ಬಂಡೆಪ್ಪ ಖಾಶೆಂಪುರ್ – News Karnataka Kannada (ನ್ಯೂಸ್ ಕರ್ನಾಟಕ ಕನ್ನಡ)

ಬೀದರ್ : ಜೆಡಿಎಸ್, ಬಿಜೆಪಿ ಒಂದಾಗಿರುವುದು ರಾಜ್ಯದಲ್ಲಿ ಸಂಚಲನ ಮೂಡಿಸಿದೆ. ಈಗಾಗಲೇ ಮಂಡ್ಯ, ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರಗಳಲ್ಲಿ ನಡೆದ ಕಾರ್ಯಕ್ರಮದಲ್ಲಿ ಸೇರಿದ್ದ ಜನರನ್ನು ನೋಡಿ ಬೇರೆ ಪಕ್ಷದವರು ಆಶ್ಚರ್ಯ ಪಡುವಂತಾಗಿದೆ. ಆ ರೀತಿಯ ಜನ ಬೆಂಬಲ ನಮ್ಮ ಮೈತ್ರಿಗೆ ಸಿಕ್ಕಿದೆ ಎಂದು ಮಾಜಿ ಸಚಿವರು, ಜೆಡಿಎಸ್ ಪಕ್ಷದ ಹಿರಿಯ ನಾಯಕರಾಗಿರುವ ಬಂಡೆಪ್ಪ ಖಾಶೆಂಪುರ್ ರವರು ಹೇಳಿದರು.

ಬೀದರ್ ನಗರದಲ್ಲಿರುವ ಕೇಂದ್ರ ಸಚಿವ ಭಗವಂತ ಖೂಬಾರವರ ನಿವಾಸದಲ್ಲಿ ನಡೆದ ಬಿಜೆಪಿ ಜೆಡಿಎಸ್ ಪಕ್ಷಗಳ ಮುಖಂಡರ ಸಮನ್ವಯ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಎರಡು ಪಕ್ಷಗಳ ನಾಯಕರನ್ನು ಒಂದುಕಡೆ ಸೇರಿಸಿರುವುದು ಒಳ್ಳೆಯ ಬೆಳವಣಿಗೆಯಾಗಿದೆ‌. ಇದು ನಮಗೆ ದೊಡ್ಡ ಶಕ್ತಿಯೊಂದಿಗೆ ದೊಡ್ಡಮಟ್ಟದ ಸಂದೇಶವನ್ನು ನೀಡುತ್ತದೆ ಎಂದರು.

ನಮ್ಮ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿಯಾಗಿರುವ ಭಗವಂತ ಖೂಬಾರವರನ್ನು ಗೆಲ್ಲಿಸುವಂತ ಕೆಲಸವನ್ನು ನಾವೆಲ್ಲರೂ ಸೇರಿ ಮಾಡುತ್ತೇವೆ. ನಾವು ಈಗಾಗಲೇ ಮೂರನೇ ಬಾರಿಗೆ ಸಭೆ ಸೇರಿದ್ದೇವೆ. ಮುಂದಿನ ದಿನಗಳಲ್ಲಿ ವಿಧಾನಸಭಾ ಕ್ಷೇತ್ರವಾರು ಸಭೆಗಳನ್ನು ನಡೆಸುತ್ತೇವೆ ಎಂದು ಬಂಡೆಪ್ಪ ಖಾಶೆಂಪುರ್ ರವರು ತಿಳಿಸಿದರು.

ಬಿಜೆಪಿ ಜೊತೆಗಿನ ಮೈತ್ರಿ ನ್ಯಾಚುರಲ್ ಅಲೈಯನ್ಸ್ ಇದ್ದಂತಿದೆ:

