ಚಾಮರಾಜನಗರ: ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶಕ್ಕೆ ಹೊಂದಿಕೊಂಡಿರುವ ಕಾಡಂಚಿನ ಗ್ರಾಮಗಳಲ್ಲಿ ಆಂಬುಲೆನ್ಸ್ ಸೇವೆಯಿಲ್ಲದೆ ತುರ್ತು ಪರಿಸ್ಥಿತಿಯಲ್ಲಿ ಜನರು ಪ್ರಾಣವನ್ನೇ ಕಳೆದು ಕೊಳ್ಳಬೇಕಾದ ಪರಿಸ್ಥಿತಿ ಎದುರಾಗುತ್ತಿತ್ತು. ಇದನ್ನು ಮನಗಂಡ ಅರಣ್ಯ ಇಲಾಖೆ ಎರಡು ಆಂಬುಲೆನ್ಸ್ ಗಳನ್ನು ನೀಡಿದ್ದು ಇದರಿಂದ ಗಿರಿಜನರ ಕಾಲೋನಿಗಳು ಹಾಗೂ ಕಾಡಂಚಿನ ಪ್ರದೇಶಗಳ ಜನರು ನೆಮ್ಮದಿಯುಸಿರು ಬಿಟ್ಟಿದ್ದಾರೆ.
ಈಗಾಗಲೇ ಅರಣ್ಯ ಇಲಾಖೆ ತುರ್ತು ಎರಡು ಆಂಬುಲೆನ್ಸ್‌ಗಳನ್ನು ಖರೀದಿಸಿದ್ದು ಶೀಘ್ರದಲ್ಲೇ ಸೇವೆಗೆ ಚಾಲನೆ ನೀಡಲಿದ್ದು, ಬಂಡೀಪುರ ಹುಲಿ ಸಂರಕ್ಷಣಾ ಪ್ರತಿಷ್ಠಾನದ ನಿಧಿಯನ್ನು ಬಳಸಿಕೊಂಡು ಈ ಸೇವೆ ಆರಂಭಿಸಲಾಗುತ್ತಿದೆ. ಬಂಡೀಪುರ ವ್ಯಾಪ್ತಿಯಲ್ಲಿರುವ ಬುಡಕಟ್ಟು ಜನಾಂಗದವರ ಕಾಲೊನಿಗಳು, ಕಾಡಂಚಿನ ಗ್ರಾಮಗಳಿಗೆ ಸಮರ್ಪಕ ಸಾರಿಗೆ ವ್ಯವಸ್ಥೆ ಇಲ್ಲ.
ಆಸ್ಪತ್ರೆ ಮತ್ತು ಹೆರಿಗೆಯಂತಹ ತುರ್ತುಸ್ಥಿತಿಯಲ್ಲಿ ಆಟೊರಿಕ್ಷಾಗಳಂತಹ ವಾಹನಗಳನ್ನು ಅವಲಂಬಿಸ ಬೇಕಾಗಿದೆ ತುರ್ತು ಸಮಯದಲ್ಲಿ ಗುಂಡ್ಲುಪೇಟೆಯಿಂದ ಆಂಬುಲೆನ್ಸ್‌ಗಳು ಬರಬೇಕು. ಈ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಲು ಆಂಬುಲೆನ್ಸ್ ಸೇವೆ ಆರಂಭಿಸುವ ಯೋಜನೆ ರೂಪಿಸಲಾಗಿದೆ. ಎರಡು ಆಂಬುಲೆನ್ಸ್‌ಗಳಿಗೆ ತಲಾ 12 ಲಕ್ಷ ರೂ ವೆಚ್ಚವಾಗಿದೆ. ಇವುಗಳನ್ನು ಬಳಸಲು ಸಹಾಯವಾಣಿಯನ್ನು ಕೂಡ ಆರಂಭಿಸಲಾಗಿದೆ.
