ಪತ್ನಿಯ ಶೀಲ ಶಂಕಿಸಿ 12 ವರ್ಷದಿಂದ ಗೃಹಬಂಧನದಲ್ಲಿರಿಸಿದ್ದ ಪತಿ

ಹೆಚ್.ಡಿ.ಕೋಟೆ: ಪತ್ನಿ ಶೀಲ ಶಂಕಿಸಿ 12 ವರ್ಷದಿಂದ ಮನೆ ಬಾಗಿಲಿಗೆ ಮೂರು ಬೀಗ ಜಡಿದು ಪತ್ನಿಯನ್ನ ದಿಗ್ಬಂದನಲ್ಲಿರಿಸಿದ ಪತಿರಾಯನ ಅಮಾನವೀಯ ಪ್ರಕರಣವೊಂದು ಹೆಚ್.ಡಿ.ಕೋಟೆಯಲ್ಲಿ ಬೆಳಕಿಗೆ ಬಂದಿದೆ.

ಮನೆಯಿಂದ ಹೊರಬರಲಾಗದೆ ಮನೆಯೊಳಗೇ ಅಜ್ಞಾತವಾಸ ಅನುಭವಿಸಿದ ಪತ್ನಿಯನ್ನ ರಕ್ಷಿಸಲಾಗಿದೆ.
ಹೆಚ್.ಡಿ.ಕೋಟೆ ತಾಲ್ಲೂಕಿನ ಎಚ್.ಮಟಕೆರೆ ಗ್ರಾಮದಲ್ಲಿ ಪ್ರಕರಣ ಬೆಳಕಿಗೆ ಬಂದಿದೆ.

ಸಣ್ಣಾಲಯ್ಯ ಎಂಬಾತ ತನ್ನ ಪತ್ನಿ ಸುಮಾಳನ್ನ ಗೃಹಬಂಧನದಲ್ಲಿರಿಸಿದ್ದ ಕಟುಕ. ತಾಲ್ಲೂಕಿನ ಹೈರಿಗೆ ಗ್ರಾಮದ ಸುಮಾ 12ವರ್ಷದ ಹಿಂದೆ ವಿವಾಹವಾಗಿದ್ದರು. 3ನೇ ಪತ್ನಿಯಾಗಿ ವಿವಾಹವಾದ ಸುಮಾಗೆ ಇಬ್ಬರು ಮಕ್ಕಳಿದ್ದಾರೆ. ಇಬ್ಬರು ಪತ್ನಿಯರು ಸಣ್ಣಾಲಯ್ಯನ ಕಾಟದಿಂದ ಬೇಸತ್ತು ದೂರಾಗಿದ್ದಾರೆ. ಮದುವೆ ಆದ ದಿನದಿಂದಲೂ ಮನೆ ಬಾಗಿಲಿಗೆ ಮೂರು ಬೀಗ ಹಾಕಿ ಬಂಧನದಲ್ಲಿರಿಸಿದ್ದ.

ಮನೆಯ ಕಿಟಕಿಗಳನ್ನೂ ಸಹ ಭದ್ರ ಪಡಿಸಿ ಮನೆಯಿಂದ ಯಾರೊಂದಿಗೂ ಮಾತನಾಡದಂತೆ ಎಚ್ಚರಿಕೆ ನೀಡಿದ್ದ.
ಮನೆಯೊಳಗೆ ಶೌಚಾಲಯ ಇಲ್ಲದಿದ್ದರೂ ಬಕೆಟ್ ಒಂದನ್ನು ಮನೆಯೊಳಗಿರಿಸಿ ಮಲಮೂತ್ರ ವಿಸರ್ಜಿಸಿ ರಾತ್ರಿ ಹೊರಗೆ ಸುರಿಯುತ್ತಿದ್ದ. ಸುಮಾರವರ ಸಂಬಂಧಿಕರೊಬ್ಬರಿಂದ ಅಮಾನವೀಯ ಪ್ರಕರಣ ಬೆಳಕಿಗೆ ಬಂದಿದೆ.

ವಿಷಯ ತಿಳಿದು ವಕೀಲರಾದ ಸಿದ್ದಪ್ಪಾಜಿ ಎಂಬುವರು ಹಾಗೂ ಸಾಂತ್ವನ ಕೇಂದ್ರದ ಜಯಶೀಲ ಎಎಸ್ ಐ ಸುಭಾನ್ ಇತರರ ತಂಡ ಸುಮಾ ಮನೆಗೆ ಭೇಟಿ ನೀಡಿದ್ದಾರೆ. ಘಟನೆ ಕುರಿತು ಯಾರಿಗಾದರೂ ತಿಳಿಸಿದರೆ ಕೊಲೆ ಮಾಡುವ ಬೆದರಿಕೆ ಹಾಕಿದ್ದ ಕ್ರೂರಿ ಸಣ್ಣಾಲಯ್ಯ.

ಬುಧವಾರ ರಾತ್ರಿ ಸುಮಾ ಮತ್ತು ಮಕ್ಕಳನ್ನು ಪೊಲೀಸರು ರಕ್ಷಣೆ ಮಾಡಿದ್ದಾರೆ. ಹಲವಾರು ಭಾರಿ ಗ್ರಾಮದಲ್ಲಿ ನ್ಯಾಯ ಪಂಚಾಯ್ತಿ ನಡೆದರೂ ತಪ್ಪು ತಿದ್ದಿ ಕೊಳ್ಳದ ಸಣ್ಣಾಲಯ್ಯ ತನ್ನ ವರ್ತನೆ ಮುಂದುವರೆಸುತ್ತಿದ್ದ. ಮನೆಯ ಬೀಗ ಮತ್ತು ಬಾಗಿಲು ಮುರಿದು ಮಹಿಳೆಯನ್ನು ರಕ್ಷಿಸಿ ಆಕೆಯ ಒಪ್ಪಿಗೆಯಂತೆ ತವರು ಮನೆಯಲ್ಲಿ ಪೊಲೀಸರು ಆಶ್ರಯ ಕೊಡಿಸಿದ್ದಾರೆ. ಈ ಸಂಬಂಧ ಹೆಚ್.ಡಿ.ಕೋಟೆ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

Font Awesome Icons

Leave a Reply

Your email address will not be published. Required fields are marked *