ನಾನು ಬಿಜೆಪಿ ಜೊತೆಗಿನ ಮೈತ್ರಿ ಹಾಗೂ ಕಾಂಗ್ರೆಸ್ ಜೊತೆಗಿನ ಮೈತ್ರಿ ಎರಡು ಸಂದರ್ಭಗಳಲ್ಲಿ ಕೂಡ ಮಂತ್ರಿಯಾಗಿ ಕೆಲಸ ಮಾಡಿದ್ದೇನೆ. ನಮಗೆ ಬಿಜೆಪಿ ಜೊತೆಗಿನ ಮೈತ್ರಿಯ ಸಂದರ್ಭದಲ್ಲಿ ರಾಜ್ಯದಲ್ಲಿ ಉತ್ತಮ ಪ್ರೋತ್ಸಾಹ, ಬೆಂಬಲ ಸಿಕ್ಕಿದೆ. ಬಿಜೆಪಿ ಜೊತೆಗಿನ ಮೈತ್ರಿ ನ್ಯಾಚುರಲ್ ಅಲೈಯನ್ಸ್ ಇದ್ದಂತಿದೆ. ಈ ಮೈತ್ರಿಗೆ ನಮ್ಮ ಪಕ್ಷದ ಅಲ್ಪಸಂಖ್ಯಾತ ಸಮುದಾಯದ ಮುಖಂಡರು ಕೂಡ ಸಂತಸ ವ್ಯಕ್ತಪಡಿಸುತ್ತಿದ್ದಾರೆ. ನಾವು ನಮ್ಮ ಜೆಡಿಎಸ್ ಪಕ್ಷದಿಂದ ಬೂತ್ ಮಟ್ಟದಿಂದ ನಮ್ಮ ಮತಗಳನ್ನು ಬಿಜೆಪಿಗೆ ಕೊಡಿಸುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡುತ್ತೇವೆ ಎಂದು ಬಂಡೆಪ್ಪ ಖಾಶೆಂಪುರ್ ರವರು ಹೇಳಿದರು.

ದೇವೇಗೌಡರ ಸೂಚನೆ ಪಾಲಿಸೋಣ:

ಮೋದಿಯವರ ನೇತೃತ್ವದಲ್ಲಿ ಮತ್ತೆ ಭಾರತ ಮುನ್ನಡೆಸಬೇಕಾಗಿದೆ. ಭಾರತ ಮತ್ತಷ್ಟು ಬಲಿಷ್ಠವಾಗಬೇಕಾಗಿದೆ. ವಿಶ್ವಕ್ಕೆ ಮಾದರಿಯಾಗಿ ಸಾಗಬೇಕಾಗಿದೆ. ಆ ನಿಟ್ಟಿನಲ್ಲಿ ಭಾರತಕ್ಕೆ ಮೋದಿ ಮತ್ತೊಮ್ಮೆ ಪ್ರಧಾನಮಂತ್ರಿ ಆಗಬೇಕು. ನಾವೆಲ್ಲರೂ ಮೋದಿಯವರಿಗೆ ಬೆಂಬಲ ಕೊಡಬೇಕು ಎಂದು ಈಗಾಗಲೇ ಹೆಚ್.ಡಿ ದೇವೇಗೌಡರು ಜೆಡಿಎಸ್ ಪಕ್ಷದ ಶಾಸಕರಿಗೆ, ಮಾಜಿ ಶಾಸಕರಿಗೆ, ಮುಖಂಡರಿಗೆ, ಕಾರ್ಯಕರ್ತರಿಗೆ ಸೂಚನೆ ನೀಡಿದ್ದಾರೆ.

ಈ ಸಂದರ್ಭದಲ್ಲಿ ವಿಪಕ್ಷ (ಪ್ರತಿಪಕ್ಷ) ನಾಯಕರಾದ ಆರ್ ಅಶೋಕ್, ಕೇಂದ್ರ ಸಚಿವರು, ಬೀದರ್ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿಯಾಗಿರುವ ಭಗವಂತ ಖೂಬಾ, ಜಿಲ್ಲೆಯ ಶಾಸಕರಾದ ಡಾ. ಶೈಲೇಂದ್ರ ಬೆಲ್ದಾಳೆ, ಶರಣು ಸಲಗಾರ್, ಸಿದ್ದು ಪಾಟೀಲ್, ವಿಧಾನ ಪರಿಷತ್ ಸದಸ್ಯರಾದ‌ ರಘುನಾಥರಾವ್ ಮಲ್ಕಾಪೂರೆ, ಬಿಜೆಪಿ ಜಿಲ್ಲಾಧ್ಯಕ್ಷರಾದ ಸೋಮನಾಥ್ ಪಾಟೀಲ್, ಮಲ್ಲಿಕಾರ್ಜುನ ಖೂಬಾ, ಮಹೇಶ್ವರಿ ವಾಲಿ, ಸಜ್ಜದ್ ಸಾಹೇಬ್, ಎಂ.ಜಿ ಮೂಳೆರವರು ಸೇರಿದಂತೆ ಬೀದರ್ ಲೋಕಸಭಾ ಕ್ಷೇತ್ರದ ಮುಖಂಡರು, ಕಾರ್ಯಕರ್ತರು ಇದ್ದರು.

Font Awesome Icons

Leave a Reply

Your email address will not be published. Required fields are marked *