್ಮನ್ನು ಮರೆಸಿ ನಿಸರ್ಗದೊಳಗೆ ಲೀನವಾಗಿಸಿ ಬಿಡುತ್ತದೆ.

ಬಿಸಿಲೆಘಾಟ್ ನಲ್ಲಿ ಕೊಡಗು, ಹಾಸನ ಮತ್ತು ದಕ್ಷಿಣ ಕನ್ನಡದ ನಿಸರ್ಗದ ನೋಟವೂ ಲಭ್ಯವಾಗುತ್ತದೆ.  ಅರಣ್ಯ ಇಲಾಖೆಯ ಅಧೀನದಲ್ಲಿ ಈ ತಾಣವಿದ್ದು, ಪ್ರವಾಸಿಗರಿಗೆ ಪ್ರಕೃತಿಯ ಚೆಲುವನ್ನು ವೀಕ್ಷಿಸಲೆಂದೇ ಎರಡಂತಸ್ತಿನ ವೀಕ್ಷಣಾ ಗೋಪುರವನ್ನು ನಿರ್ಮಿಸಲಾಗಿದೆ. ಇಲ್ಲಿಂದ ನಿಂತು ನೋಡಿದರೆ ನಿಸರ್ಗದ ಚೆಲುವು ನಮ್ಮೆಲ್ಲಾ ಜಂಜಾಟವನ್ನು ಮರೆಸಿ ಮನದಲ್ಲಿ ನೆಮ್ಮದಿ ನೆಲೆಸುವಂತೆ ಮಾಡಿಬಿಡುತ್ತದೆ.

ಹಾಸನ ಜಿಲ್ಲೆಗೆ ಸೇರಿದ 1112 ಮೀ. ಎತ್ತರದ ಪಟ್ಟಬೆಟ್ಟ, 900 ಮೀ. ಎತ್ತರದ ಇನ್ನಿಕಲ್ಲು ಬೆಟ್ಟ, ದಕ್ಷಿಣಕನ್ನಡ ಜಿಲ್ಲೆಗೆ  ಸೇರಿದ 1319 ಮೀ. ಎತ್ತರದ ಕುಮಾರ ಪರ್ವತ, ಕೊಡಗಿಗೆ ಸೇರಿದ 1119 ಮೀ. ಎತ್ತರದ ದೊಡ್ಡಬೆಟ್ಟ ಹಾಗೂ 1712 ಮೀ. ಎತ್ತರದ ಪುಷ್ಪಗಿರಿ ಪರ್ವತಗಳು ಬಿಸಿಲೆಘಾಟ್ ಸೌಂದರ್ಯತೆಯನ್ನು ಹೆಚ್ಚಿಸಿವೆ.

ಬಿಸಿಲೆಘಾಟ್  ಗೆ ನಿಗದಿತ ಸಮಯಗಳಲ್ಲಿ ಮಾತ್ರ ಪ್ರವೇಶಾವಕಾಶವಿದ್ದು, ರಾತ್ರಿ ವೇಳೆಯಲ್ಲಿ ಈ ಮಾರ್ಗಗಳಲ್ಲಿ ಸಂಚರಿಸುವುದು ಅಪಾಯ. ಇಲ್ಲಿಗೆ ಸಮೀಪದ ಗ್ರಾಮಗಳ ಮನೆಗಳಲ್ಲಿ ಪ್ರವಾಸಿಗರಿಗೆ ಊಟದ  ವ್ಯವಸ್ಥೆಗಳಿವೆಯಾದರೂ ಆಹಾರ ಪದಾರ್ಥ ಸೇರಿದಂತೆ ಅಗತ್ಯ ವಸ್ತುಗಳನ್ನು ಜೊತೆಯಲ್ಲಿ ಕೊಂಡೊಯ್ಯುವುದು ಒಳ್ಳೆಯದು.

Font Awesome Icons

Leave a Reply

Your email address will not be published. Required fields are marked *