ಪೊಲೀಸರ ಅತಿಥಿಯಾದ ನಕಲಿ ಸ್ಕ್ವಾಡ್ ಆಫೀಸರ್

ಮೈಸೂರು: ಇದು ಸೂರ್ಯನಿಗೆ ಟಾರ್ಚ್ ಹಾಕಲು ಹೋದವರ ಕಥೆ. ಚುನಾವಣಾ ವಾಹನ ತಪಾಸಣೆ ಮಾಡುವ ಅಧಿಕಾರಿಗಳ ವಾಹನ ತಡೆದು ತಾವು ಪೊಲೀಸ್ ಅಧಿಕಾರಿಗಳು ವಾಹನ ತಪಾಸಣೆಗೆ ಬಂದಿದ್ದಾಗಿ ಹೇಳಿ ಹಣ ವಸೂಲಿ ಮಾಡಲು ಹೋಗಿ ಸಿಕ್ಕಿಹಾಕಿಕೊಂಡ ಘಟನೆ ಮೈಸೂರಿನಲ್ಲಿ ನಡೆದಿದ್ದು, ಆರೋಪಿಗಳ ಪೈಕಿ ಒಬ್ಬ ಸಿಕ್ಕಿಬಿದ್ದಿದ್ದರೆ, ಮತ್ತಿಬ್ಬರು ಪರಾರಿಯಾಗಿದ್ದು, ಅವರಿಗಾಗಿ ಶೋಧ ನಡೆಸಲಾಗುತ್ತಿದೆ.

ಮೈಸೂರಿನ ಯರಗನಹಳ್ಳಿ ನಿವಾಸಿ ಮಾದೇಗೌಡ ಅಲಿಯಾಸ್ ಮಧು ಬಂಧಿತ ಆರೋಪಿ. ಈತ ಇನ್ನಿಬ್ಬರ ಜತೆ ಸೇರಿ ಘಟನೆ ಮೈಸೂರಿನ ಆಲನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ರಿಂಗ್ ರಸ್ತೆಯಲ್ಲಿ ನಿಂತುಕೊಂಡು ರಸ್ತೆಯಲ್ಲಿ ಬರುವ ವಾಹನ ತಡೆದು ತಾವು ಫ್ಲೈಯಿಂಗ್ ಆಫೀಸರ್ ಆಗಿದ್ದು, ಚುನಾವಣೆ ಹಿನ್ನಲೆಯಲ್ಲಿ ವಾಹನಗಳ ತಪಾಸಣೆ ಮಾಡುತ್ತಿದ್ದು, ಹಣವಿದ್ದರೆ ನೀವಾಗಿಯೇ ಕೊಟ್ಟು ಹೋಗಿ ಇಲ್ಲಾಂದ್ರೆ ಹುಟ್ಟಿಲ್ಲ ಅನ್ನಿಸಿ ಬಿಡುತ್ತೇವೆ ಎಂದು ಬೆದರಿಕೆ ಹಾಕುತ್ತಿದ್ದರು.

ಈ ನಡುವೆ ಏ.4 ರ ಮಧ್ಯ ರಾತ್ರಿ ನಿಜವಾದ ಫ್ಲೈಯಿಂಗ್ ಸ್ಕ್ವಾಡ್ 3 ರ ತಂಡ ಅದೇ ಮಾರ್ಗವಾಗಿ ಕಾರಿನಲ್ಲಿ ಬಂದಿದೆ ಇದರಲ್ಲಿ ಪಿಡಬ್ಲ್ಯೂಡಿ  ಎಇ ಕಾರ್ಯಪ್ಪ, ಎಸ್  ಡಿಎ ಮಹದೇವ್, ಚಾಲಕ ಲಿಖಿನ್ ಹಾಗೂ ಮೇಟಗಳ್ಳಿ ಠಾಣೆಯ ಪೇದೆ ಶಶಿಕುಮಾರ್ ಕರ್ತವ್ಯದಲ್ಲಿದ್ದರು. ಕಾರು ಸಾತಗಳ್ಳಿ ಬಸ್ ಡಿಪೋ ಕಡೆಯಿಂದ ದೇವೇಗೌಡ ಸರ್ಕಲ್ ನತ್ತ ಬರುತ್ತಿದ್ದ ವೇಳೆ  ನಕಲಿ ಸ್ಕ್ವಾಡ್ ವೇಷದಲ್ಲಿದ್ದ ಮಾದೇಗೌಡ ಅಲಿಯಾಸ್ ಮಧು ತಂಡ ಕಾರನ್ನು ಅಡ್ಡಗಟ್ಟಿ ನಿಲ್ಲಿಸಿದೆ.

ಬಳಿಕ ಹತ್ತಿರ ಬಂದು  ನಾವು ಪೊಲೀಸರ ಅಣತಿಯಂತೆ ವಾಹನಗಳನ್ನ ತಪಾಸಣೆ ಮಾಡುತ್ತಿದ್ದೇವೆ.  ಹಣ ಇದ್ದರೆ ಕೊಟ್ಟುಬಿಡಿ ಎಂದು ಧಮ್ಕಿ ಹಾಕಿದ್ದಾರೆ. ಹಣ ಕೊಡದಿದ್ದಲ್ಲಿ ಜೀವಸಹಿತ ಮುಂದೆ ಹೋಗಲು ಬಿಡುವುದಿಲ್ಲ ಎಂದು ಬೆದರಿಕೆಯನ್ನೂ ಹಾಕಿದ್ದಾರೆ. ಈ ವೇಳೆ ಕಾರಿನ ಹಿಂದಿನ ಸೀಟ್ ನಲ್ಲಿ ಕುಳಿತಿದ್ದ ಪೇದೆ ಶಶಿಕುಮಾರ್ ಇಳಿದು ಬಂದು ಯಾವ ಠಾಣೆ ಪೊಲೀಸರು ನಿಮ್ಮನ್ನು ಕಳಿಸಿದ್ದಾರೆ ಎಂದು ಪ್ರಶ್ನಿಸಿದಾಗ ಅವರು ಓಡಿಹೋಗಲು ಯತ್ನಿಸಿದ್ದಾರೆ. ಈ ಸಂದರ್ಭ ಮಾದೇಗೌಡನನ್ನು ಹಿಡಿಯಲಾಗಿದ್ದು, ಉಳಿದವರು ಓಡಿ ಹೋಗಿದ್ದಾರೆ.

ಆರೋಪಿ ಮಾದೇಗೌಡನನ್ನು ಆಲನಹಳ್ಳಿ ಠಾಣೆ ಪೊಲೀಸರ ವಶಕ್ಕೆ ನೀಡಿ ಪ್ರಕರಣ ದಾಖಲಿಸಿದ್ದಾರೆ. ಇನ್ನು ಪರಾರಿಯಾಗಿರುವ ಇನ್ನಿಬ್ಬರಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.

Font Awesome Icons

Leave a Reply

Your email address will not be published. Required fields are marked *