ಬೆಂಗಳೂರು: ನಟ ವಿಜಯ್ ರಾಘವೇಂದ್ರನ ಪತ್ನಿ ಸ್ಪಂದನಾ ಮುತ್ತೈದೆಯಾಗಿ ಇಹಲೋಕ ತ್ಯಜಿಸಿದ್ದಾರೆ. ಆದರೆ, ಈಡಿಗ ಸಮುದಾಯದ ಸಂಪ್ರದಾಯದಂತೆ ಕೊನೆಯದಾಗಿ ಸ್ಪಂದನಾ ಪತಿ ವಿಜಯ್ ರಾಘವೇಂದ್ರ ತಾಳಿಯನ್ನು ಕಟ್ಟಿ ಮುತ್ತೈದೆ ಭಾಗ್ಯವನ್ನು ನೀಡಿ ಅಂತ್ಯಕ್ರಿಯೆಯ ವಿಧಿವಿಧಾನ ನೆರವೇರಿಸಿದರು.
ಈ ವೇಳೆ ಸಾವಿರಾರು ಜನರು ಸೇರಿದ್ದರು. ಸ್ನೇಹಿತರ ಜೊತೆಗೆ ಬ್ಯಾಂಕಾಕ್ ಪ್ರವಾಸಕ್ಕೆ ಹೋಗಿದ್ದ ವೇಳೆ ಸ್ಪಂದನಾ ಅವರಿಗೆ ಹೃದಯಾಘಾತ ಆಗಿತ್ತು. ಶಾಪಿಂಗ್ ಮುಗಿಸಿ ವಿಶ್ರಾಂತಿ ಪಡೆಯುವ ಸಲುವಾಗಿ ಮಲಗಿದ್ದವರು ಮತ್ತೆ ಏಳಲೇ ಇಲ್ಲ. ಬೇರೆ ದೇಶದಲ್ಲಿ ಸಾವಾಗಿದ್ದು ಕಾನೂನು ಪ್ರಕ್ರಿಯೆ ಮುಗಿಸಿದ ಬಳಿಕ ಭಾರತಕ್ಕೆ ಮೃತದೇಹ ತರಬೇಕಿತ್ತು. ಹೀಗಾಗಿ ಇಂದು ಸ್ಪಂದನಾರ ಅಂತ್ಯಕ್ರಿಯೆ ಮಾಡಲಾಗಿದೆ. ನಟ ವಿಜಯ್ ರಾಘವೇಂದ್ರ ಹಾಗೂ ಅವರ ಪುತ್ರ ಶೌರ್ಯ ವಿಧಿ ವಿಧಾನಗಳನ್ನು ನೆರವೇರಿಸಿದ್ದಾರೆ.
ಸ್ಪಂದನಾ ಮೃತ ದೇಹಕ್ಕೆ ಮದುವೆಯಲ್ಲಿ ಉಟ್ಟಿದ್ದ ಸೀರೆಯನ್ನು ಉಡಿಸಲಾಗಿತ್ತು. ಸ್ಪಂದನಾ ಮೃತದೇಹಕ್ಕೆ ಸಂಪ್ರದಾಯಬದ್ಧವಾಗಿ ವಿಧಿ ವಿಧಾನಗಳನ್ನು ಮಾಡಿದ ನಂತರದಲ್ಲಿ, ವಿಶೇಷವಾಗಿ ತಯಾರಾದ ವಾಹನದಲ್ಲಿ ಪಾರ್ಥಿವ ಶರೀರವನ್ನು ಹರಿಶ್ಚಂದ್ರ ಘಾಟ್‌ಗೆ ತೆಗೆದುಕೊಂಡು ಹೋಗಲಾಗಿತ್ತು.
ಸ್ಪಂದನಾಗೆ ಕುಟುಂಬಸ್ಥರು ಅಂತಿಮ ವಿದಾಯ ಹೇಳಿದ್ದಾರೆ. ಬೆಂಗಳೂರಿನ ಹರಿಶ್ಚಂದ್ರ ಘಾಟ್ ನಲ್ಲಿ ಈಡಿಗ ಸಂಪ್ರದಾಯದಂತೆ ಸ್ಪಂದನಾ ಅಂತ್ಯಕ್ರಿಯೆ ನೆರವೇರಿದೆ.