ಬಂಡೀಪುರ ಭಾಗಕ್ಕೆ ಒಂದು, ಮದ್ದೂರು ಭಾಗಕ್ಕೆ ಇನ್ನೊಂದು ವಾಹನ ಬಳಸಲಾಗುವುದು. ಗಿರಿಜನರು, ಕಾಡಂಚಿನ ಗ್ರಾಮಗಳ ಎಲ್ಲ ಸಾರ್ವಜನಿಕರು ಇದರ ಸೌಲಭ್ಯ ಪಡೆಯಬಹುದು. ಎರಡೂ ಆಂಬುಲೆನ್ಸ್‌ಗಳ ನಿರ್ವಹಣೆಗೆ ತಿಂಗಳಿಗೆ 1.20 ಲಕ್ಷ ರೂ ವೆಚ್ಚವಾಗಲಿದೆ. ನಮ್ಮ ಬಂಡೀಪುರ ಹುಲಿ ಸಂರಕ್ಷಣಾ ಪ್ರತಿಷ್ಠಾನದ ನಿಧಿಯಿಂದ ಅದನ್ನು ಭರಿಸಲಾಗುವುದು ಎಂದು ಬಂಡೀಪುರ ಹುಲಿ ಯೋಜನೆ ನಿರ್ದೇಶಕ ಪಿ.ರಮೇಶ್‌ಕುಮಾರ್ ತಿಳಿಸಿದ್ದಾರೆ.
ರಾತ್ರಿಯ ಸಂದರ್ಭ ತುರ್ತು ಪರಿಸ್ಥಿತಿ ಎದುರಾದಾಗ ಕಾಡಂಚಿನ ಗ್ರಾಮಗಳಿಗೆ ಇಲಾಖೆಯ ವಾಹನಗಳನ್ನು ಹಲವು ಬಾರಿ ಕಳುಹಿಸಿದ್ದೇವೆ. ಕಾಡಂಚಿನ ಜನರು ಕೂಡ ಆಂಬುಲೆನ್ಸ್ ಸೇವೆಗೆ ಬೇಡಿಕೆ ಇಟ್ಟಿದ್ದರು. ನಮ್ಮ ಅರಣ್ಯದಲ್ಲಿ ರಾಷ್ಟ್ರೀಯ ಹೆದ್ದಾರಿ ಹಾದು ಹೋಗಿರುವುದರಿಂದ ಅನೇಕ ಸಲ ಕಾಡು ಪ್ರಾಣಿಗಳಿಂದ ಮತ್ತು ಸ್ವಯಂ ತಪ್ಪಿನಿಂದಾಗಿ ಅಪಘಾತಗಳು ಸಂಭವಿಸುತ್ತವೆ. ಇಂತಹ ಸಮಯದಲ್ಲಿ ಆಂಬುಲೆನ್ಸ್‌ಗಳಿಂದ ಜನರಿಗೆ ಅನುಕೂಲವಾಗಲಿದೆ ಎಂದು ಹೇಳಿದ್ದಾರೆ.
ಬಂಡೀಪುರ ಪ್ರತಿಷ್ಠಾನದ ನಿಧಿಯಿಂದ ಬಳಕೆ ಬಂಡೀಪುರ, ಮದ್ದೂರು ಭಾಗದಲ್ಲಿ ನಿಯೋಜನೆ ಆಂಬುಲೆನ್ಸ್ ಸೇವೆಗೆ ಸಹಾಯವಾಣಿ ನಂಬರ್ ಆರಂಭಿಸಲಾಗುವುದು ಎಂದಿರುವ ಪಿ ರಮೇಶ್‌ಕುಮಾರ್ ಬಂಡೀಪುರ ಹುಲಿ ಯೋಜನೆ ನಿರ್ದೇಶಕ ಆಂಬುಲೆನ್ಸ್‌ಗಳಿಗೆ ಸಿಬ್ಬಂದಿ ನೇಮಕ ಮಾಡಿಕೊಳ್ಳುವ ಜವಾಬ್ದಾರಿಯನ್ನು ಖಾಸಗಿಯವರಿಗೆ ವಹಿಸಿ ಆ ವೆಚ್ಚವನ್ನು ಭರಿಸಲಾಗುವುದು ಎಂದು ತಿಳಿಸಿದ್ದಾರೆ.